ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ರೈತರ ಬೆಳೆ ಸಾಲ ಮನ್ನಾ ಮಾಡಲು ಸರಕಾರ ಬದ್ಧ: ಸಿಎಂ ಕುಮಾರಸ್ವಾಮಿ

Update: 2018-12-19 14:28 GMT

ಬೆಳಗಾವಿ, ಡಿ.19: ರೈತರ ಬೆಳೆ ಸಾಲ ಮನ್ನಾ ಯೋಜನೆಗೆ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ 6500 ಕೋಟಿ ರೂ. ಮೀಸಲಿರಿಸಲಾಗಿದ್ದು, ಸಹಕಾರಿ ಬ್ಯಾಂಕ್‍ಗಳು ಮಾತ್ರವಲ್ಲದೆ, ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ಬೆಳೆ ಸಾಲ ಮನ್ನಾ ಮಾಡಲು ರಾಜ್ಯ ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಕಟಿಸಿದರು.

ರಾಜ್ಯದಲ್ಲಿನ ಬರ ಪರಿಸ್ಥಿತಿ ಮೇಲೆ ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಬುಧವಾರ ಉತ್ತರ ನೀಡಿದ ಅವರು, ರೈತರ ಬೆಳೆ ಸಾಲ ಮನ್ನಾ ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯಿಲ್ಲ. ಆಯವ್ಯಯದಲ್ಲಿ ಹಂಚಿಕೆ ಮಾಡಲಾಗಿರುವ 6500 ಕೋಟಿ ರೂ. ಅನುದಾನವನ್ನು ಯಾವುದೇ ಕಾರಣಕ್ಕೂ ಬೇರೆ ಉದ್ದೇಶಕ್ಕೆ ವರ್ಗಾಯಿಸುವುದಿಲ್ಲ ಎಂದರು.

ರಾಷ್ಟ್ರೀಕೃತ ಬ್ಯಾಂಕ್‍ಗಳು ಹಾಗೂ ಸಹಕಾರಿ ಬ್ಯಾಂಕ್‍ಗಳಲ್ಲಿನ ಬೆಳೆ ಸಾಲ ಮನ್ನಾ ಯೋಜನೆಯ ಲಾಭ ರಾಜ್ಯದ 44 ಲಕ್ಷ ರೈತ ಕುಟುಂಬಗಳಿಗೆ ದೊರೆಯಲಿದೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ 1.6 ಲಕ್ಷ ರೈತರ ಮಾಹಿತಿಯನ್ನು ಪರಿಶೀಲಿಸಲಾಗಿದೆ. ಬಾಕಿ ಇರುವ ರೈತರ ಮಾಹಿತಿಯ ಪರಿಶೀಲನಾ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅವರು ಹೇಳಿದರು.

ಸಹಕಾರಿ ಬ್ಯಾಂಕ್‍ಗಳಲ್ಲಿನ ರೈತರ ಸಾಲ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ರೈತರ ಸಾಲಗಳನ್ನು ಮನ್ನಾ ಮಾಡುವ ತೀರ್ಮಾನವನ್ನು ಈಗಾಗಲೇ ಕೈಗೊಂಡಿರುವುದರಿಂದ ಹಾಗೂ ಸಂಬಂಧಿಸಿದ ಅನುದಾನದ ಲಭ್ಯತೆ ಇರುವುದರಿಂದ ಈ ಸಂದರ್ಭದಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳ ಅನುಮತಿ ಅಗತ್ಯವಿಲ್ಲ. ರೈತರ ಬೆಳೆ ಸಾಲ ಮನ್ನಾ ನಿರ್ಧಾರದಿಂದ ತಮ್ಮ ಸರಕಾರವು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು. 

ಸಾಲ ಮನ್ನಾ ಯೋಜನೆಯ ಸಮಪರ್ಕ ಅನುಷ್ಠಾನ ಸಲುವಾಗಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಾಲ ಮನ್ನಾ ಘಟಕವನ್ನು ರಚಿಸಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ಎರಡು ಲಕ್ಷ ರೂ. ವರೆಗಿನ ರೈತರ ಬೆಳೆ ಸಾಲ ಮನ್ನಾಕ್ಕೆ ಕ್ರಮ ಕೈಗೊಳ್ಳಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ                ಸಾಲ ಪಡೆದಿರುವ 21,69,645 ರೈತರು ಈ ಯೋಜನೆಯ ವ್ಯಾಪ್ತಿಗೆ ಒಳಪಡಲಿದ್ದಾರೆ ಎಂದು ಅವರು ತಿಳಿಸಿದರು.

ಸಾಲ ಮನ್ನಾ ಯೋಜನೆಯ ಲಾಭ ಅರ್ಹ ಫಲಾನುಭವಿಗಳಿಗೆ ದೊರೆಯಬೇಕೆಂಬ ಸದುದ್ದೇಶದಿಂದ ಆಧಾರ್ ಕಾರ್ಡ್, ಪಡಿತರ ಚೀಟಿ ಹಾಗೂ ಪಹಣಿ ಪತ್ರ ದಾಖಲೆಗಳನ್ನು ಸಲ್ಲಿಸುವ ನಿಬಂಧನೆಗಳನ್ನು ಅಳವಡಿಸಲಾಗಿದೆ. ಇದು ಯೋಜನೆಯ ಸಮರ್ಪಕ ಅನುಷ್ಠಾನದ ದೃಷ್ಟಿಯಿಂದ ಹಾಗೂ ಲೋಪಗಳನ್ನು ಸರಿಪಡಿಸುವ ಉದ್ದೇಶದಿಂದ ರೂಪಿಸಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ಸಹಕಾರಿ ಬ್ಯಾಂಕ್‍ಗಳಲ್ಲಿನ ಒಂದು ಲಕ್ಷ ರೂ.ವರೆಗಿನ ರೈತರ ಸಾಲ ಮನ್ನಾಕ್ಕೆ ಈಗಾಗಲೇ ಅನುದಾನ ಬಿಡುಗಡೆ ಮಾಡಲಾಗಿದೆ. ಅಷ್ಟೂ ಅನುದಾನವನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡುವ ಅಗತ್ಯವಿಲ್ಲ. ಮಾಸಿಕ ಕಂತಿನ ಆಧಾರದ ಮೇಲೆ ಬಿಡುಗಡೆ ಮಾಡಬಹುದಾಗಿದ್ದು, 2018 ನವೆಂಬರ್ ವರೆಗೆ 800 ಕೋಟಿ ರೂ. ಈಗಾಗಲೇ ಬಿಡುಗಡೆ ಮಾಡಲಾಗಿದೆ. ಮುಂದಿನ ಜೂನ್‍ವರೆಗೆ 9,458 ಕೋಟಿ ರೂ. ಬಿಡುಗಡೆ ಮಾಡಬೇಕಿದೆ. ಈ ಪೈಕಿ 2019ರ ಮಾರ್ಚ್‍ವರೆಗೆ 2600 ಕೋಟಿ ರೂ. ಸಹಕಾರಿ ಬ್ಯಾಂಕ್‍ಗಳಿಗೆ ಬಿಡುಗಡೆ ಮಾಡಬೇಕಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು. 

ನಮ್ಮ ಸರಕಾರ ಜೀವಂತವಾಗಿದೆ, ಸತ್ತಿಲ್ಲ. ಬಡವರು, ರೈತರು, ಜನರ ಕಲ್ಯಾಣಕ್ಕಾಗಿ ತ್ವರಿತವಾಗಿ ಸ್ಪಂದಿಸುತ್ತಿದ್ದೇವೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಓಗಳ ಸಭೆ ನಡೆಸಿ, ಬರಪರಿಹಾರ ಕಾಮಗಾರಿಗಳನ್ನು ತ್ವರಿತವಾಗಿ ಕೈಗೆತ್ತಿಕೊಳ್ಳುವಂತೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು.

ನಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ರೂಪಿಸಿ, ಹಂತ ಹಂತವಾಗಿ ಈಡೇರಿಸಲಾಗುವುದು. ರೈತರ 45 ಸಾವಿರ ಕೋಟಿ ರೂ.ಗಳ ಸಾಲವನ್ನು ಮನ್ನಾ ಮಾಡುವ ಯೋಜನೆ ಪ್ರಗತಿಯಲ್ಲಿದೆ. ಆದರೂ, ವಿರೋಧ ಪಕ್ಷದವರು ನಮ್ಮ ವಿರುದ್ಧ ಮಾಡಿರುವ ಎಲ್ಲ ಆಪಾದನೆಗಳನ್ನು ಕ್ರೀಡಾಮನೋಭಾವನೆಯಿಂದ ಸ್ವೀಕರಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

ಖಾಸಗಿ ಪಂಚತಾರಾ ಹೊಟೇಲ್‍ನಲ್ಲಿ ನಾನು ಕೊಠಡಿಯನ್ನು ಪಡೆದಿರುವುದನ್ನು ಸದನದಲ್ಲಿ ಚರ್ಚೆ ಮಾಡಲಾಗಿದೆ. ನಾನು ಅಲ್ಲಿ ಕೂತು ಯಾವ ವರ್ಗಾವಣೆ ದಂಧೆಯನ್ನು ಮಾಡಿಲ್ಲ. ನಾನು ಸರಕಾರಿ ಬಂಗಲೆ, ಸರಕಾರಿ ಕಾರು ಪಡೆದಿಲ್ಲ. ಜನರ ಬಗ್ಗೆ ನನ್ನ ಬದ್ಧತೆ ಏನು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ 3-4 ತಿಂಗಳು ಅದೇ ಹೊಟೇಲ್‍ನಲ್ಲಿ ಇದ್ದದ್ದು ಅವರಿಗೆ ನೆನಪು ಮಾಡಲು ಬಯಸುತ್ತೇನೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ, ನಾನು ಪಂಚತಾರಾ ಹೊಟೇಲ್‍ನಲ್ಲಿ ವಾಸ್ತವ್ಯ ಹೂಡಿದ್ದನ್ನು ಸಾಬೀತುಪಡಿಸಿದರೆ ಒಂದು ಕ್ಷಣವು ಇಲ್ಲಿ ಇರುವುದಿಲ್ಲ. ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಹೋಗುತ್ತೇನೆ. ನೀವು ಪಂಚತಾರಾ ಹೊಟೇಲ್‍ನಲ್ಲಿ ಕೊಠಡಿ ಕಾಯ್ದಿರಿಸಿಕೊಂಡಿರುವುದು ವರ್ಗಾವಣೆ ದಂಧೆ ಮಾಡಲು ಎಂಬುದು ಸಾರ್ವಜನಿಕವಾಗಿ ಕೇಳಿ ಬರುತ್ತಿರುವ ಆರೋಪ. ನಮ್ಮ ಆರೋಪವು ಅದೇ ಆಗಿದೆ ಎಂದರು.

ಆಗ ಸ್ಪೀಕರ್ ಕೆ.ಆರ್.ರಮೇಶ್‍ಕುಮಾರ್, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣರನ್ನು ಉದ್ದೇಶಿಸಿ ನೋಡಪ್ಪ ರೇವಣ್ಣ ಇಲ್ಲಿ ನಾವಿಬ್ಬರೇ ಪಂಚತಾರಾ ಹೊಟೇಲ್‍ಗೆ ಹೋಗಿಲ್ಲ. ಇವರಿಬ್ಬರೂ ಹೋಗಿದ್ದಾರಂತೆ ಎಂದರು. ಆಗ ನನಗೆ ಯಾವ ಫೈವ್ ಸ್ಟಾರ್ ಕೂಡ ಗೊತ್ತಿಲ್ಲ ಸಾರ್ ಎಂದು ರೇವಣ್ಣ ಹೇಳಿದರು. ನೀಡು ಬಿಡಪ್ಪ ಹಂಡ್ರೆಡ್ ಸ್ಟಾರ್ ಎಂದು ಕಿಚಾಯಿಸಿದರು.

ಬಿಜೆಪಿ ಧರಣಿ

ರಾಷ್ಟ್ರೀಕೃತ ಬ್ಯಾಂಕುಗಳ ಬಗ್ಗೆ ನೀವು ತುಂಬಾ ಮಾಹಿತಿ ಇಟ್ಟುಕೊಂಡಿದ್ದೀರಾ ಎಂದು ಕುಮಾರಸ್ವಾಮಿ ನೀಡಿದ ಹೇಳಿಕೆಯಿಂದ ಕೆರಳಿದ ಯಡಿಯೂರಪ್ಪ, ಮುಖ್ಯಮಂತ್ರಿ ಅಧಿಕಾರದ ಮದದಿಂದ ಮಾತನಾಡುತ್ತಿದ್ದಾರೆ. ನಾವು ರೈತರ ಸಾಲ ಮನ್ನಾ ಬಗ್ಗೆ ಪ್ರಸ್ತಾಪ ಮಾಡಿದರೆ, ಉಡಾಫೆಯ ಉತ್ತರ ನೀಡುತ್ತಿದ್ದಾರೆ. ನಮ್ಮನ್ನು ವ್ಯಂಗ್ಯವಾಗಿ ಬಿಂಬಿಸುವ ಪ್ರಯತ್ನ ಇದು. ಕಳೆದ ಎರಡು ಗಂಟೆಗಳಿಂದ ನಾವು ತಾಳ್ಮೆಯಿಂದ ಅವರ ಉತ್ತರ ಕೇಳುತ್ತಿದ್ದೇವೆ. ಈ ರೀತಿಯ ಮಾತುಗಳನ್ನಾಡುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆದು ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು.

ನಂತರ ಸ್ಪೀಕರ್ ರಮೇಶ್‍ ಕುಮಾರ್, ಸದನವನ್ನು 20 ನಿಮಿಷಗಳ ಕಾಲ ಮುಂದೂಡಿ, ಸಂಧಾನ ಸಭೆಗೆ ಆಗಮಿಸುವಂತೆ ಯಡಿಯೂರಪ್ಪಗೆ ಆಹ್ವಾನ ನೀಡಿದರು. ಆದರೆ, ಯಡಿಯೂರಪ್ಪ ಸಂಧಾನ ಸಭೆಗೆ ಹೋಗಲಿಲ್ಲ. ಸದನ ಮತ್ತೆ ಸೇರುತ್ತಿದ್ದಂತೆ ಬಿಜೆಪಿ ಸದಸ್ಯರು ಧರಣಿ ಮುಂದುವರೆಸಿ, ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. ನಂತರ, ಸ್ಪೀಕರ್ ಸದನವನ್ನು ನಾಳೆಗೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News