ಸಂಪುಟ ವಿಸ್ತರಣೆ: ಕಾಂಗ್ರೆಸ್ ನ 8 ಸಚಿವರಿಂದ ಪ್ರಮಾಣ ವಚನ ಸ್ವೀಕಾರ

Update: 2018-12-22 14:47 GMT

ಬೆಂಗಳೂರು, ಡಿ.22: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಸಚಿವ ಸಂಪುಟ ವಿಸ್ತರಣೆಗೊಂಡಿದ್ದು, 8 ಮಂದಿ ಶಾಸಕರು ಸಂಪುಟ ದರ್ಜೆಯ ಸಚಿವರಾಗಿ ಸೇರ್ಪಡೆಗೊಂಡರು. 

ಶನಿವಾರ ಸಂಜೆ 5.20ಕ್ಕೆ ರಾಜಭವನದಲ್ಲಿ ರಾಜ್ಯಪಾಲ ವಜುಭಾಯಿ ವಾಲಾರಿಂದ ನೂತನ ಸಚಿವರಾದ ಎಂ.ಬಿ.ಪಾಟೀಲ್, ಆರ್.ಬಿ.ತಿಮ್ಮಾಪುರ್, ಸತೀಶ್ ಜಾರಕಿಹೊಳಿ, ಸಿ.ಎಸ್.ಶಿವಳ್ಳಿ, ಪಿ.ಟಿ.ಪರಮೇಶ್ವರ್ ನಾಯ್ಕ್, ಇ.ತುಕಾರಾಂ, ರಹೀಂ ಖಾನ್ ಮತ್ತು ಎಂಟಿಬಿ ನಾಗರಾಜ್ ಅವರು ಪ್ರಮಾಣ ವಚನ ಸ್ವೀಕರಿಸಿದರು.              

ಕಾಂಗ್ರೆಸ್ ಪಕ್ಷದ ಎಂಟು ಸದಸ್ಯರ ಸೇರ್ಪಡೆಯೊಂದಿಗೆ ಎಂಟು ತಿಂಗಳ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ರಾಜ್ಯ ಸಚಿವ ಸಂಪುಟ ಶನಿವಾರ ಸಂಜೆ ವಿಸ್ತರಣೆಯಾಗಿದೆ. ಇದರಿಂದ ಜಾತ್ಯತೀತ ಜನತಾ ದಳ ಮತ್ತು ಕಾಂಗ್ರೆಸ್ ಪಕ್ಷದ ಮೈತ್ರಿ ಸರ್ಕಾರದ ಸಂಖ್ಯಾಬಲ 32 ಕ್ಕೆ ಏರಿದೆ. ಬಬಲೇಶ್ವರ ಕ್ಷೇತ್ರದ ಶಾಸಕ ಎಂ. ಬಿ. ಪಾಟೀಲ್, ರಾಜ್ಯ ವಿಧಾನ ಪರಿಷತ್ ಸದಸ್ಯ ಆರ್. ಬಿ. ತಿಮ್ಮಾಪೂರ್, ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ್ ಎಲ್. ಜಾರಕಿಹೊಳಿ, ಕುಂದಗೋಳ ಕ್ಷೇತ್ರದ ಶಾಸಕ ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿ, ಹೂವಿನ ಹಡಗಲಿ ಕ್ಷೇತ್ರದ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ್, ಸಂಡೂರು ಕ್ಷೇತ್ರದ ಶಾಸಕ ಇ. ತುಕಾರಾಂ, ಬೀದರ್ ಉತ್ತರ ಕ್ಷೇತ್ರದ ಶಾಸಕ ರಹೀಂ ಖಾನ್ ಹಾಗೂ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಗಣ್ಯರು.

ಎಂ.ಬಿ. ಪಾಟೀಲ್, ಆರ್.ಬಿ. ತಿಮ್ಮಾಪೂರ್ ಮತ್ತು ಇ. ತುಕಾರಾಂ ಅವರು ದೇವರ ಹೆಸರಿನಲ್ಲಿ, ಸತೀಶ್ ಎಲ್.ಜಾರಕಿಹೊಳಿ ಅವರು ಬಸವ, ಬುದ್ಧ ಮತ್ತು ಅಂಬೇಡ್ಕರ್ ಹೆಸರಿನಲ್ಲಿ, ಸಿ.ಎಸ್. ಶಿವಳ್ಳಿ ಅವರು ಈಶ್ವರನ ಹೆಸರಿನಲ್ಲಿ, ಪಿ.ಟಿ. ಪರಮೇಶ್ವರ ನಾಯ್ಕ್ ಅವರು ತುಳಜಾ ಭವಾನಿ ಅವರ ಹೆಸರಿನಲ್ಲಿ, ರಹೀಂ ಖಾನ್ ಅವರು ಅಲ್ಲಾಹ್ ಹೆಸರಿನಲ್ಲಿ ಹಾಗೂ ಎಂಟಿಬಿ ನಾಗರಾಜ್ ಅವರು ಮಂಜುನಾಥ ಸ್ವಾಮಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ರಹೀಂ ಖಾನ್ ಅವರು ಇಂಗ್ಲೀಷ್ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿ ಎಲ್ಲರ ಗಮನ ಸೆಳೆದರು. ಉಳಿದೆಲ್ಲರೂ ಕನ್ನಡ ಭಾಷೆಯಲ್ಲಿಯೇ ಪ್ರಮಾಣ ವಚನವನ್ನು ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ನಾಲ್ಕು ಮಂದಿ ಈಗಾಗಲೇ ಸಚಿವರಾಗಿ ಅನುಭವ ಹೊಂದಿದ್ದಾರೆ. ಉಳಿದ ನಾಲ್ಕು ಮಂದಿ ಪ್ರಥಮ ಬಾರಿಗೆ ಸಚಿವರಾಗಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಾರೆ. ನೂತನ ಸಚಿವರಿಗೆ ರಾಜ್ಯಪಾಲ ವಜುಭಾಯಿ ರೂಢಾಬಾಯಿ ವಾಲಾ ಅವರು ಅಧಿಕಾರ ಪದ ಹಾಗೂ ಗೋಪ್ಯತಾ ಪ್ರಮಾಣ ವಚನ ಬೋಧಿಸಿದರು. ಪ್ರಮಾಣ ವಚನ ಸ್ವೀಕರಿಸಿದ ಎಲ್ಲಾ ಸಚಿವರಿಗೂ ರಾಜ್ಯಪಾಲ ವಜುಭಾಯಿ ವಾಲಾ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರು ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.

ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಸಮಾರಂಭವನ್ನು ನಿರೂಪಿಸಿದರು. ಈ ಸಮಾರಂಭದಲ್ಲಿ ಮೈತ್ರಿ ಸರಕಾರದ ಸಮನ್ವಯ ಸಮಿತಿಯ ಸದಸ್ಯ ಸಿದ್ದರಾಮಯ್ಯ, ಕುಮಾರಸ್ವಾಮಿ ಸಂಪುಟದ ಸಹೋದ್ಯೋಗಿಗಳಾದ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಯಾವ ಖಾತೆ ಕೊಟ್ಟರೂ ನಿಭಾಯಿಸುವೆ: ಎಂ.ಟಿ.ಬಿ.ನಾಗರಾಜ್

ಪಕ್ಷನಿಷ್ಠೆ ಹಾಗೂ ಪ್ರಾಮಾಣಿಕ ಸೇವೆ ಪರಿಗಣಿಸಿ ತಮಗೆ ಸಚಿವ ಸ್ಥಾನ ನೀಡಲಾಗಿದೆ. ಯಾವುದೇ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸುವೆ ಎಂದು ನೂತನ ಸಚಿವ ಎಂ.ಟಿ.ಬಿ.ನಾಗರಾಜ್ ಹೇಳಿದರು.

ಶನಿವಾರ ಸಂಜೆ ರಾಜಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಬಗೆಗಿನ ನಿಷ್ಠೆ, ಪಕ್ಷ ಸಂಘಟನೆಯಲ್ಲಿ ಪ್ರಾಮಾಣಿಕ ಪ್ರಯತ್ನ, ಕ್ಷೇತ್ರದ ಅಭಿವೃದ್ಧಿ ಸೇರಿದಂತೆ ನಾವು ಸಲ್ಲಿಸಿದ ಸೇವೆಯನ್ನು ಮನಗಂಡು ರಾಜ್ಯ ನಾಯಕರು ನಮಗೆ ಈ ಬಾರಿ ಅವಕಾಶ ನೀಡಿದ್ದಾರೆ ಎಂದರು. ಈ ಹಿಂದೆ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ನಮಗೆ ಅವಕಾಶ ನೀಡದಿದ್ದಾಗ ಬಂಡಾಯ ಬಾವುಟ ಹಾರಿಸಿರಲಿಲ್ಲ. ಕಾಂಗ್ರೆಸ್ ಬಲವರ್ದನೆಗೂ ನಿರಂತರವಾಗಿ ಶ್ರಮಿಸಿದ್ದೇವೆ ಎಂದು ನುಡಿದರು.

ರಾಜಭವನಕ್ಕೆ ಬಿಗಿ ಪೊಲೀಸ್ ಭದ್ರತೆ

ಸಮ್ಮಿಶ್ರ ಸರಕಾರದ ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆ ಶನಿವಾರ ಸಂಜೆ ರಾಜಭವನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು. ನಾಲ್ವರು ಡಿಸಿಪಿ, 10 ಎಸ್ಸೈ, 20 ಪಿಎಸ್ಸೈ ಸೇರಿ 350ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಅನ್ನು ನಿಯೋಜಿಸಲಾಗಿತ್ತು. ಪಾಸ್ ಉಳ್ಳವರಿಗೆ ಮಾತ್ರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗಿತ್ತು.

ಕಾಂಗ್ರೆಸ್ ಕಚೇರಿ ಮುಂಭಾಗ ಪ್ರತಿಭಟನೆ

ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಶನಿವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿ ಮುಂಭಾಗ ಜಮಾಯಿಸಿದ ಕಾರ್ಯಕರ್ತರು, ಬೆಂಗಳೂರು ನಗರದಲ್ಲಿ ಕಾಂಗ್ರೆಸ್ ಪ್ರಗತಿಗೆ ಹಾಗೂ ಉನ್ನತಿಗೆ ರಾಮಲಿಂಗಾರೆಡ್ಡಿ ಸಾಕಷ್ಟು ಶ್ರಮಿಸಿದ್ದಾರೆ. ಹೀಗಾಗಿ, ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News