ಅನಿರ್ದಿಷ್ಟಾವಧಿಗೆ ಸದನ ಮುಂದೂಡಿದ ಸ್ಪೀಕರ್: ಚರ್ಚೆಯಿಲ್ಲದೆ ವಿಧೇಯಕಗಳ ಅಂಗೀಕಾರ

Update: 2018-12-21 13:50 GMT

ಬೆಳಗಾವಿ, ಡಿ.21: ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲಮನ್ನಾ ಕುರಿತು ಸರಕಾರದ ಸ್ಪಷ್ಟಣೆ ಹಾಗೂ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಬಳಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕ್ಷಮೆ ಯಾಚಿಸಬೇಕೆಂದು ಪ್ರತಿಪಕ್ಷ ಬಿಜೆಪಿ ಸದಸ್ಯರು, ಕಳೆದ ಎರಡು ದಿನಗಳಿಂದ ನಡೆಸುತ್ತಿರುವ ಧರಣಿಯೂ, ಅಧಿವೇಶದ ಕೊನೆಯ ದಿನವಾದ ಇಂದು ಮುಂದುವರೆಯಿತು.

ಶುಕ್ರವಾರ ಬೆಳಗ್ಗೆ 11.15ಕ್ಕೆ ವಿಧಾನಸಭೆಯ ಕಲಾಪ ಆರಂಭಗೊಳ್ಳುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿ ಸದಸ್ಯರು, ಸ್ಪೀಕರ್ ಪೀಠದ ಎದುರಿನ ಬಾವಿಗಿಳಿದು, ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ಧರಣಿ ಮುಂದುವರೆಸಿದರು. ಗದ್ದಲದ ನಡುವೆಯೇ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಭೈರೇಗೌಡ ಮಂಡಿಸಿದ, 2018ನೇ ಸಾಲಿನ ಕರ್ನಾಟಕ ಸಿವಿಲ್ ಸೇವೆಗಳ(ನೇಮಕಾತಿ ಸಮಯದಲ್ಲಿ ಅಭ್ಯರ್ಥಿಗಳ ಆಯ್ಕೆಯ ಕಾರ್ಯವಿಧಾನ)ವಿಧೇಯಕ ಹಾಗೂ 2018ನೇ ಸಾಲಿನ ಕರ್ನಾಟಕ ವಿಧಾನಮಂಡಲ(ಅನರ್ಹತಾ ನಿವಾರಣಾ)(ತಿದ್ದುಪಡಿ)ವಿಧೇಯಕವನ್ನು ಬಿಜೆಪಿ ಸದಸ್ಯರ ಧರಣಿ ನಡುವೆಯೇ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

ರಾಜೀವ್‍ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸೆನೆಟ್‍ಗೆ ಮೂವರು ಸದಸ್ಯರನ್ನು ನಾಮನಿರ್ದೇಶನ ಮಾಡುವ ಅಧಿಕಾರವನ್ನು ಸಭಾಧ್ಯಕ್ಷರಿಗೆ ನೀಡಲು ಉದ್ದೇಶಿಸಿರುವ 2018ನೇ ಸಾಲಿನ ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ(ತಿದ್ದುಪಡಿ) ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.

ಅಲ್ಲದೇ, ವಿಧಾನಸಭೆಯಿಂದ ಅಂಗೀಕಾರವಾದ ರೂಪದಲ್ಲಿ ಮತ್ತು ವಿಧಾನಪರಿಷತ್ತಿನಿಂದ ತಿದ್ದುಪಡಿಗಳೊಂದಿಗೆ ಅಂಗೀಕಾರವಾದ ರೂಪದಲ್ಲಿರುವ 2018ನೇ ಸಾಲಿನ ರೈತ ತಾಂತ್ರಿಕ ವಿಶ್ವವಿದ್ಯಾಲಯ, ಬೆಂಗಳೂರು(ತಿದ್ದುಪಡಿ) ವಿಧೇಯಕವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು. ಆನಂತರ, ಸದನದಲ್ಲಿ ಉತ್ತರಿಸುವ ಹಾಗೂ ಲಿಖಿತ ಮೂಲಕವಾಗಿ ಸಲ್ಲಿಸುವ ಪ್ರಶ್ನೋತ್ತರಗಳು, ಗಮನ ಸೆಳೆಯುವ ಸೂಚನೆಗಳಿಗೆ ಸರಕಾರದ ಉತ್ತರಗಳನ್ನು ಸದನದಲ್ಲಿ ಮಂಡಿಸಲು ಅವಕಾಶ ನೀಡಿ, ಸ್ಪೀಕರ್ ಕೆ.ಆರ್.ರಮೇಶ್‍ಕುಮಾರ್, ರಾಷ್ಟ್ರಗೀತೆಯೊಂದಿಗೆ ವಿಧಾನಸಭೆಯ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News