ಬಡವರಿಗೂ ತಿನ್ನಲು ನೀಡುವಂತಹ ಸಂಸ್ಕಾರ ಕಲಿಸಿ: ರಾಜ್ಯಪಾಲ ವಜುಭಾಯಿ ವಾಲಾ

Update: 2018-12-18 18:50 GMT

ಶಿವಮೊಗ್ಗ, ಡಿ. 18: ಕೇವಲ ತಾವು ತಿನ್ನುವುದಕ್ಕೆ ಗಮನ ನೀಡದೆ, ಬಡವರಿಗೂ ತಿನ್ನಲು ನೀಡಬೇಕು. ಅದರಿಂದ ಆನಂದ ಪಡುವಂತಹ ಸಂಸ್ಕಾರವನ್ನು ನಮ್ಮ ಮಕ್ಕಳಿಗೆ ಕಲಿಸಬೇಕು ಎಂದು ರಾಜ್ಯಪಾಲ ವಜುಭಾಯಿ ರುಡಾಭಾಯಿ ವಾಲಾರವರು ಪೋಷಕರಿಗೆ ಕರೆ ನೀಡಿದ್ದಾರೆ.

ನಗರದ ಹೊರವಲಯ ಪಿಇಎಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರೇರಣಾ ಕನ್ವೆನ್ಷನ್ ಹಾಲ್ ಉದ್ಘಾಟಿಸಿದ ನಂತರ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು, 'ಬರೀ ಸ್ವಾರ್ಥಕ್ಕಾಗಿ ಜೀವನ ನಡೆಸದೆ ರಾಷ್ಟ್ರಕ್ಕಾಗಿ ತ್ಯಾಗ ಮಾಡುವ ಗುಣ ಬೆಳೆಸಬೇಕು' ಎಂದರು. 

ಸುಶಿಕ್ಷಿತರು ಇರುವ ದೇಶ ಮಾತ್ರ ವಿಕಾಸವಾಗಲು ಸಾಧ್ಯ. ಆದ್ದರಿಂದ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಆಗ ಭಾರತ ವಿಶ್ವ ಗುರು ಆಗುವಲ್ಲಿ ಎರಡು ಮಾತಿಲ್ಲ. ಭಾರತದಲ್ಲಿ ಹೆಚ್ಚು ಬುದ್ದಿವಂತರು ಇದ್ದಾರೆ. ಆದರೆ ಇಂತಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹದ ಅಗತ್ಯವಿದೆ ಎಂದು ತಿಳಿಸಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣದ ಸೌಲಭ್ಯಗಳು ಸಿಗುತ್ತಿಲ್ಲ. ಇದಕ್ಕಾಗಿ ಸಮಾಜದ ಸಹಕಾರದ ಅಗತ್ಯವಿದ್ದು, ಪ್ರತಿಯೋಬ್ಬರು ಒಬ್ಬೊಬ್ಬ ವಿದ್ಯಾರ್ಥಿಯ ಸ್ನಾತಕೋತ್ತರ ಪದವಿವರೆಗಿನ ಶಿಕ್ಷಣದ ಖರ್ಚನ್ನು ಭರಿಸಲು ಮುಂದೆ ಬರಬೇಕು ಎಂದು ಸಲಹೆ ನೀಡಿದರು. 

ಭಾರತದ ಬುದ್ದಿವಂತರ ಯುವ ಪಡೆ ವಿಶ್ವದ ವಿವಿಧ ದೇಶಗಳ ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದೆ. ಅಮೆರಿಕಾದ ನಾಸಾಗೆ ಸರಿಸಮಾನವಾಗಿ ಭಾರತದ ಇಸ್ರೋ ಸಾಧನೆ ಮಾಡಿದೆ. ಸ್ವದೇಶಿ ವಿಮಾನ ತೇಜಸ್ ಉತ್ಪಾದನೆ ಮಾಡಲಾಗಿದೆ. ಭಾರತ ಇಷ್ಟೊಂದು ಶಕ್ತಿ ಹೊಂದಲು ಶಿಕ್ಷಣವೇ ಮುಖ್ಯ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು. 

ಸರ್ಕಾರದಿಂದ ನೀಡುವ ಶಿಕ್ಷಣಕ್ಕೆ ಮಿತಿ ಇರುತ್ತದೆ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡುತ್ತಿವೆ. ಈ ನಿಟ್ಟಿನಲ್ಲಿ ಪಿಇಎಸ್ ಬೆಂಗಳೂರು, ಆಂಧ್ರಪ್ರದೇಶ, ಶಿವಮೊಗ್ಗದಲ್ಲಿ ಉತ್ತಮ ಸಂಸ್ಥೆಯನ್ನು ಹುಟ್ಟು ಹಾಕಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವುದು ಸ್ವಾಗತಾರ್ಹ ಸಂಗತಿಯಾಗಿದೆ ಎಂದರು. 

ಸಮಾರಂಭದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಪಿಇಎಸ್ ಶಿಕ್ಷಣ ಸಂಸ್ಥೆಯ ಛೇರ್ಮನ್ ಪ್ರೋ. ಎಂ. ಆರ್. ದೊರೆಸ್ವಾಮಿ, ಪಿಇಎಸ್ ಟ್ರಸ್ಟಿಯೂ ಆದ ಸಂಸದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಅರುಣಾದೇವಿಯವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News