ದೇಶ ಕಂಡ ಅತ್ಯಂತ ಕೆಟ್ಟ ಸರಕಾರ ಮೋದಿ ಸರಕಾರ: ಚಂದ್ರಬಾಬು ನಾಯ್ಡು

Update: 2018-12-22 11:17 GMT

ವಿಶಾಖಪಟ್ಟಣಂ, ಡಿ.22: ‘ಇಂಡಿಯಾ ಟುಡೆ’ ಸೌತ್ ಕಾಂಕ್ಲೇವ್-2018ರಲ್ಲಿ ಶನಿವಾರ ಭಾಗವಹಿಸಿದ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು, ಮೋದಿ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರಲ್ಲದೆ ನರೇಂದ್ರ ಮೋದಿ-ಅಮಿತ್ ಶಾ ವಿರುದ್ಧ ಹೋರಾಡಲು ಹಾಗೂ ದೇಶವನ್ನು ರಕ್ಷಿಸಲು ಸಮಾನಮನಸ್ಕ ಜನರ ರಂಗವೊಂದರ ಅಗತ್ಯವನ್ನೂ ಒತ್ತಿ ಹೇಳಿದ್ದಾರೆ.

ಮೋದಿ ಸರಕಾರ ದೇಶದ ಪ್ರಜಾಪ್ರಭುತ್ವದ ಸಾರವನ್ನೇ ನಾಶಪಡಿಸಿದೆ ಎಂದು ಆರೋಪಿಸಿದ ನಾಯ್ಡು ಸರಕಾರವು ಪ್ರಜಾಸತ್ತಾತ್ಮಕ ಸಂಸ್ಥೆಗಳಾದ ಸಿಬಿಐ ಹಾಗೂ ಆರ್‍ ಬಿಐಗೆ ಅಗೌರವ ತೋರಿದೆ ಎಂದು ದೂರಿದರು.

“ನನಗೆ ದೇಶವನ್ನು ರಕ್ಷಿಸಬೇಕಿದೆ. ಸಮಾನಮನಸ್ಕ ಜನರೆಲ್ಲ ಒಂದುಗೂಡಬೇಕಿದೆ. ಈ ಮಹಾನ್ ದೇಶದ ಜನರು ಕೂಡ'' ಎಂದು ನಾಯ್ಡು ಹೇಳಿದರು.

``ಜನರ ಕಂಪ್ಯೂಟರ್ ಹಾಗೂ ಫೋನುಗಳ ಮೇಲೆ ಕಣ್ಣಿಡಲು ಸರಕಾರ 10 ಸರಕಾರಿ ಏಜನ್ಸಿಗಳಿಗೆ ಅನುಮತಿ ನೀಡಿರುವುದು ಜನರಲ್ಲಿ ಭಯ ಮೂಡಿಸಿದೆ. ಒಳಗಿಂದೊಳಗೆಯೇ ಪ್ರತಿಯೊಬ್ಬ ನಾಗರಿಕನೂ ಬೆದರುವಂತಹ ವಾತಾವರಣವಿದೆ,''ಎಂದು ನಾಯ್ಡು ಹೇಳಿದರು.

``ದೇಶ ಕಂಡ ಅತ್ಯಂತ ಕೆಟ್ಟ ಸರಕಾರ ಈಗಿನ ಸರಕಾರವಾಗಿದೆ. ಈ ಸರಕಾರದ ಆಡಳಿತದಲ್ಲಿ ಆರ್‍ಬಿಐ ಗವರ್ನರ್ ರಾಜೀನಾಮೆ ನೀಡಿದರೆ ಸಿಬಿಐ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಮುಖ್ಯ ನ್ಯಾಯಮೂರ್ತಿಗಳು ಸೀಲ್ ಮಾಡಲ್ಪಟ್ಟ ಕವರಿನಲ್ಲಿದ್ದ ವರದಿಯ ಆಧಾರದಲ್ಲಿ ತಿರ್ಫು ನೀಡಿದರು'' ಎಂದು ನಾಯ್ಡು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News