ಇಡೀ ಪ್ಯಾರಾ ಮುದ್ರಣ ದೋಷವಾಗಿರಲು ಸಾಧ್ಯವೇ: ಖರ್ಗೆ ಪ್ರಶ್ನೆ

Update: 2018-12-19 14:50 GMT

ಹೊಸದಿಲ್ಲಿ, ಡಿ.19: ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದ ವಿಷಯವನ್ನು ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯ ತನಿಖೆಗೆ ಒಪ್ಪಿಸಬೇಕು ಎಂಬ ತನ್ನ ಆಗ್ರಹವನ್ನು ಮುಂದುವರಿಸಿರುವ ಕಾಂಗ್ರೆಸ್, ಈ ಬಗ್ಗೆ ಸರಕಾರದ ಮೇಲೆ ಒತ್ತಡವನ್ನು ಮುಂದುವರಿಸಿದೆ.

ಸಂಸತ್ತಿನ ಎಲ್ಲಾ ಸದಸ್ಯರೂ ಒಪ್ಪಂದದ ದಾಖಲೆಪತ್ರಗಳನ್ನು ನೋಡಲಿ ಎಂಬ ಏಕೈಕ ಉದ್ದೇಶದಿಂದ ನಾವು ಜೆಪಿಸಿ ರಚನೆಗೆ ಆಗ್ರಹಿಸುತ್ತಿದ್ದೇವೆ. ಬೊಫೋರ್ಸ್ ಹಾಗೂ 2 ಜಿ ಪ್ರಕರಣಗಳಲ್ಲ ಜೆಪಿಸಿ ರಚನೆಯಾಗಿದೆ. ರಫೇಲ್ ಒಪ್ಪಂದದ ಕುರಿತು ಸುಪ್ರೀಂಕೋರ್ಟ್ ನೀಡಿದ ಆದೇಶದಲ್ಲಿ ಒಂದು ಸಾಲನ್ನು ಬದಲಾಯಿಸಬೇಕೆಂದು ಸರಕಾರ ಬಯಸುತ್ತಿದೆ. ಒಂದು ಪದ ಮುದ್ರಣದೋಷವಾಗಬಹುದು. ಆದರೆ ಇಡೀ ಪ್ಯಾರಾದಲ್ಲಿ ಮುದ್ರಣ ದೋಷವಾಗಲು ಹೇಗೆ ಸಾಧ್ಯ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.

ರಫೇಲ್ ಒಪ್ಪಂದದ ವಿವರವನ್ನು ಪಿಎಸಿ (ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ) ಪರಿಶೀಲಿಸಿದೆ. ಅಲ್ಲದೆ ವಿವರವನ್ನು ನಿಯಂತ್ರಕ ಮತ್ತು ಮಹಾ ಲೆಕ್ಕ ಪರಿಶೋಧಕ(ಸಿಎಜಿ)ರಿಗೂ ವಿವರವನ್ನು ನೀಡಲಾಗಿದೆ ಎಂದು ಸುಪ್ರೀಂಕೋರ್ಟ್‌ನ ಆದೇಶದಲ್ಲಿ ತಿಳಿಸಲಾಗಿದೆ. ಆದರೆ ಒಪ್ಪಂದದ ವಿವರವನ್ನು ಪಿಎಸಿ ಅಥವಾ ಸಿಎಜಿಗೆ ಸಲ್ಲಿಸಲಾಗಿಲ್ಲ. ಈ ಮೂಲಕ ಸರಕಾರ ಸುಪ್ರೀಂಕೋರ್ಟ್‌ಗೆ ತಪ್ಪು ಮಾಹಿತಿ ನೀಡಿದೆ ಎಂದು ಖರ್ಗೆ ಹೇಳಿದ್ದಾರೆ. ಒಪ್ಪಂದದ ವಿವರವನ್ನು ಸಿಎಜಿ ಮತ್ತು ಪಿಎಸಿಗೆ ‘ಕಳುಹಿಸಲಾಗಿದೆ’ ಎಂಬ ಬದಲು ‘ಕಳುಹಿಸಲಾಗುವುದು’ ಎಂದು ಬದಲಿಸುವಂತೆ ಸರಕಾರ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದೆ. ಸರಕಾರ ನ್ಯಾಯಾಲಯಕ್ಕೆ ನೀಡಿದ ತಪ್ಪು ಮಾಹಿತಿಯ ಆಧಾರದಲ್ಲಿ ನ್ಯಾಯಾಲಯ ತೀರ್ಪು ನೀಡಿದೆ. ಆದ್ದರಿಂದ ಇದೀಗ ಸಿಎಜಿಯನ್ನು ಕರೆಸಲು ಎಲ್ಲಾ ಪಿಎಸಿ ಸದಸ್ಯರೂ ದಿನಾಂಕವನ್ನು ನಿರ್ಧರಿಸಬೇಕು. ರಫೇಲ್ ಒಪ್ಪಂದದ ವಿವರವನ್ನು ಪಿಎಸಿಗೆ ಯಾವಾಗ ಸಲ್ಲಿಸಲಾಗುತ್ತದೆ ಎಂಬುದನ್ನು ಸಮಿತಿ ತಿಳಿದುಕೊಳ್ಳಬೇಕಿದೆ ಎಂದು ಖರ್ಗೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News