40 ಗಂಟೆ 45 ನಿಮಿಷ ನಡೆದ ವಿಧಾನಸಭೆ ಕಾರ್ಯಕಲಾಪ: ಸ್ಪೀಕರ್ ರಮೇಶ್‍ ಕುಮಾರ್

Update: 2018-12-21 13:06 GMT

ಬೆಳಗಾವಿ, ಡಿ.21: ಬೆಳಗಾವಿಯ ಸುವರ್ಣ ವಿಧಾನಸೌಧದ ವಿಧಾನಸಭೆ ಸಭಾಂಗಣದಲ್ಲಿ ಡಿ.10 ರಿಂದ 21ರವರೆಗೆ 10 ದಿನಗಳ ಕಲಾಪವನ್ನು ನಡೆಸಲಾಗಿದ್ದು, ಒಟ್ಟಾರೆ 40 ಗಂಟೆ 45 ನಿಮಿಷ ಕಾರ್ಯಕಲಾಪಗಳನ್ನು ನಡೆಸಲಾಗಿದೆ ಎಂದು ಸ್ಪೀಕರ್ ಕೆ.ಆರ್.ರಮೇಶ್‍ ಕುಮಾರ್ ತಿಳಿಸಿದರು.

ಶುಕ್ರವಾರ ವಿಧಾನಸಭೆಯ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಬಳಿಕ ಸುವರ್ಣ ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಅಧಿವೇಶನದಲ್ಲಿ ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಕೇಂದ್ರದ ಮಾಜಿ ಸಚಿವರಾದ ಎಚ್.ಎನ್.ಅನಂತಕುಮಾರ್, ಡಾ.ಎಂ.ಎಚ್.ಅಂಬರೀಶ್, ಸಿ.ಕೆ.ಜಾಫರ್ ಶರೀಫ್ ಸೇರಿದಂತೆ ಇನ್ನಿತರ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು ಎಂದರು.

2018-19ನೇ ಸಾಲಿನ ಪೂರಕ ಅಂದಾಜುಗಳ ಮೊದಲನೆ ಕಂತನ್ನು ಡಿ.13ರಂದು ಮಂಡಿಸಿದ್ದು, ಬೇಡಿಕೆಗಳ ಮೇಲಿನ ಚರ್ಚೆ ಮತ್ತು ಸರಕಾರದ ಉತ್ತರದ ನಂತರ ಡಿ.18ರಂದು ಮತಕ್ಕೆ ಹಾಕಿ ಅಂಗೀಕರಿಸಲಾಯಿತು. 2018-19ನೇ ಸಾಲಿನ ರಾಜ್ಯ ಹಣಕಾಸಿನ ಮಧ್ಯ ವಾರ್ಷಿಕ ಪರಿಶೀಲನಾ ವರದಿಯನ್ನು ಡಿ.13ರಂದು ಮಂಡಿಸಲಾಯಿತು ಎಂದು ಅವರು ಹೇಳಿದರು.

ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರು 2017ರ ಮಾ.31ಕ್ಕೆ ಕೊನೆಗೊಂಡ ವರ್ಷಕ್ಕೆ ನೀಡಿರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಘನತ್ಯಾಜ್ಯ ನಿರ್ವಹಣೆಯ ಮೇಲಿನ ಕಾರ್ಯನಿರ್ವಹಣೆಯ ಲೆಕ್ಕಪರಿಶೋಧನಾ ವರದಿ ಮತ್ತು ಸರಕಾರಿ ಭೂಮಿ ಮಂಜೂರಾತಿ, ಗುತ್ತಿಗೆ ಒತ್ತುವರಿಗಳ ತೆರವುಗೊಳಿಸುವಿಕೆ ಹಾಗೂ ಅಕ್ರಮ ಹಿಡುವಳಿಗಳನ್ನು ಸಕ್ರಮಗೊಳಿಸುವ ವರದಿಗಳನ್ನು ಡಿ.17ರಂದು ಮಂಡಿಸಲಾಯಿತು ಎಂದು ಅವರು ತಿಳಿಸಿದರು.

ಪ್ರಸ್ತುತ ಅಧಿವೇಶನದಲ್ಲಿ 13 ಅರ್ಜಿಗಳನ್ನು ಸದನಕ್ಕೆ ಒಪ್ಪಿಸಲಾಗಿದೆ. 15ನೇ ವಿಧಾನಸಭೆಯ ಸರಕಾರಿ ಭರವಸೆಗಳ ಸಮಿತಿಯ ಮೊದಲನೆ ವರದಿ, ಖಾಸಗಿ ವಿಧೇಯಕ ಹಾಗೂ ನಿರ್ಣಯಗಳ ಸಮಿತಿಯ ಮೊದಲನೆ ಮತ್ತು ಎರಡನೆ ವರದಿಗಳು, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಮಧ್ಯಂತರ ವರದಿಗಳನ್ನು ಹಾಗೂ ಅನುಸೂಚಿತ ಜಾತಿ ಮತ್ತು ಪಂಗಡಗಳ ಕಲ್ಯಾಣ ಸಮಿತಿಯ ಮೊದಲನೇ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ ಎಂದು ರಮೇಶ್‍ ಕುಮಾರ್ ಹೇಳಿದರು.

ನಿಯಮ 60ರ ಮೇರೆಗೆ ಒಟ್ಟು 4 ಸೂಚನೆಗಳನ್ನು ಸ್ವೀಕರಿಸಲಾಗಿದ್ದು, ಆ ಪೈಕಿ 2 ಸೂಚನೆಗಳನ್ನು ನಿಯಮ 69ಕ್ಕೆ ಪರಿವರ್ತಿಸಲಾಗಿದೆ. ಶೂನ್ಯವೇಳೆಯಲ್ಲಿ ಒಟ್ಟು 42 ಸೂಚನೆಗಳನ್ನು ಸ್ವೀಕರಿಸಲಾಗಿದ್ದು, ಆ ಪೈಕಿ 24 ಸೂಚನೆಗಳ ಮೇಲೆ ಸದನದಲ್ಲಿ ಚರ್ಚೆ ನಡೆದಿದೆ. ನಿಯಮ 69ರಲ್ಲಿ ಒಟ್ಟು 34 ಸೂಚನೆಗಳನ್ನು ಸ್ವೀಕರಿಸಲಾಗಿದ್ದು, ನಿಯಮ 60 ರಿಂದ ನಿಯಮ 69ಕ್ಕೆ ಪರಿವರ್ತಿಸಲಾದ 2 ಸೂಚನೆಗಳೂ ಸೇರಿದಂತೆ ಒಟ್ಟು 36 ಸೂಚನೆಗಳ ಪೈಕಿ 5 ಸೂಚನೆಗಳನ್ನು ಚರ್ಚಿಸಲಾಗಿದೆ ಎಂದು ಅವರು ತಿಳಿಸಿದರು.

3060 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಸದನದಲ್ಲಿ ಉತ್ತರಿಸುವ 150 ಪ್ರಶ್ನೆಗಳ ಪೈಕಿ 146ಕ್ಕೆ ಹಾಗೂ ಲಿಖಿತ ಮೂಲಕ ಉತ್ತರಿಸುವ 2217 ಪ್ರಶ್ನೆಗಳ ಪೈಕಿ 1978 ಪ್ರಶ್ನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ. ನಿಯಮ 351ರಡಿಯಲ್ಲಿ 152 ಸೂಚನೆಗಳಲ್ಲಿ 82 ಸೂಚನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ ಎಂದು ರಮೇಶ್‍ ಕುಮಾರ್ ಹೇಳಿದರು.

2 ಖಾಸಗಿ ಸದಸ್ಯರ ನಿರ್ಣಯಗಳನ್ನು ಸ್ವೀಕರಿಸಲಾಗಿದೆ. 257 ಗಮನ ಸೆಳೆಯುವ ಸೂಚನಾ ಪತ್ರಗಳನ್ನು ಸ್ವೀಕರಿಸಿದ್ದು, 116 ಸೂಚನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ. ಆ ಪೈಕಿ 17 ಸೂಚನೆಗಳ ಬಗ್ಗೆ ಸದನದಲ್ಲಿ ಚರ್ಚಿಸಲಾಗಿದ್ದು, ಸರಕಾರದಿಂದ ಬಂದಿರುವ ಉತ್ತರಗಳನ್ನು ಸದನದಲ್ಲಿ ಮಂಡಿಸಲಾಗಿದೆ. ಅರ್ಧಗಂಟೆ ಕಾಲಾವಧಿ ಚರ್ಚೆಗೆ ಸಂಬಂಧಿಸಿದಂತೆ 15 ಸೂಚನೆಗಳನ್ನು ಸ್ವೀಕರಿಸಲಾಗಿದ್ದು, ಆ ಪೈಕಿ 14 ಸೂಚನೆಗಳಿಗೆ ಉತ್ತರಗಳನ್ನು ಸ್ವೀಕರಿಸಲಾಗಿದೆ ಎಂದು ಅವರು ತಿಳಿಸಿದರು.

4 ಹಕ್ಕುಚ್ಯುತಿ ಸೂಚನೆಗಳನ್ನು ಸ್ವೀಕರಿಸಿದ್ದು, 2 ಹಕ್ಕುಚ್ಯುತಿ ಸೂಚನೆಗಳನ್ನು ಸದನದಲ್ಲಿ ಪ್ರಸ್ತಾಪಿಸಲಾಗಿದೆ. ನಂತರ ಅವುಗಳ ಮಂಡನೆಗೆ ಅನುಮತಿಯನ್ನು ನಿರಾಕರಿಸಲಾಗಿದೆ. ಒಟ್ಟು 12 ವಿಧೇಯಕಗಳನ್ನು ಮಂಡಿಸಲಾಗಿದ್ದು, 8 ವಿಧೇಯಕಗಳನ್ನು ಅಂಗೀಕರಿಸಲಾಗಿದೆ. ರಾಜ್ಯ ವಿಧಾನಸಭೆಯಿಂದ ಅಂಗೀಕಾರವಾದ ರೂಪದಲ್ಲಿ ಮತ್ತು ವಿಧಾನಪರಿಷತ್ತಿನಿಂದ ತಿದ್ದುಪಡಿಗಳೊಂದಿಗೆ ಅಂಗೀಕಾರವಾದ ರೂಪದಲ್ಲಿರುವ 2018ನೇ ಸಾಲಿನ ರೈ ತಾಂತ್ರಿಕ ವಿಶ್ವವಿದ್ಯಾಲಯ, ಬೆಂಗಳೂರು(ತಿದ್ದುಪಡಿ) ವಿಧೇಯಕವನ್ನು ಡಿ.21ರಂದು ಪುನರ್ ಪರ್ಯಾಲೋಚಿಸಿ ಅಂಗೀಕರಿಸಲಾಗಿದೆ ಎಂದು ಅವರು ಹೇಳಿದರು.

ರಾಜೀವ್‍ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್‍ಗೆ ಮೂರು ಜನ ಸದಸ್ಯರನ್ನು ನಾಮ ನಿರ್ದೇಶನ ಮಾಡಲು ಸದನವು ಸಭಾಧ್ಯಕ್ಷರಿಗೆ ಡಿ.21ರಂದು ಅಧಿಕಾರ ನಿಡಿದೆ ಎಂದು ರಮೇಶ್‍ ಕುಮಾರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಉಪಸಭಾಧ್ಯಕ್ಷ ಎಂ.ಕೃಷ್ಣಾರೆಡ್ಡಿ ಉಪಸ್ಥಿತರಿದ್ದರು.

ಅಧಿವೇಶನಕ್ಕೆ ಆಗಮಿಸುವವರಿಗೆ ಒದಗಿಸಲಾಗುವ ಸೌಲಭ್ಯಗಳು, ಗುಣಮಟ್ಟದಲ್ಲಿ ಯಾವುದೇ ರಾಜಿಮಾಡಿಕೊಳ್ಳಲಿಲ್ಲ. ಕಳೆದ ಸಾಲಿನ ಅಧಿವೇಶನಕ್ಕೆ 22 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿತ್ತು. ಈ ಬಾರಿ ಸುಮಾರು 8-10 ಕೋಟಿ ರೂ.ಗಳನ್ನು ಉಳಿಸಲಾಗಿದೆ. ಮೇಲ್ನೋಟಕ್ಕೆ ಅನಗತ್ಯ ಹಾಗೂ ದುಬಾರಿ ವೆಚ್ಚ ಎಂದು ಕಂಡು ಬಂದಿದ್ದನ್ನು ನಿಯಂತ್ರಿಸಲು ವಿಶೇಷ ಅಧಿಕಾರಿಯನ್ನಾಗಿ ಉಜ್ವಲ್ ಕುಮಾರ್ ಘೋಷ್‍ರನ್ನು ನೇಮಕ ಮಾಡಲಾಗಿತ್ತು. ಅಧಿವೇಶನ 60 ದಿನಗಳ ನಡೆಯಬೇಕು ಎಂಬುದು ನಮ್ಮ ಉದ್ದೇಶ. ಈ ಸಂಬಂಧ ಸರಕಾರ ನಿರ್ಣಯ ಕೈಗೊಳ್ಳಬೇಕು.

-ಕೆ.ಆರ್.ರಮೇಶ್‍ ಕುಮಾರ್, ಸ್ಪೀಕರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News