ಕನ್ನಡ-ಇಂಗ್ಲಿಷ್ ಸಾಗಲಿ ಜೊತೆ ಜೊತೆಯಲಿ

Update: 2018-12-21 04:07 GMT

 ಸರಕಾರವು ಸರಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯುವ ಕುರಿತಂತೆ ಕೆಲವು ಹಿರಿಯ ಸಾಹಿತಿಗಳು, ಚಿಂತಕರು, ಕನ್ನಡ ಪರ ಹೋರಾಟಗಾರರು ಬೀದಿಗಿಳಿದಿದ್ದಾರೆ. ವಿಶೇಷವೆಂದರೆ, ಈ ಹೋರಾಟದಲ್ಲಿ ಕೆಲವು ಮಾಜಿ ಬಂಡಾಯ ಸಾಹಿತಿಗಳೂ ಮತ್ತು ಭೈರಪ್ಪಾದಿ ಬಲಪಂಥೀಯ ಸಾಹಿತಿಗಳು ಮೈತ್ರಿಯಾಗಿರುವುದು. ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಜಾರಿಗೊಳಿಸಿದರೆ ಕನ್ನಡ ಅಳಿದು ಹೋಗುತ್ತದೆ ಎಂಬ ಆತಂಕ ಇವರದು. ಆದರೆ ಇಷ್ಟೂ ಮಂದಿಯ ಮಕ್ಕಳು, ಮೊಮ್ಮಕ್ಕಳು ಓದುತ್ತಿರುವ ಶಾಲೆಗಳು ಯಾವುವು? ಇವರ ಮನೆಯ ವಿದ್ಯಾರ್ಥಿಗಳಲ್ಲ್ಲಿ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳು ಎಷ್ಟಿದ್ದಾರೆ ಎಂಬ ಸಮೀಕ್ಷೆ ನಡೆಸಿದರೆ ನಮಗೆ ನಿರಾಶೆ ಕಟ್ಟಿಟ್ಟಬುತ್ತಿ. ಇವರ ಕನ್ನಡ ಪ್ರೀತಿಯ ಬಗ್ಗೆ ಯಾವುದೇ ತಕರಾರಿಲ್ಲ. ಆದರೆ ಇವರ ಈ ಹೋರಾಟದಿಂದ ಕನ್ನಡ ಭಾಷೆಯೂ ಉಳಿಯುವುದಿಲ್ಲ, ಜೊತೆಗೆ ಸರಕಾರಿ ಶಾಲೆಗಳೂ ಉಳಿಯುವುದಿಲ್ಲ ಎನ್ನುವುದು ಮಾತ್ರ ಕಠೋರ ವಾಸ್ತವ.

ಇಂದು ಕರ್ನಾಟಕದಲ್ಲಿ ಕನ್ನಡ ಮಾಧ್ಯಮವೆನ್ನುವುದು ಶ್ರೀಮಂತ ವರ್ಗ, ಮೇಲ್ಜಾತಿಯ ಜನರು ಧರಿಸಿ ಬಿಟ್ಟ ಹಳೆಯ ಅಂಗಿಯಂತಾಗಿದೆ. ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ ಎನ್ನುವ ಒಂದೇ ಕಾರಣಕ್ಕಾಗಿ ಇವರು ಈ ಹಳೆಯ ಅಂಗಿಯನ್ನೇ ಧರಿಸಬೇಕಾಗಿದೆ. ಸದ್ಯದ ಸಂದರ್ಭದಲ್ಲಿ ಸರಕಾರಿ ಶಾಲೆಗಳು ಒಂದೊಂದಾಗಿ ಮುಚ್ಚುತ್ತಿರುವುದನ್ನು ನಾವು ಗಮನಿಸಬೇಕಾಗಿದೆ. ಶಿಕ್ಷಣದ ಗುಣಮಟ್ಟ ಚೆನ್ನಾಗಿಲ್ಲ ಎನ್ನುವ ಒಂದೇ ಕಾರಣಕ್ಕಾಗಿ ಸರಕಾರಿ ಶಾಲೆಗಳು ಮುಚ್ಚುತ್ತಿರುವುದಲ್ಲ. ಮಧ್ಯಮ, ಕೆಳಮಧ್ಯಮವರ್ಗಗಳೂ ಇಂಗ್ಲಿಷ್ ಭಾಷೆಯ ಅನಿವಾರ್ಯವನ್ನು ಮನವರಿಕೆ ಮಾಡಿಕೊಂಡ ಪರಿಣಾಮವಾಗಿ, ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಖಾಸಗಿ ಶಾಲೆಗಳಿಗೆ ಕಳುಹಿಸಲು ಸಾಧ್ಯವೇ ಇಲ್ಲ ಎನ್ನುವಂತಹ ಕುಟುಂಬಗಳಷ್ಟೇ ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಕಳುಹಿಸುತ್ತಿವೆ. ಈ ಮಕ್ಕಳೇ ನಮ್ಮ ಹಿರಿಯ ಕನ್ನಡ ಪ್ರೇಮಿಗಳಿಗೆ, ಸಾಹಿತಿಗಳಿಗೆ ಕನ್ನಡ ಉಳಿಸುವ ಗಿನಿಪಿಗ್‌ಗಳು ಅಥವಾ ಪ್ರಯೋಗ ಪಶುಗಳು. ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭಿಸಿದಾಗ ಕನ್ನಡ ಸರ್ವನಾಶವಾಯಿತೇನೋ ಎಂದು ಬೀದಿಗಿಳಿಯುವ ಈ ಸಾಹಿತಿಗಳು, 3000ಕ್ಕೂ ಅಧಿಕ ಸರಕಾರಿ ಶಾಲೆಗಳು ಮುಚ್ಚಿದಾಗ ಅದರ ಕುರಿತಂತೆ ಬೀದಿಗಿಳಿದಿರಲಿಲ್ಲ ಅಥವಾ ಯಾಕೆ ಮುಚ್ಚಲ್ಪಟ್ಟಿತು? ಸರಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಯಾಕೆ ಇಳಿಮುಖವಾಗುತ್ತಿದೆ? ಪಾಲಕರು ಸರಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸಲು ಯಾಕೆ ಹಿಂದೇಟು ಹಾಕುತ್ತಿದ್ದಾರೆ? ಎಂಬ ಪ್ರಶ್ನೆಗಳನ್ನು ತಮಗೆ ತಾವೇ ಕೇಳಿಕೊಳ್ಳಲಿಲ್ಲ.

ಹೀಗೆ ಸರಕಾರಿ ಶಾಲೆಗಳು ಮುಚ್ಚುವುದರಿಂದ ಆಗುತ್ತಿರುವ ಅನಾಹುತಗಳೇನು? ಮುಖ್ಯವಾಗಿ ಅಳಿದುಳಿದ ಬಡ, ಕೆಳಜಾತಿಯ ಮಕ್ಕಳು ಶಾಲೆ ಕಲಿಯುವ ಅವಕಾಶವನ್ನೇ ಕಳೆದುಕೊಳ್ಳುತ್ತಾರೆ. ಸರಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳಿಂದ ಈ ಮಕ್ಕಳಿಗೆ ಎರಡು ಅವಕಾಶಗಳಿವೆ. ಒಂದು, ಉಚಿತ ಶಿಕ್ಷಣ ದೊರಕುತ್ತದೆ. ಜೊತೆಗೆ ಇಂಗ್ಲಿಷ್ ಭಾಷೆಯ ಜ್ಞಾನವೂ ಇವರದಾಗುತ್ತದೆ. ಖಾಸಗಿ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಸಮವಾಗಿ ಇವರು ನಿಂತುಕೊಳ್ಳುತ್ತಾರೆ. ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ವಿರೋಧಿಸುವ ಭೈರಪ್ಪರಂತಹ ಹಿರಿಯ 'ಬ್ರಾಹ್ಮಣ್ಯ ಮನಸ್ಸಿನ' ಲೇಖಕರ ಚಿಂತೆ ಇದುವೇ ಆಗಿದೆ. ಸರಕಾರಿ ಶಾಲೆಯೇ ಅಳಿಯುತ್ತಿದೆ ಎಂದ ಮೇಲೆ, ಅಲ್ಲಿ ಇಂಗ್ಲಿಷ್ ಕಲಿಸಿದರೇನು? ಕನ್ನಡ ಕಲಿಸಿದರೇನು? ಕನಿಷ್ಠ ಒಂದು ಪ್ರಯೋಗವಾಗಿಯಾದರೂ ಈ ಸರಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ನಾವು ಬೆಂಬಲಿಸಬೇಕಾಗಿದೆ.

ಸರಕಾರಿ ಶಾಲೆಗಳು ಅಳಿದರೆ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಎಳ್ಳಷ್ಟು ಕಾಳಜಿಯಿಲ್ಲದ ಜನರಿಂದ ಕನ್ನಡ ಉಳಿಸುವ ಮಾತುಗಳನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿಲ್ಲ. ಇಂದು ನಮಗೆ ಬೇಕಾಗಿರುವುದು ಸರಕಾರಿ ಶಾಲೆಗಳನ್ನು ಉಳಿಸುವುದು. ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯುವ ಮೂಲಕ ಸರಕಾರಿ ಶಾಲೆಗಳು ಉಳಿಯುತ್ತವೆಯೆಂದಾದರೆ ಎಲ್ಲ ಶಾಲೆಗಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಾಗಿ ಪರಿವರ್ತಿಸಬೇಕು. ಇದೇ ಸಂದರ್ಭದಲ್ಲಿ ಇಂಗ್ಲಿಷ್ ಮಾಧ್ಯಮದ ಜೊತೆಗೇ ಕನ್ನಡವನ್ನು ಉಳಿಸುವ ದಾರಿಯನ್ನು ಕಂಡುಕೊಳ್ಳಬೇಕು. ಅಂದರೆ ಶ್ರೀಸಾಮಾನ್ಯರ ಇಂಗ್ಲಿಷ್ ವ್ಯಾಮೋಹವನ್ನು ಬಳಸಿಕೊಂಡೇ, ಕನ್ನಡವನ್ನು ಉಳಿಸಬೇಕಾದಂತಹ ವರ್ತಮಾನದಲ್ಲಿ ನಾವಿದ್ದೇವೆ.

 ಈ ಹಿಂದೆ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನದಿಂದ ಅನಂತಮೂರ್ತಿಯವರು 'ಇಂಗ್ಲಿಷ್ ಮತ್ತು ಕನ್ನಡ ಜೊತೆ ಜೊತೆಯಾಗಿ ಹೆಜ್ಜೆಯಿಡಬೇಕು' ಎಂದು ಕರೆ ನೀಡಿದ್ದರು. ಇಂದು ಉಳಿದ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕನ್ನಡಕ್ಕೆ ಆದ್ಯತೆಯನ್ನು ನೀಡಲಾಗುತ್ತಿಲ್ಲ. ಆದುದರಿಂದಲೇ, ಹೊಸತಲೆಮಾರು ಕನ್ನಡದಿಂದ ಮಾರು ದೂರ ನಿಂತಿವೆ. ಪರಿಸ್ಥಿತಿ ಹೀಗೇ ಮುಂದುವರಿದರೆ, ಇನ್ನೊಂದು ಇಪ್ಪತ್ತು ವರ್ಷಗಳಲ್ಲಿ ಕನ್ನಡ ಮಾತನಾಡಲು, ಓದಲು ಬರುವ ತಲೆಮಾರು ಸಂಪೂರ್ಣ ಅಳಿದು ಹೋಗಬಹುದು. ಬದುಕಿಗೆ ಇಂಗ್ಲಿಷ್ ಅನಿವಾರ್ಯ ಎನ್ನುವ ಪೋಷಕರ, ಪಾಲಕರ ಆತಂಕಗಳನ್ನು ಖಾಸಗಿ ಶಾಲೆಗಳು ತಮ್ಮ ಬಂಡವಾಳವನ್ನಾಗಿಸಿದೆ. ಅದೇ ತಂತ್ರವನ್ನು ಇಂದು ನಾವು ಸರಕಾರಿ ಶಾಲೆಗಳನ್ನು ಉಳಿಸಲು ಬಳಸಬೇಕಾಗಿದೆ. ಇಂಗ್ಲಿಷ್ ಮಾಧ್ಯಮದ ಜೊತೆಗೆ ಒಂದನೇ ತರಗತಿಯಿಂದಲೇ ಕನ್ನಡವನ್ನು ಸರಕಾರಿ ಶಾಲೆಗಳಲ್ಲಿ ಪರಿಣಾಮಕಾರಿಯಾಗಿ ಕಲಿಸಿಕೊಡಬೇಕಾಗಿದೆ. ಹಾಗೆಯೇ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಪರಿಣಾಮಕಾರಿಯಾಗಿ ಇಂಗ್ಲಿಷ್‌ನ್ನು ಹೇಳಿಕೊಡುವ ವ್ಯವಸ್ಥೆಯನ್ನು ಮಾಡಬೇಕು.

ಹೀಗೆ ಕನ್ನಡ ಇಂಗ್ಲಿಷ್‌ನ ಹೆಗಲ ಮೇಲೆ ಕೈಯಿಟ್ಟುಕೊಂಡೇ ಮುಂದೆ ಹೋಗಬೇಕು. ಇದು ಅನಿವಾರ್ಯ. ಬ್ಯಾಂಕು, ನ್ಯಾಯಾಲಯ, ಸರಕಾರಿ ಕಚೇರಿ, ಐಟಿ, ಬಿಟಿ ಎಲ್ಲೆಡೆಯೂ ಇಂಗ್ಲಿಷ್ ಇಲ್ಲದೆ ಪ್ರವೇಶಿಸಲು ಸಾಧ್ಯವಿಲ್ಲ ಎನ್ನುವ ಸನ್ನಿವೇಶವನ್ನು ತಂದಿಟ್ಟುಕೊಂಡು, ಬಡವರು ಇಂಗ್ಲಿಷ್‌ನಲ್ಲಿ ಕಲಿಯಬಾರದು ಎನ್ನುವುದು ಒಂದು ವರ್ಗದ ಸ್ವಾರ್ಥವಾಗುತ್ತದೆ. ಸರಿ, ಇಂಗ್ಲಿಷ್ ಮಾಧ್ಯಮ ಬೇಡವೇ ಬೇಡ ಎನ್ನುವುದು ಈ ಸಾಹಿತಿಗಳ, ಚಿಂತಕರ ವಾದವಾದರೆ ಅವರು ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸುವುದಕ್ಕೆ ಹೋರಾಡಲಿ. ಸಮಾನ ರೀತಿಯ ಶಿಕ್ಷಣ ಎಲ್ಲರಿಗೂ ಸಿಗುವಂತಾಗುವುದಕ್ಕೆ ಚಳವಳಿ ರೂಪಿಸಲಿ. ಇಲ್ಲವಾದರೆ ಶಿಕ್ಷಣದಲ್ಲಿ ವ್ಯಾಪಕ ಅಂತರವೊಂದು ಸೃಷ್ಟಿಯಾಗುತ್ತದೆ. ಇದು ಬಡವರನ್ನು, ಕೆಳಜಾತಿಗಳನ್ನು ಇನ್ನಷ್ಟು ಹಿಂದಕ್ಕೆ ತಳ್ಳುತ್ತದೆ. ದುಡ್ಡುಳ್ಳವರನ್ನು ಮೇಲೆತ್ತುತ್ತದೆ. ಆದುದರಿಂದ ಕನ್ನಡವನ್ನು ಉಳಿಸಲು, ಸರಕಾರಿ ಶಾಲೆಗಳನ್ನು ಉಳಿಸಲು ಸದ್ಯಕ್ಕೆ ಇಂಗ್ಲಿಷ್ ಮಾಧ್ಯಮ ಅನಿವಾರ್ಯವೇ ಆಗಿದ್ದರೆ ಅದನ್ನು ಜಾರಿಗೊಳಿಸುವುದು ಉತ್ತಮ. ಇಂಗ್ಲಿಷ್‌ನ ಹೆಗಲೇರಿ ಕನ್ನಡ ಮುಂದಕ್ಕೆ ಚಲಿಸಲಿ. ಕನ್ನಡ-ಇಂಗ್ಲಿಷ್ ಎರಡನ್ನೂ ಮೈಗೂಡಿಸಿಕೊಂಡ ವಿದ್ಯಾರ್ಥಿ, ಯಾವುದೇ ಕಾನ್ವೆಂಟ್‌ನ ವಿದ್ಯಾರ್ಥಿಗಿಂತ ಹೆಚ್ಚು ಸಮೃದ್ಧನಾಗಿರುತ್ತಾನೆ. ಸೃಜನಶೀಲನಾಗಿರುತ್ತಾನೆ. ಸರಕಾರ ಯಾವ ಕಾರಣಕ್ಕೂ ಇಂಗ್ಲಿಷ್ ಮಾಧ್ಯಮದಿಂದ ಹಿಂದೆ ಸರಿಯಬಾರದು. ಜೊತೆಗೇ ಕನ್ನಡವನ್ನೂ ಅಷ್ಟೇ ಪರಿಣಾಮಕಾರಿಯಾಗಿ ಆ ವಿದ್ಯಾರ್ಥಿಗಳು ತನ್ನದಾಗಿಸಿಕೊಳ್ಳುವಂತೆ ವ್ಯವಸ್ಥೆ ಮಾಡಿಕೊಡಲು ಮರೆಯಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News