'ಕೆಜಿಎಫ್' ಬಿಡುಗಡೆಗೆ ತಡೆಯಾಜ್ಞೆ: ಜನವರಿ 7 ರವರೆಗೆ ತೆರೆ ಕಾಣದಂತೆ ಆದೇಶ

Update: 2018-12-20 14:04 GMT

ಬೆಂಗಳೂರು, ಡಿ.20: ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ಶುಕ್ರವಾರ ತೆರೆ ಕಾಣಬೇಕಿದ್ದ, ಕೆಜಿಎಫ್ ಸಿನಿಮಾ ಪ್ರದರ್ಶನಕ್ಕೆ ನಗರದ 10ನೆ ನಗರ ಸತ್ರ ನ್ಯಾಯಾಲಯ (ಸಿಟಿ ಸಿವಿಲ್) ತಡೆ ನೀಡಿದೆ.

ತಂಗಂ ಎಂಬ ರೌಡಿಯ ಜೀವನಾಧಾರಿತ ಕತೆಯನ್ನೇ ‘ಕೆ.ಜಿ.ಎಫ್’ ಸಿನಿಮಾದಲ್ಲಿ ಚಿತ್ರಿಸಲಾಗಿದೆ. ಆದರೆ, ಈ ಹಿಂದೆಯೇ ತಂಗಂ ಜೀವನಾಧಾರಿತ ಕತೆಯನ್ನು ಚಿತ್ರೀಕರಿಸಲು ವೆಂಕಟೇಶ್ ಎಂಬುವವರು ಹಕ್ಕನ್ನು ಪಡೆದಿದ್ದರು. ಈಗ ವೆಂಕಟೇಶ್ ಅವರ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯ ಮಧ್ಯಂತರ ತಡೆ ನೀಡಿದ್ದು, ಸಿನಿಮಾ ಜನವರಿ 7ರ ವರೆಗೆ ತೆರೆ ಕಾಣದಂತೆ ಆದೇಶಿಸಿದೆ.

ರೌಡಿ ತಂಗಂ ಎಂದೇ ಕುಖ್ಯಾತಿ ಪಡೆದಿದ್ದ ಕೋಲಾರ ಮೂಲದ ರೌಡಿಶೀಟರ್ ಜೀವನವನ್ನು ಆಧರಿಸಿ ಸಿನೆಮಾ ಮಾಡಲು ವೆಂಕಟೇಶ್ ಹಕ್ಕನ್ನು ಪಡೆದಿದ್ದರು ಎನ್ನಲಾಗಿದೆ. ಜೊತೆಗೆ ತಂಗಂ ಕುಟುಂಬಸ್ಥರಿಂದಲೇ ಪರವಾನಗಿ ಪಡೆದುಕೊಂಡಿದ್ದರು. ಆದರೆ, ಕೆಜಿಎಫ್ ಚಿತ್ರತಂಡ ಯಾವುದೇ ಪರವಾನಗಿ ಪಡೆಯದೇ ಸಿನೆಮಾ ಮಾಡಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಶುಕ್ರವಾರ(ನ.21) ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದ್ದ ಸಿನೆಮಾಗೆ ಸಂಕಷ್ಟ ಎದುರಾಗಿದೆ. ಕೆಜಿಎಫ್ ಸಿನೆಮಾ ಟೈಟಲ್ ಬದಲಿಸುವಂತೆ ನ್ಯಾಯಾಲಯಕ್ಕೆ ವಕೀಲ ಲೋಹಿತ್ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಚಿತ್ರ ಬಿಡುಗಡೆಯಾಗಲಿದೆ
ನಮ್ಮ ಚಿತ್ರವನ್ನು ನೋಡದೆ ದೂರುದಾರರು ಕೋರ್ಟ್ ಮೊರೆ ಹೋಗಿದ್ದಾರೆ. ನಮಗೆ ಇಲ್ಲಿಯವರೆಗೆ ಕೋರ್ಟ್‌ನಿಂದ ಅಧಿಕೃತವಾಗಿ ಯಾವುದೇ ನೋಟಿಸ್ ಬಂದಿಲ್ಲ. ಸಹಜವಾಗಿಯೇ ಅಭಿಮಾನಿಗಳು ಗೊಂದಲಗೊಂಡಿದ್ದಾರೆ. ಎಲ್ಲಾ ವಿತರಕರಿಗೂ ಸಿನೆಮಾ ಹಕ್ಕನ್ನು ವಿತರಿಸಲಾಗಿದೆ. ಕೆಜಿಎಫ್ ಚಿತ್ರ ಡಿ.21ರಂದು ಪ್ರಪಂಚದಾದ್ಯಂತ 2 ಸಾವಿರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.
-ವಿಜಯ್ ಕಿರಗಂದೂರು, ಕೆಜಿಎಫ್ ಚಿತ್ರ ನಿರ್ಮಾಪಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News