ಸೊಹ್ರಾಬುದ್ದೀನ್ ಎನ್ ಕೌಂಟರ್ ಪ್ರಕರಣದ ತೀರ್ಪು ಪ್ರಕಟಿಸುವಾಗ ‘ನಾನು ಅಸಹಾಯಕ’' ಎಂದ ನ್ಯಾಯಾಧೀಶ

Update: 2018-12-22 10:49 GMT

ಮುಂಬೈ, ಡಿ.22: ಶುಕ್ರವಾರ ಅಪರಾಹ್ನ ಸಿಬಿಐ ವಿಶೇಷ ನ್ಯಾಯಾಲಯ ಸೊಹ್ರಾಬುದ್ದೀನ್ ಶೇಖ್ `ನಕಲಿ' ಎನ್ ಕೌಂಟರ್ ಪ್ರಕರಣದ ತೀರ್ಪು ಪ್ರಕಟಿಸಿದಾಗ ಕಿಕ್ಕಿರಿದು ತುಂಬಿದ್ದ ಕೋರ್ಟ್ ಸಭಾಂಗಣದಲ್ಲಿ ಎಲ್ಲಾ 22 ಮಂದಿ ಆರೋಪಿಗಳೂ ಹಾಜರಿದ್ದರಲ್ಲದೆ ತಮ್ಮನ್ನು ಖುಲಾಸೆಗೊಳಿಸಲಾಗಿದೆ ಎಂದು ತಿಳಿಯುತ್ತಲೇ ತಮ್ಮ ಕುಟುಂಬ ಸದಸ್ಯರಿಗೆ ಕರೆ ಮಾಡಿ ಈ ಸಿಹಿ ಸುದ್ದಿ ತಿಳಿಸಲು ಹಾತೊರೆದಿದ್ದರು. ಅವರೆಲ್ಲರೂ ಈ ಹಿಂದೆಯೇ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.

ಈ ಪ್ರಕರಣದಲ್ಲಿ ಈ ಹಿಂದೆಯೇ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಬಿಜೆಪಿ ನಾಯಕ ಗುಲಾಬ್ ಚಂದ್ ಕಟಾರಿಯಾ, ಐಪಿಎಸ್ ಅಧಿಕಾರಿಗಳಾದ ಡಿ.ಜಿ. ವಂಝಾರ, ಅಭಯ್ ಚುಡಾಸಮ, ಗೀತಾ ಜೊಹಿರಿ, ದಿನೇಶ್ ಎಂ.ಎನ್. ಹಾಗೂ ರಾಜಕುಮಾರ್ ಪಾಂಡ್ಯನ್ ಅವರನ್ನೂ ಖುಲಾಸೆಗೊಳಿಸಲಾಗಿತ್ತು.

ಸೊಹ್ರಾಬುದ್ದೀನ್ ಬಗ್ಗೆ ಉಲ್ಲೇಖಿಸಿದ ನ್ಯಾಯಾಲಯ ಆತನ ಸಾವಿಗೆ ಹತ್ಯೆ ಕಾರಣ ಹಾಗೂ ಆತ ಗುಂಡಿನೇಟಿನಿಂದಾದ ಗಾಯಗಳಿಂದ ಸತ್ತಿದ್ದಾನೆಂಬುದು ಖಚಿತ ಎಂದು ಹೇಳಿದೆ. “ಆದರೆ ನಾನು ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಈ ಆರೋಪಿಗಳು ಈ ಅಪರಾಧಕ್ಕೆ ಕಾರಣರೇ?, ಅವರು  ಇದಕ್ಕೆ  ಉತ್ತರಿಸಬೇಕೇ?, ಆರೋಪಿಗಳು ಸ್ಥಳದಲ್ಲಿದ್ದರೇ ಎಂಬುದಕ್ಕೆ ಪೂರಕ ಸಾಕ್ಷ್ಯಗಳು ಕಂಡು ಬಂದಿಲ್ಲ'' ಎಂದು ನ್ಯಾಯಾಧೀಶ ಶರ್ಮ ಹೇಳಿದರು. “ನಾನು ಅಸಹಾಯಕ, ನ್ಯಾಯಾಲಯ ಯಾವತ್ತೂ ಸಾಕ್ಷ್ಯಗಳ ಆಧಾರದಲ್ಲಿಯೇ ಕಾರ್ಯಾಚರಿಸುತ್ತದೆ'' ಎಂದೂ ಅವರು ಹೇಳಿದರು. “ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ನಂತರವೂ ಸಂಚು  ಅಥವಾ ಈ 22 ಮಂದಿ ಹಾಗೂ ಮೂರು ಸಾವಿನ ನಡುವಿನ ನಂಟು ತಿಳಿಯಲು ಸಾಧ್ಯವಾಗಿಲ್ಲ. ಸಾಕ್ಷಿಗಳು ತಿರುಗಿಬಿದ್ದರೆ ಪ್ರಾಸಿಕ್ಯೂಶನ್ ಅನ್ನು ದೂರಲು ಸಾಧ್ಯವಿಲ್ಲ'' ಎಂದೂ ಅವರು ಹೇಳಿದರು.

ಪ್ರಾಸಿಕ್ಯೂಶನ್ ಪ್ರಕಾರ ನವೆಂಬರ್ 23, 2005ರಂದು ಸೊಹ್ರಾಬುದ್ದೀನ್, ಕೌಸರ್ ಬೀ ಹಾಗೂ ಪ್ರಜಾಪತಿಯನ್ನು ಪೊಲೀಸರು ಹೈದರಾಬಾದ್ ಸಮೀಪ ಬಸ್ ಒಂದರಿಂದ ಅಪಹರಿಸಿದ್ದು, ದಂಪತಿಯನ್ನು ಅಹ್ಮದಾಬಾದ್ ಗೆ ಕರೆದುಕೊಂಡ ಹೋಗಿ ಅಲ್ಲಿ ಸೊಹ್ರಾಬುದ್ದೀನ್ ನನ್ನು ನಕಲಿ ಎನ್‍ಕೌಂಟರಿನಲ್ಲಿ ಸಾಯಿಸಲಾಗಿತ್ತು. ಕೆಲವು ದಿನಗಳ ನಂತರ ಕೌಸರ್ ಬೀಯನ್ನು ಹತ್ಯಗೈದು ಆಕೆಯ ದೇಹ ಸುಟ್ಟು ಗುಜರಾತ್ ರಾಜ್ಯದ ಇಲ್ಲೋಲ್  ಗ್ರಾಮದ ನದಿಯಲ್ಲಿ ವಿಲೇವಾರಿ ಮಾಡಲಾಗಿತ್ತು ಎಂದು ಹೇಳಲಾಗಿತ್ತು. ಇದಕ್ಕೆ ಸಾಕ್ಷಿಯಾಗಿದ್ದ  ಪ್ರಜಾಪತಿ ಎಂಬಾತನನ್ನು ಬಂಧಿಸಿ ನಂತರ ಉದಯಪುರಕ್ಕೆ ಕರೆದುಕೊಂಡು ಹೋಗಲಾಗಿತ್ತೆಂದು ಹೇಳಲಾಗಿತ್ತು. ಡಿಸೆಂಬರ್ 28, 2006ರಂದು ಆತನನ್ನೂ ನಕಲಿ ಎನ್‍ಕೌಂಟರಿನಲ್ಲಿ ಸಾಯಿಸಲಾಗಿತ್ತೆಂದು ಆರೋಪಿಸಲಾಗಿತ್ತು.

ಸೊಹ್ರಾಬುದ್ದೀನ್ ಮತ್ತಾತನ ಪತ್ನಿಯನ್ನು ಅಪಹರಿಸಿದಾಗ ಪ್ರಜಾಪತಿಯೂ ಇದ್ದ ಎಂದು ಸಾಬೀತುಪಡಿಸಲು ಸಾಧ್ಯವಾಗಿಲ್ಲ, ಕೋರ್ಟ್ ವಿಚಾರಣೆಗೆ ಕರೆದುಕೊಂಡು ಹೋಗುತ್ತಿರುವಾಗ ರೈಲಿನಿಂದ ಪ್ರಜಾಪತಿ ತಪ್ಪಿಸಿಕೊಂಡು ಹೋಗಿದ್ದ ಹಾಗೂ ನಂತರ ಆತನನ್ನು ಎನ್‍ಕೌಂಟರ್ ನಲ್ಲಿ ಸಾಯಿಸಲಾಗಿತ್ತು ಎಂದು ಪ್ರತಿವಾದಿಗಳು ವಾದಿಸಿದ್ದರು.

ಈಗಾಗಲೇ ಖುಲಾಸೆಗೊಂಡಿರುವ ಐಪಿಎಸ್ ಅಧಿಕಾರಿ ಡಿ ಜಿ ವಂಝಾರ ಅವರು ಆಗಿನ ಗುಜರಾತ್ ಪೊಲೀಸ್ ಅಧಿಕಾರಿ ಆಶಿಷ್ ಪಾಂಡ್ಯಾಗೆ ಪ್ರಜಾಪತಿಯ ಎನ್‍ಕೌಂಟರ್ ತಂಡದ ಭಾಗವಾಗುವಂತೆ ಹೇಳಿ ಆತನ ರಜೆ ರದ್ದು ಪಡಿಸಿದ್ದರೆಂದು ಸಿಬಿಐ ಆರೋಪಿಸಿತ್ತು. ಆದರೆ ಇದಕ್ಕೆ  ಸಾಕ್ಷ್ಯ ಯಾ ಫೋನ್ ದಾಖಲೆ ಒದಗಿಸಿಲ್ಲ, ಎಂದು ನ್ಯಾಯಾಲಯ ಹೇಳಿದೆ.

ಕಳೆದ ಹನ್ನೆರಡು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿರುವ ಸೊಹ್ರಾಬುದ್ದೀನ್ ಸೋದರ ರುಬಾಬುದ್ದೀನ್ ಕೂಡ ನ್ಯಾಯಾಲಯದಲ್ಲಿ ಹಾಜರಿದ್ದು ಈ ತೀರ್ಪಿನ ವಿರುದ್ದ ಅಪೀಲು ಸಲ್ಲಿಸುವುದಾಗಿ ತಿಳಿಸಿದರು. ನ್ಯಾಯಾಧೀಶರು ಮೌಖಿಕವಾಗಿ ಹೇಳಿಕೊಂಡ ವಿಚಾರಗಳಲ್ಲೂ ಸೊಹ್ರಾಬುದ್ದೀನ್ ಪತ್ನಿ, ತನ್ನ ಅತ್ತಿಗೆ ಕೌಸರ್ ಬೀ  ಉಲ್ಲೇಖವಿರಲಿಲ್ಲ ಎಂದು ಆತ ಹೇಳಿದ್ದಾರೆ.

ತುಳಸೀರಾಂ ಪ್ರಜಾಪತಿಯ ತಾಯಿ ನರ್ಮದಾಬಾಯಿ ಕೂಡ ಹಾಜರಿದ್ದು ತಮ್ಮ ಜೀವನ ಈಗಾಗಲೇ ನಾಶವಾಗಿದೆ ಎಂದಿದ್ದಾರೆ. “ತೀರ್ಪು ಹೊರಬಿದ್ದಿದೆ. ಇನ್ನು ಅವರು ನನಗೆ ತೊಂದರೆ ನೀಡುವುದಿಲ್ಲ ಎಂದು ಅಂದುಕೊಂಡಿದ್ದೇನೆ'' ಎಂದರು.

ಸಿಬಿಐ ವಿಶೇಷ ಸಾರ್ವಜನಿಕ ಅಭಿಯೋಜಕ ಬಿ ಪಿ ರಾಜು ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರಲ್ಲದೆ ತೀರ್ಪಿನ ಪ್ರತಿ ದೊರೆತ ಬಳಿಕ ಅದನ್ನು ಪರಾಮರ್ಶಿಸಿ ಮುಂದಿನ ಕ್ರಮದ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News