ವೃದ್ಧೆಯ ಕೊಲೆ ಪ್ರಕರಣ: ಆರೋಪಿ ಮೊಮ್ಮಗನಿಗೆ ಕಠಿಣ ಕಾರಾಗೃಹ ಶಿಕ್ಷೆ

Update: 2018-12-22 11:47 GMT

ಶಿವಮೊಗ್ಗ, ಡಿ.22: ಅಜ್ಜಿಯನ್ನು ಹತ್ಯೆ ಮಾಡಿದ ಮೊಮ್ಮಗನಿಗೆ 17 ವರ್ಷ ಕಠಿಣ ಕಾರಾಗೃಹ ಸಜೆ ಹಾಗೂ 2500 ರೂ. ದಂಡ ವಿಧಿಸಿ ಶಿವಮೊಗ್ಗ 2 ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇತ್ತೀಚೆಗೆ ಆದೇಶ ಹೊರಡಿಸಿದೆ. 

ಜಿಲ್ಲೆಯ ಶಿಕಾರಿಪುರ ತಾಲೂಕು ಜಕ್ಕನಹಳ್ಳಿಯ ನಿವಾಸಿ ಕೇಶವ ಶಿಕ್ಷೆಗೊಳಗಾದ ಮೊಮ್ಮಗ ಎಂದು ಗುರುತಿಸಲಾಗಿದೆ. ನ್ಯಾಯಾಧೀಶ ಕುಡವಕ್ಕಲಿಗರ್ ಎಂ. ಜಿ. ರವರು ಈ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎ.ಎಂ.ಸುರೇಶ್‍ಕುಮಾರ್ ರವರು ವಾದ ಮಂಡಿಸಿದ್ದರು. 

ಘಟನೆ ಹಿನ್ನೆಲೆ: ಜಕ್ಕನಹಳ್ಳಿ ಗ್ರಾಮ ವಾಸಿ ಬಸಮ್ಮ ಎಂಬವರಿಗೆ ಜಮೀನು ಪರಿಹಾರವಾಗಿ ಹಣ ಬಂದಿತ್ತು. ಈ ಹಣ ನೀಡುವಂತೆ ಮೊಮ್ಮಗ ಕೇಶವ ನಿರಂತರವಾಗಿ ಪೀಡಿಸುತ್ತಿದ್ದ. ಆದರೆ ಬಸಮ್ಮ ಹಣ ನೀಡಲು ನಿರಾಕರಿಸಿದ್ದರು. ಇದರಿಂದ ಆಕ್ರೋಶಗೊಂಡ ಕೇಶವ ನಾಡ ಬಂದೂಕಿನಿಂದ ಗುಂಡು ಹಾರಿಸಿ ಅಜ್ಜಿಯ ಕೊಲೆ ಮಾಡಿದ್ದ ಎನ್ನಲಾಗಿದೆ. 

ಈ ಕುರಿತಂತೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ಕೇಶವನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು. ತದನಂತರ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಕೂಡ ಸಲ್ಲಿಸಿದ್ದರು. ವಿಚಾರಣೆಯಲ್ಲಿ ಮೊಮ್ಮಗನ ಕೃತ್ಯ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಶಿಕ್ಷೆ-ದಂಡ ವಿಧಿಸಿ ಆದೇಶಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News