ಅಲ್ಕಾ ಲಂಬಾಗೆ ಆಮ್ ಆದ್ಮಿ ಗೇಟ್‌ಪಾಸ್

Update: 2018-12-22 04:26 GMT

ಹೊಸದಿಲ್ಲಿ, ಡಿ.22: 1984ರಲ್ಲಿ ನಡೆದ ಸಿಕ್ಖ್ ವಿರೋಧಿ ಹಿಂಸಾಚಾರ ನಿಯಂತ್ರಿಸುವಲ್ಲಿ ವಿಫಲರಾಗಿದ್ದರು ಎಂದು ಆರೋಪಿಸಿ ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರಿಗೆ ನೀಡಿರುವ ಭಾರತರತ್ನ ಪ್ರಶಸ್ತಿಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸುವ ನಿರ್ಣಯವನ್ನು ಆಂಗೀಕರಿಸಲು ದಿಲ್ಲಿ ವಿಧಾನಸಭೆ ನಿರಾಕರಿಸಿದ ಬೆನ್ನಲ್ಲೇ, ಆಮ್ ಆದ್ಮಿ ಪಕ್ಷದ ಶಾಸಕಿ ಅಲ್ಕಾ ಲಂಬಾ ಅವರಿಗೆ ತಕ್ಷಣ ಪಕ್ಷ ತೊರೆಯುವಂತೆ ಸೂಚನೆ ನೀಡಲಾಗಿದೆ.

ಲಂಬಾ ರಾಜೀನಾಮೆ ಸೂಚನೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಆದರೆ ರಾಜೀವ್‌ ಗಾಂಧಿಯವರ ಭಾರತರತ್ನ ವಾಪಸ್ ಪಡೆಯುವಂತೆ ಶಿಫಾರಸು ಮಾಡುವ ನಿರ್ಣಯ ಆಂಗೀಕರಿಸುವ ವಿಚಾರದಲ್ಲಿ ಲಂಬಾ ಹಠಮಾರಿ ಧೋರಣೆ ತೋರಿದ್ದೇ ಇದಕ್ಕೆ ಕಾರಣ ಎಂದು ಪಕ್ಷದ ಮೂಲಗಳು ಹೇಳಿವೆ.

"ಪಕ್ಷ ನನ್ನ ರಾಜೀನಾಮೆಗೆ ಸೂಚಿಸಿದೆ. ನಾನು ರಾಜೀನಾಮೆ ನೀಡಲು ಸಿದ್ಧ; ಆದರೆ ರಾಜೀವ್‌ ಗಾಂಧಿ ಈ ದೇಶಕ್ಕಾಗಿ ಸಾಕಷ್ಟು ತ್ಯಾಗ ಮಾಡಿದ್ದಾರೆ. ಅವರ ಭಾರತರತ್ನ ಪ್ರಶಸ್ತಿ ವಾಪಸ್ ಪಡೆಯುವಂತೆ ಒತ್ತಾಯಿಸುವ ನಿರ್ಣಯಕ್ಕೆ ನಾನು ಬೆಂಬಲ ನೀಡುವುದಿಲ್ಲ. ಪಕ್ಷದ ನಿರ್ಧಾರಕ್ಕೆ ವಿರುದ್ಧವಾಗಿ ನಿಂತ ಕಾರಣಕ್ಕೆ ರಾಜೀನಾಮೆಗೆ ಸೂಚಿಸಲಾಗಿದೆ" ಎಂದು ಎಎನ್‌ಐಗೆ ಲಂಬಾ ಸ್ಪಷ್ಟಪಡಿಸಿದ್ದಾರೆ.

ದಿಲ್ಲಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಆಂಗೀಕರಿಸಿರುವ ನಿರ್ಣಯಕ್ಕೆ ತಿದ್ದುಪಡಿ ತಂದು, ರಾಜೀವ್ ಅವರಿಗೆ ನೀಡಿದ್ದ ಭಾರತರತ್ನ ಹಿಂಪಡೆಯಬೇಕು ಎಂದೂ ಆಗ್ರಹಿಸಲಾಗಿತ್ತು. ಆದರೆ ಪಕ್ಷ ಆ ಬಳಿಕ ಸ್ಪಷ್ಟನೆ ನೀಡಿ, ನಿರ್ಣಯದ ಈ ಭಾಗವನ್ನು ಕೈಯಲ್ಲಿ ಬರೆದಿರುವ ಕಾರಣ ಇದನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು.

"ಸದನದ ಮುಂದೆ ಮಂಡಿಸಿದ ಮತ್ತು ಸದಸ್ಯರಿಗೆ ವಿತರಿಸಿದ ಕರಡು ನಿರ್ಣಯದಲ್ಲಿ ರಾಜೀವ್ ವಿಚಾರ ಪ್ರಸ್ತಾಪ ಇರಲಿಲ್ಲ. ಆದರೆ ಒಬ್ಬ ಶಾಸಕ ಈ ಕರಡು ನಿರ್ಣಯಕ್ಕೆ ತಿದ್ದುಪಡಿ ತರುವಂತೆ ಕೈಬರಹದಲ್ಲಿ ಒಕ್ಕಣೆ ಸೇರಿಸಿದ್ದಾರೆ. ಇಂಥ ತಿದ್ದುಪಡಿ ಸ್ವೀಕಾರಾರ್ಹವಲ್ಲ" ಎಂದು ಪಕ್ಷದ ಶಾಸಕ ಸೌರಭ್ ಭಾರಧ್ವಾಜ್ ಟ್ವೀಟ್ ಮಾಡಿದ್ದಾರೆ. ಇದನ್ನು ಪಕ್ಷದ ಹಿರಿಯ ಶಾಸಕ ಸೋಮನಾಥ್ ಭಾರ್ತಿ ಕೂಡಾ ಬೆಂಬಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News