ಉ.ಕ ಬಗ್ಗೆ ಕಾಳಜಿ ಇದ್ದರೆ ಬಿಜೆಪಿ ಧರಣಿ ನಡೆಸುತ್ತಿರಲಿಲ್ಲ: ಬಸವರಾಜ ಹೊರಟ್ಟಿ ಆಕ್ರೋಶ

Update: 2018-12-20 14:24 GMT

ಬೆಳಗಾವಿ, ಡಿ.20: ಪರಿಷತ್ ಕಲಾಪದಲ್ಲಿ ವಿಪಕ್ಷ ನಾಯಕರು ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡುವಂತೆ ಸದನದಲ್ಲಿ ಗದ್ದಲ ಮಾಡುತ್ತಿದ್ದಾರೆ. ಧರಣಿ ನಡೆಸುತ್ತಿದ್ದ ಬಿಜೆಪಿ ಸದಸ್ಯರಿಗೆ ಸಭಾಪತಿ ಮನವಿ ಮಾಡಿಕೊಂಡು ಪ್ರಶ್ನೋತ್ತರ ಕಲಾಪ ಬಳಿಕ ಚರ್ಚೆಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದರು.

ಈ ವೇಳೆ ಮಧ್ಯೆ ಪ್ರವೇಶಿಸಿದ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ, ಪ್ರಚಾರಕ್ಕಾಗಿ ಈ ರೀತಿ ಮಾಡೋದು ಸರಿಯಲ್ಲ. ಉತ್ತರ ಕರ್ನಾಟಕದ ಬಗ್ಗೆ ಕಳಕಳಿ, ಪ್ರಾಮಾಣಿಕತೆ ಇದ್ದರೆ ರಾತ್ರಿವರೆಗೂ ಚರ್ಚೆ ಮಾಡೋಣ. ಎಷ್ಟು ಸಮಯ ಮಾತನಾಡುತ್ತಾರೆ ಅಷ್ಟು ಸಮಯ ನೀಡಿ ಎಂದು ಸಭಾಪತಿಗೆ ಹೇಳಿದರು. ಅಲ್ಲದೆ, ಬಿಜೆಪಿಗೆ ಕಳಕಳಿ ಇಲ್ಲ, ಪ್ರಚಾರಕ್ಕೆ ಬಿಜೆಪಿ ಈ ರೀತಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಗೆ, ನೀವು ಹಿರಿಯರು ನಿಮಗಾದರೂ ಗೊತ್ತಾಗಲ್ವೇನ್ರಿ ಎಂದ ಹೊರಟ್ಟಿ ತಮ್ಮ ಅಸಮಾಧಾನವನ್ನು ಹೊರಹಾಕಿದರು.

ಬಿಜೆಪಿ ಸದಸ್ಯರ ವಿರುದ್ಧ ಆಕ್ರೋಶಗೊಂಡ ಕಾಂಗ್ರೆಸ್ ಹಿರಿಯ ಸದಸ್ಯ ಎಸ್.ಆರ್.ಪಾಟೀಲ್, ಇಂದು ಸದನ ನಡೆಯಲು ಬಿಡುವುದಿಲ್ಲ ಎಂದು ಬೆಳಗಾವಿ ತುಂಬಾ ಸುದ್ದಿಯಾಗಿದೆ. ಉತ್ತರ ಕರ್ನಾಟಕದ ಬಗ್ಗೆ ಕಾಳಜಿಯಿದ್ದರೆ ಬಿಜೆಪಿ ಧರಣಿ ನಡೆಸುತ್ತಿರಲಿಲ್ಲ. ಈ ಬಗ್ಗೆ ಮುಂಜಾನೆಯೇ ಸಂಶಯ ಬಂದಿತ್ತು ಎಂದರು.

ಕಲಾಪದಲ್ಲಿ ಪ್ರಶ್ನೋತ್ತರ ಬಳಿಕ, ಉತ್ತರ ಕರ್ನಾಟಕದ ಬಗ್ಗೆ ಇವತ್ತು ಒಂದು ರಾತ್ರಿಯಿಡಿ ಚರ್ಚೆ ಮಾಡೋಣ. ಇದೊಂದು ಇತಿಹಾಸ ಆಗಲಿ. ಸದನದಲ್ಲಿ ಬಿಜೆಪಿ ನಡೆಸಿದ ಈ ಧರಣಿ ಸಭಾಪತಿ ಪೀಠಕ್ಕೆ ಅಗೌರವ ಉಂಟು ಮಾಡಿದಂತಾಗಿದೆ ಎಂದು ಧರಣಿ ಹಿಂಪಡೆಯುವಂತೆ ಬಿಜೆಪಿಗೆ ಎಸ್.ಆರ್.ಪಾಟೀಲ್ ಮನವಿ ಮಾಡಿಕೊಂಡರು. ಆದರೂ ಬಿಜೆಪಿ ಸದಸ್ಯರು ಪ್ರತಿಭಟನೆ ನಿಲ್ಲಿಸದೇ ಮುಂದುವರೆಸಿದರು. ಇದರಿಂದಾಗಿ ಸಭಾಪತಿ ಅವರು ಕಲಾಪವನ್ನು ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News