84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಸಿದ್ಧತೆ ಪರಿಶೀಲಿಸಿದ ಸಚಿವ ಆರ್.ವಿ.ದೇಶಪಾಂಡೆ

Update: 2018-12-20 14:29 GMT

ಧಾರವಾಡ, ಡಿ.20: 2019ನೇ ಜನವರಿ 4, 5 ಮತ್ತು 6 ರಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸುತ್ತಿರುವ ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆ, ಪ್ರತಿನಿಧಿಗಳ ನೊಂದಣಿ ಕೇಂದ್ರ, ಪುಸ್ತಕ ಮಳಿಗೆ, ಊಟದ ಪೆಂಡಾಲ್ ನಿರ್ಮಿಸುವ ಸ್ಥಳಗಳಿಗೆ ಇಂದು ಮಧ್ಯಾಹ್ನ ಭೇಟಿ ನೀಡಿದ್ದ, ಕಂದಾಯ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ಸಮ್ಮೇಳನದ ಸಿದ್ಧತೆಗಗಳನ್ನು ಪರಿಶೀಲಿಸಿದರು.

ಮುಖ್ಯ ವೇದಿಕೆ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ ಅವರು, ವೇದಿಕೆಯಲ್ಲಿ ಆಸೀನರಾಗುವ ಗಣ್ಯರ ಹೆಸರುಗಳನ್ನು ಮುಂಚಿತವಾಗಿ ಜಿಲ್ಲಾಡಳಿತಕ್ಕೆ ನೀಡುವಂತೆ ಕಸಾಪ ಪದಾಧಿಕಾರಿಗಳಿಗೆ ಸೂಚಿಸಿದರು. ವೇದಿಕೆ ಅಲಂಕಾರ, ವೇದಿಕೆ ಸುತ್ತ ಮತ್ತು ಸಮ್ಮೇಳನದ ಸ್ಥಳದಲ್ಲಿ ಸ್ವಚ್ಚತೆ, ಧ್ವನಿವರ್ಧಕ ಅಳವಡಿಕೆ, ಕುಡಿಯುವ ನೀರು, ತಾತ್ಕಾಲಿಕ ಶೌಚಾಲಯಗಳ ಸೌಲಭ್ಯದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಲ್ಲದೇ, ಸಮ್ಮೇಳನಕ್ಕೆ ಆಗಮಿಸುವ ಜನರಿಗೆ ತೊಂದರೆ ಆಗದಂತೆ ರಸ್ತೆ ಕೆಲಸ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಸಾಹಿತ್ಯ ಸಮ್ಮೇಳನ ಜನರ ಉತ್ಸವವಾಗಿ ನಡೆಯಬೇಕು. ಸರಕಾರ ಸಾಹಿತ್ಯ ಸಮ್ಮೇಳನಕ್ಕೆ 8 ಕೋಟಿ ರೂ.ಅನುದಾನ ನೀಡಿದೆ. ಹೆಚ್ಚಿನ ಅನುದಾನ ಅಗತ್ಯವೆನಿಸಿದರೆ ಪರಿಶೀಲಿಸಿ ಸರಕಾರದಿಂದ ಬಿಡುಗಡೆ ಮಾಡಲು ಕ್ರಮಕೈಕೊಳ್ಳಲಾಗುವುದು. ಯಾವುದೇ ರೀತಿಯಿಂದ ಅನಾವಶ್ಯಕ ವೆಚ್ಚವಾಗದಂತೆ ಜವಾಬ್ದಾರಿ ವಹಿಸಬೇಕಿದೆ. ಕೈಗಾರಿಕೆ, ಕಾರ್ಖಾನೆ, ಉದ್ಯಮಿಗಳು ಸ್ವಯಂ ಪ್ರೇರಣೆಯಿಂದ ದೇಣಿಗೆ ನೀಡಿದರೆ ಸ್ವೀಕರಿಸಲಾಗುವುದು. ಯಾವುದೇ ರೀತಿಯ ಒತ್ತಾಯವಿಲ್ಲ ಎಂದು ದೇಶಪಾಂಡೆ ತಿಳಿಸಿದರು.

ಪ್ರತಿನಿಧಿಗಳ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರು, ಪೆಂಡಾಲ್ ನಿರ್ಮಾಣದ ಜೊತೆಗೆ ಅಲ್ಲಿನ ಕಟ್ಟಡಗಳಿಗೂ ಸುಣ್ಣ, ಬಣ್ಣದೊಂದಿಗೆ ಶೃಂಗಾರಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು. ಜನವರಿ 4ರ ಬೆಳಗ್ಗೆ 8 ಗಂಟೆಗೆ ರಾಷ್ಟ್ರಧ್ವಜಾರೋಹಣ, ನಾಡಧ್ವಜಾರೋಹಣ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ನೆರವೇರಲಿದೆ. ನಂತರ 8:30ಕ್ಕೆ ಕರ್ನಾಟಕ ಕಾಲೇಜು ಆವರಣದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭವಾಗಿ 11 ಗಂಟೆಗೆ ಸಮ್ಮೇಳನದ ಮುಖ್ಯ ವೇದಿಕೆ ಇರುವ ಕೃಷಿ ವಿಶ್ವವಿದ್ಯಾಲಯದ ಕ್ರೀಡಾಂಗಣಕ್ಕೆ ಬಂದು ತಲುಪುತ್ತದೆ ಎಂದು ಸಚಿವರಿಗೆ ಅಧಿಕಾರಿಗಳು ವಿವರಣೆ ನೀಡಿದರು.

ನಂತರ 84ನೇ ಸಾಹಿತ್ಯ ಸಮ್ಮೇಳನವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ. ಸಮ್ಮೇಳನ ಮೂರು ದಿನಗಳ ಕಾಲ ಮುಖ್ಯ ವೇದಿಕೆ ಮತ್ತು ಎರಡು ಸಮನಾಂತರ ವೇದಕೆಗಳಲ್ಲಿ ಅರ್ಥಪೂರ್ಣವಾದ ವಿಚಾರಗೋಷ್ಠಿ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೆ ಅಧ್ಯತೆ ನೀಡುವಂತೆ ಸೂಚಿಸಲಾಗಿದೆ. ವಾಣಿಜ್ಯ ಮತ್ತು ಪುಸ್ತಕ ಮಳಿಗೆಗಳಲ್ಲಿ ಭಾಗವಹಿಸಲಿರುವ ಸರ್ಕಾರಿ ಇಲಾಖೆಯಡಿ ರಚನೆಗೊಂಡಿದರುವ ಮಹಿಳಾ ಸ್ವಸಹಾಯ ಗುಂಪುಗಳಿಗೆ ಅವರ ಉತ್ಪಾದಕತೆಗಳನ್ನು ಪ್ರದರ್ಶಿಸಲು ಮತ್ತು ಮಾರಾಟಕ್ಕೆ ಅನುಕೂಲವಾಗುವಂತೆ ಸುಮಾರು 40 ಮಳಿಗೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಸಮ್ಮೇಳನದಲ್ಲಿ ಭಾಗವಹಿಸುವ ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಆಧ್ಯತೆ ನೀಡುವಂತೆ ಸಂಬಂಧಿತ ಪೊಲೀಸ್ ಹಾಗೂ ಇತರ ಇಲಾಖೆಗಳಿಗೆ ತಿಳಿಸಲಾಗಿದೆ ಎಂದು ದೇಶಪಾಡೆ ಹೇಳಿದರು.

ಸಾಹಿತ್ಯ, ಸಾಂಸ್ಕೃತಿಕ ತವರೂರಾಗಿರುವ ಧಾರವಾಡದಲ್ಲಿ ನಡೆಯುತ್ತಿರುವ ಈ ಸಮ್ಮೇಳನ ಅರ್ಥ ಪೂರ್ಣವಾಗಿ ಯಶಸ್ವಿಯಾಗಲು ಜಿಲ್ಲಾಧಿಕಾರಿಗಳ ನೇತೃತ್ವದ ಅಧಿಕಾರಿಗಳ ತಂಡ ಮತ್ತು ಜಿಲ್ಲಾ ಕಸಾಪ ಪ್ರತಿನಿಧಿಗಳು ಸಾಕಷ್ಟು ಸಿದ್ಧತೆ ಮಾಡಿಕೊಂಡಿದ್ದು, ತಮಗೆ ಖುಷಿ ತಂದಿದೆ. ಎಲ್ಲರೂ ಸೇರಿ ಸಮ್ಮೇಳನ ಯಶಸ್ವಿಗೊಳಿಸೋಣ ಎಂದು ಅವರು ತಿಳಿಸಿದರು.

ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಮುಖ್ಯ ವೇದಿಕೆಯಲ್ಲಿ ಸುಮಾರು 50 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗುತ್ತಿದೆ. ಸ್ಥಳದಲ್ಲಿ ಅಗತ್ಯ ಸೌಲಭ್ಯಗಳನ್ನು ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಮಹಾಪೌರ ಸುಧೀರ ಸರಾಫ, ನಗರ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಜಿ, ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ, ಮಹಾನಗರ ಪಾಲಿಕೆ ಆಯುಕ್ತ ಶಕೀಲ್ ಅಹ್ಮದ್, ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ ಸೇರಿದಂತೆ ವಿವಿಧ ಸಮಿತಿಗಳ ಅಧ್ಯಕ್ಷರು, ಕಾರ್ಯಾಧ್ಯಕ್ಷರು ಹಾಗೂ ಅಧಿಕಾರಿಗಳು, ಜಿಲ್ಲಾ ಕಸಾಪ ಪದಾಧಿಕಾರಿಗಳು, ಗುತ್ತಿಗೆದಾರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News