ಚಿಕ್ಕಮಗಳೂರು: ಪೊಲೀಸರ ಸರ್ಪಗಾವಲಿನಲ್ಲಿ ಶಾಂತಿಯುತವಾಗಿ ನಡೆದ ಸಂಕೀರ್ತನಾ ಯಾತ್ರೆ

Update: 2018-12-20 18:30 GMT

ಚಿಕ್ಕಮಗಳೂರು, ಡಿ.20: ವಿವಾದಿತ ಗುರು ದತ್ತಾತ್ರೇಯ ಬಾಬಾಬುಡನ್ ದರ್ಗಾದಲ್ಲಿ ಡಿ.22ರಂದು ನಡೆಯಲಿರುವ ದತ್ತಜಯಂತಿ ಅಂಗವಾಗಿ ಸಂಘಪರಿವಾರ ಗುರುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಸಂಕೀರ್ತನಾ ಯಾತ್ರೆ ಹಾಗೂ ಅನುಸೂಯಾ ಯಾತ್ರೆ ಪೊಲೀಸರ ಸರ್ಪಗಾವಲಿನಲ್ಲಿ ಶಾಂತಿಯುತವಾಗಿ ನಡೆಯಿತು.

ಗುರುವಾರ ಬೆಳಗ್ಗೆ ನಗರದ ಬೋಳರಾಮೇಶ್ವರ ದೇವಾಲಯದ ಆವರಣದಲ್ಲಿ ಜಮಾಯಿಸಿದ ನೂರಾರು ಮಹಿಳೆಯರು ಹಾಗೂ ಸಂಘಪರಿವಾರದ ಕಾರ್ಯಕರ್ತರು ಸಾಮೂಹಿಕ ಪೂಜೆಯ ಬಳಿಕ ನಗರದ ಐಜಿ ರಸ್ತೆ ಮೂಲಕ ರಾಮನಹಳ್ಳಿವರೆಗೆ ಸಂಕೀರ್ತನಾ ಯಾತ್ರೆ ಹಾಗೂ ಅನುಸೂಯ ಯಾತ್ರೆಗಳನ್ನು ನಡೆಸಿದರು. ಯಾತ್ರೆಯುದ್ದಕ್ಕೂ ಸಂಘಪರಿವಾರದ ಕಾರ್ಯಕರ್ತರು ದತ್ತ ಪೀಠ ಹಿಂದುಗಳಿಗೆ ಸೇರಬೇಕೆಂದು ಘೋಷಣೆಗಳನ್ನು ಕೂಗಿದರು. ಮಹಿಳೆಯರು ದತ್ತಭಜನೆ ಮೂಲಕ ಮೆರವಣಿಗೆಯಲ್ಲಿ ಸಾಗಿದರು. 

ಅನುಸೂಯಾ ಯಾತ್ರೆ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲೆಗಳಿಂದಲೂ ನೂರಾರು ಮಹಿಳೆಯರು ಆಗಮಿಸಿದ್ದರು. ಸಂಕೀರ್ತನಾ ಯಾತ್ರೆ ಹಾಗೂ ಅನುಸೂಯ ಯಾತ್ರೆ ಬಳಿಕ ಬಾಬಾ ಬುಡನ್‍ಗಿರಿಗೆ ತೆರಳಿದ ಮಹಿಳೆಯರು ದತ್ತ ಪಾದುಕೆಗಳ ದರ್ಶನ ಪಡೆದರು. ನಂತರ ಅಲ್ಲಿನ ಆವರಣದಲ್ಲಿ ಹೋಮ, ಗಣಹೋಮ, ಅನುಸೂಯ ದೇವಿ ಪೂಜೆ, ಹವನ, ಭಜನೆ ನಡೆಸಿದರು. ಮೆರವಣಿಗೆಯ ಉದ್ದಕ್ಕೂ ಎರಡೂ ಬದಿಗಳಲ್ಲಿ ಪೊಲೀಸ್ ಹಾಗೂ ಗೃಹ ರಕ್ಷಕದಳದ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಪೊಲೀಸರ ಬಿಗಿ ಭದ್ರತೆಯಲ್ಲಿ ನಡೆದ ಯಾತ್ರೆಗಳು ಸಂಜೆ ಶಾಂತಿಯುತವಾಗಿ ನಡೆದವು.

ದತ್ತಜಯಂತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಜಿಲ್ಲಾದ್ಯಂತ 3500 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದು, ಆಯಕಟ್ಟಿನ ಪ್ರದೇಶಗಳಲ್ಲಿ ಚೆಕ್‍ಪೋಸ್ಟ್ ಗಳನ್ನು ನಿರ್ಮಿಸುವ ಮೂಲಕ ಹೊರ ಜಿಲ್ಲೆಗಳಿಂದ ಆಗಮಿಸುವ ವಾಹನಗಳನ್ನು ತಪಾಸಣೆಗೊಳಪಡಿಸಲಾಯಿತು. ಅನುಸೂಯಾ ಯಾತ್ರೆ ಹಿನ್ನೆಲೆಯಲ್ಲಿ ಬಾಬಾ ಬುಡನ್‍ಗಿರಿ ಸೇರಿದಂತೆ ಸುತ್ತಮುತ್ತಲೂ ಪೊಲೀಸರ ಸರ್ಪಗಾವಲು ಹಾಕಲಾಗಿತ್ತು. ಜಿಲ್ಲಾಡಳಿದ ಕಟ್ಟುನಿಟ್ಟಿನ ಕ್ರಮದಿಂದಾಗಿ ಸಂಘಪರಿವಾರದ ಯಾತ್ರೆಗಳು ಅತ್ಯಂತ ಶಾಂತಿಯುತವಾಗಿ ನಡೆದವು.

ಶಾಸಕ ಸಿ.ಟಿ.ರವಿ, ನಗರಸಭೆ ಅಧ್ಯಕ್ಷೆ ಶಿಲ್ಪಾ ರಾಜಶೇಖರ್, ಜಿಪಂ ಸದಸ್ಯೆ ಜಸಂತಾ ಅನಿಲ್‍ಕುಮಾರ್ ಸೇರಿದಂತೆ ಸಂಘಪರಿವಾರ ಹಾಗೂ ಬಿಜೆಪಿ ಮುಖಂಡರು ಸಂಕೀರ್ತನಾ ಯಾತ್ರೆ ಹಾಗೂ ಅನುಸೂಯಾ ಯಾತ್ರೆಗಳ ನೇತೃತ್ವ ವಹಿಸಿದ್ದರು.

ದತ್ತಜಯಂತಿ ಅಂಗವಾಗಿ ಬಾಬಾಬುಡನ್‍ಗಿರಿ ಹಾಗೂ ಮುಳ್ಳಯ್ಯನ ಗಿರಿ ಪ್ರವಾಸಕ್ಕೆ ದೂರದ ಪ್ರವಾಸಿಗರಿಗೆ ವಾಹನದಟ್ಟಣೆ ನಿಯಂತ್ರಣದ ಉದ್ದೇಶದಿಂದ ನಿರ್ಬಂಧ ವಿಧಿಸಿತ್ತು. ಇದರಿಂದಾಗಿ ಬಾಬಾ ಬುಡನ್‍ಗಿರಿಗೆ ತೆರಳುವ ರಸ್ತೆಯಲ್ಲಿ ಸಂಚಾರ ಸಮಸ್ಯೆ ಹೆಚ್ಚು ಕಂಡು ಬರಲಿಲ್ಲ. ಡಿ.22ರಂದು ಗಿರಿಯಲ್ಲಿ ದತ್ತಜಯಂತಿ ನಡೆಯುವದರಿಂದ ಡಿ.20ರಿಂದ 22 ರವರೆಗೆ ಜಿಲ್ಲಾಡಳಿತ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದ್ದು, ಮೂರು ದಿನಗಳ ಕಾಲ ಜಿಲ್ಲಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News