ಬುಲಂದ್‍ ಶಹರ್: ಗೋಹತ್ಯೆ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ನಾಲ್ವರು ಅಮಾಯಕರು ಎಂದ ಪೊಲೀಸರು

Update: 2018-12-19 08:52 GMT

ಲಕ್ನೋ, ಡಿ.19: ಉತ್ತರ ಪ್ರದೇಶದ ಬುಲಂದ್‍ಶಹರ್ ನಲ್ಲಿ ಗೋಹತ್ಯೆ ವದಂತಿಯೊಂದು ಹಿಂಸಾಚಾರಕ್ಕೆ ಕಾರಣವಾಗಿ ಒಬ್ಬ ಪೊಲೀಸ್ ಅಧಿಕಾರಿ ಹಾಗೂ ಯುವಕನ ಹತ್ಯೆಯಲ್ಲಿ ಪರ್ಯವಸಾನಗೊಂಡ ಎರಡು ವಾರಗಳ ನಂತರ ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ ಗೋ ಹತ್ಯೆ ಆರೋಪದ ಮೇಲೆ ಬಂಧಿಸಿರುವ ನಾಲ್ಕು ಮಂದಿ `ನಿರಪರಾಧಿಗಳು' ಎಂದು ಪೊಲೀಸರು ಹೇಳಿದ್ದಾರೆ. ಬಂಧಿತರ ಬಿಡುಗಡೆಗಾಗಿ ಸದ್ಯದಲ್ಲಿಯೇ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದ್ದಾರೆ. ಮಂಗಳವಾರ ಗೋಹತ್ಯೆಗೆ ಸಂಬಂಧಿಸಿದಂತೆ ಮತ್ತೆ ಮೂವರನ್ನು ಬಂಧಿಸಿದ ನಂತರ ಈ ಬೆಳವಣಿಗೆ ನಡೆದಿದೆ.

ಆದರೆ ಪೊಲೀಸ್ ಅಧಿಕಾರಿಯ ಹತ್ಯೆ ಪ್ರಕರಣದ ಶಂಕಿತ ಪ್ರಮುಖ ಆರೋಪಿ, ಬಜರಂಗದಳದ ಯೋಗೇಶ್ ರಾಜ್ ನನ್ನು ಪೊಲೀಸರು ಇನ್ನೂ ಬಂಧಿಸಿಲ್ಲ. ಯೋಗೇಶ್ ನೀಡಿದ ದೂರಿನಂತೆ ಸರ್ಫುದ್ದೀನ್, ಸಾಜಿದ್, ಆಸಿಫ್ ಹಾಗೂ ನನ್ಹೆ ಎಂಬವರನ್ನು ಪೊಲೀಸರು ಈ ಹಿಂದೆ ಪೊಲೀಸರು ಬಂಧಿಸಿದ್ದರು. ಪೊಲೀಸರು ಇದೀಗ ಕ್ಲೀನ್ ಚಿಟ್ ನೀಡಿರುವ ನಾಲ್ವರಲ್ಲಿ ಇಬ್ಬರು ಸೇರಿದಂತೆ ಏಳು ಮಂದಿ ಗೋಹತ್ಯೆ ನಡೆಸಿದ್ದರೆಂದು ಆತ ಆರೋಪಿಸಿದ್ದ.

ಈ ಹಿಂದೆ ಬಂಧನಕ್ಕೊಳಗಾದ ಎಲ್ಲಾ ನಾಲ್ಕು ಮಂದಿ ಹೊರ ನೋಟಕ್ಕೆ ನಿರಪರಾಧಿಗಳು ಎಂದು ತಿಳಿದು ಬಂದಿದ್ದು ಇತರ ವಿಚಾರಗಳನ್ನು ದೃಢೀಕರಿಸಿದ ನಂತರ ಅವರ ಬಿಡುಗಡೆ ಕೋರಿ ಕೋರ್ಟಿಗೆ ಅಪೀಲು ಸಲ್ಲಿಸಲಾಗುವುದು ಎಂದು ಬುಲಂದ್ ‍ಶಹರ್ ಎಸ್ ‍ಎಸ್‍ಪಿ ಪ್ರಭಾಕರ್ ಚೌಧುರಿ ಹೇಳಿದ್ದಾರೆ.

ಮಂಗಳವಾರ ಬಂಧನಕ್ಕೊಳಗಾದ ಕಾಲಾ, ನದೀಂ ಹಾಗೂ ರಯೀಸ್ ವಿರುದ್ಧ ವೈಜ್ಞಾನಿಕ ಹಾಗೂ ಇತರ ಸಾಕ್ಷ್ಯಗಳಿದ್ದು, ನದೀಂನಿಂದ ಬಂದೂಕನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಚೌಧುರಿ ಹೇಳಿದ್ದಾರೆ. ಗೋಮಾಂಸ ಸಾಗಿಸಲು ಉಪಯೋಗಿಸಲಾದ ವಾಹನ ಹಾಗೂ ಗೋಹತ್ಯೆಗೆ ಬಳಸಲಾದ ಕತ್ತಿಗಳನ್ನು ಬಂಧಿತರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಬಂಧಿತರ ಪೈಕಿ ಕಾಲಾ ಎಂಬಾತನನ್ನು ಎರಡು ವರ್ಷಗಳ ಹಿಂದೆ ಗೋಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿತ್ತು ಹಾಗೂ ಆತ ಜಾಮೀನಿನ ಮೇಲಿದ್ದ ಎಂದು ಚೌಧುರಿ ತಿಳಿಸಿದ್ದಾರೆ.

ಬುಲಂದ್‍ಶಹರ್ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಲ್ಲಿಯ ತನಕ 18 ಮಂದಿಯನ್ನು ಬಂಧಿಸಿದ್ದಾರೆ. ಬುಲಂದ್‍ಶಹರ್ ನ ಹಿಂದಿನ ಎಸ್‍ಎಸ್‍ಪಿ ಸಹಿತ ಹಲವಾರು ಹಿರಿಯ ಅಧಿಕಾರಿಗಳನ್ನೂ ಸರಕಾರ ವರ್ಗಾಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News