ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಶಿಫಾರಸ್ಸು

Update: 2018-12-18 17:42 GMT

ಬೆಳಗಾವಿ, ಡಿ.18: ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪಡೆದು ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳುವ ಮೂಲಕ ವಿವಿಧ ಸೌಲಭ್ಯಗಳಿಗೆ ಅರ್ಹರಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡವರನ್ನು ವಂಚಿಸುತ್ತಿರುವವರ ವಿರುದ್ಧ ಶೀಘ್ರಗತಿಯಲ್ಲಿ ತನಿಖೆ ಮಾಡಿ, ಕ್ರಿಮಿನಲ್ ಮೊಕದ್ದಮೆ ಹೂಡಿ, ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಬೇಕೆಂದು ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಶಿಫಾರಸ್ಸು ಮಾಡಿದೆ.

ಮಂಗಳವಾರ ವಿಧಾನಸಭೆಯಲ್ಲಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಅಧ್ಯಕ್ಷತೆಯ ಸಮಿತಿಯು ಮಂಡಿಸಿದ ಹದಿನೈದನೆ ವಿಧಾನಸಭೆಯ ಮೊದಲ ವರದಿಯಲ್ಲಿ, ಇಂತಹ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲು ಅಧಿಕಾರಿಗಳು ವಿಳಂಬ ಹಾಗೂ ನಿರ್ಲಕ್ಷ್ಯತೆ ತೋರಿಸಿದಲ್ಲಿ, ದೌರ್ಜನ್ಯ ಪ್ರತಿಬಂಧ ತಿದ್ದುಪಡಿ ಅಧಿನಿಯಮ ಸೆಕ್ಷನ್ 4ರಡಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ ಶೀಘ್ರ ತನಿಖೆ ನಡೆಸಿ ಶಿಕ್ಷೆಯನ್ನು ಪ್ರಕಟಿಸುವಂತೆ ಕ್ರಮ ಕೈಗೊಳ್ಳುವಂತೆಯೂ ಶಿಫಾರಸ್ಸು ಮಾಡಲಾಗಿದೆ.

ದೌರ್ಜನ್ಯ ಮತ್ತು ಕೊಲೆ ಪ್ರಕರಣಗಳಲ್ಲಿ ಅವರ ಕುಟುಂಬದವರಿಗೆ, ಅವಲಂಬಿತರಿಗೆ ಉದ್ಯೋಗ ನೀಡಲು ನೇಮಕಾತಿಗಳಲ್ಲಿ ಆದ್ಯತೆ ನೀಡಬೇಕು. ರಾಜ್ಯದಲ್ಲಿ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಕೇವಲ ಶೇ.6ರಷ್ಟು ಮಾತ್ರ ಇದೆ. ತನಿಖಾಧಿಕಾರಿ ಮತ್ತು ಇತರೆ ಅಧಿಕಾರಿಗಳು ಸಮರ್ಪಕವಾಗಿ ಪ್ರಾಮಾಣಿಕತೆಯಿಂದ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು. ಜೊತೆಗೆ, ವಿಶೇಷ ನ್ಯಾಯಾಲಯಗಳನ್ನು ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಬೇಕೆಂದು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜನಾಂಗದವರ ವಿರುದ್ಧ ನಡೆಯುವ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಶೇಷ ಆರಕ್ಷಕ ಠಾಣೆಗಳನ್ನು ತೆರೆಯುವುದು ಸೂಕ್ತವಾಗಿರುತ್ತದೆ ಎಂದು ಸಮಿತಿ ಶಿಫಾರಸ್ಸು ಮಾಡಿದೆ.

ಸರಕಾರಿ ಡಿ ಮತ್ತು ಸಿ ವೃಂದದ ನೌಕರರ ಮಕ್ಕಳಿಗೂ ಅನುಕೂಲವಾಗುವಂತೆ ವಿದ್ಯಾರ್ಥಿ ವೇತನ ಪಡೆಯಲು ವಾರ್ಷಿಕ ಆದಾಯದ ಮಿತಿಯನ್ನು ಹೆಚ್ಚಿಸಬೇಕು. ಹಾಗೆಯೇ ವಿದೇಶಗಳಲ್ಲಿ ವಿದ್ಯಾಭ್ಯಾಸ ಮಾಡಬಯಸುವುದಕ್ಕೂ ವಾರ್ಷಿಕ ಆದಾಯ ಮಿತಿ ಹೆಚ್ಚಿಸಬೇಕು ಎಂದು ಸಮಿತಿ ಶಿಫಾರಸ್ಸು ಮಾಡಿದೆ.

ಸರಕಾರದ ಗೋಮಾಳ, ಗ್ರಾಮಠಾಣ ಮತ್ತು ಅರಣ್ಯ ಜಮೀನುಗಳಲ್ಲಿ ವಾಸ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಾಂಗದವರಿಗೆ ವಿಶೇಷ ಪ್ರಕರಣವೆಂದು ಪರಿಗಣಿಸಿ, ನಿವೇಶನಗಳನ್ನು ಒದಗಿಸಬೇಕು. ರಾಜ್ಯದ ಎಲ್ಲ ಶಾಲಾ ಮಕ್ಕಳಿಗೆ ಲಿಡಕರ್ ಸಂಸ್ಥೆಯಿಂದಲೇ ಶೂ ಮತ್ತು ಬೆಲ್ಟ್ ಗಳನ್ನು ಕಡ್ಡಾಯವಾಗಿ ಖರೀದಿ ಮಾಡಲು ಇಲಾಖೆಯಿಂದ ಸುತ್ತೋಲೆ ಹೊರಡಿಬೇಕು ಎಂದು ಸಮಿತಿ ಶಿಫಾರಸ್ಸು ಮಾಡಿದೆ.

ರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕ ಅಭಿವೃದ್ಧಿ ನಿಗಮ(ಎನ್‍ಎಫ್‍ಡಿಸಿ) ಮಾದರಿಯಲ್ಲಿಯೇ ರಾಜ್ಯದಲ್ಲಿಯೂ ನಿಗಮ ಸ್ಥಾಪಿಸಿ, ಫಲಾನುಭವಿಗಳಿಗೆ ನೇರ ಸಾಲ ವಿತರಿಸಲು ಕ್ರಮ ಕೈಗೊಳ್ಳಬೇಕು. ಬಗರ್ ಹುಕುಂ ಕಾನೂನಿನ ರೀತಿ ಮಂಜೂರಾತಿಯಲ್ಲಿ ಮೀಸಲಾತಿ ನೀಡುವುದರ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಜನಾಂಗಕ್ಕೆ ಭೂಮಿಯನ್ನು ಅಕ್ರಮ-ಸಕ್ರಮದಡಿ ನೀಡಬೇಕೆಂದು ಸಮಿತಿ ಶಿಫಾರಸ್ಸು ಮಾಡಿದೆ.

ದೇವದಾಸಿ ಯುವತಿಯರಿಗೆ ಬಡ್ಡಿ ರಹಿತ ಸಾಲವನ್ನು ನೀಡಲು, ಸೌಲಭ್ಯಗಳನ್ನು ದುಪ್ಪಟ್ಟು ಮಾಡಲು ಹಾಗೂ ದೇವದಾಸಿ ಮಹಿಳೆಯರನ್ನು ಮದುವೆಯಾಗುವಂತಹವರಿಗೆ ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ನೀಡಬೇಕೆಂದು ಮತ್ತು ಸರಕಾರಿ ಉದ್ಯೋಗದಲ್ಲಿ ಪ್ರತ್ಯೇಕ ಮೀಸಲಾತಿ ನಿಗದಿಪಡಿಸಬೇಕೆಂದು ಸಮಿತಿ ಶಿಫಾರಸ್ಸು ಮಾಡಿದೆ.

ಸಹಕಾರ ಸಂಘಗಳು ಮತ್ತು ಬ್ಯಾಂಕುಗಳಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಸ್ಥಳೀಯ ಸಂಸ್ಥೆಗಳ ಮಾದರಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗದವರಿಗೆ ಮೀಸಲಾತಿ ಕಲ್ಪಿಸಲು ಸಹಕಾರ ಕಾನೂನಿಗೆ ತಿದ್ದುಪಡಿ ತರುವಂತೆ ಸಮಿತಿ ಶಿಫಾರಸ್ಸು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News