ಜಿಎಸ್ ಟಿ ಕಡಿತ: ಡಿಜಿಟಲ್ ಕ್ಯಾಮರಾ, ಸಿನೆಮಾ ಟಿಕೆಟ್ ಸೇರಿ ಈ ವಸ್ತುಗಳು ಇನ್ನು ಅಗ್ಗ

Update: 2018-12-22 14:07 GMT

ಹೊಸದಿಲ್ಲಿ,ಡಿ.22: ಶನಿವಾರ ಇಲ್ಲಿನ ವಿಜ್ಞಾನ ಭವನದಲ್ಲಿ ನಡೆದ 31ನೇ ಸಭೆಯಲ್ಲಿ ಕೇಂದ್ರ ಸರಕಾರ 23 ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು ಕಡಿತಗೊಳಿಸಿದೆ. ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ, ಆರು ವಸ್ತುಗಳನ್ನು ಶೇ.28ರಿಂದ ಶೇ.18ರ ಜಿಎಸ್‌ಟಿ ವ್ಯಾಪ್ತಿಗೆ ಮತ್ತು ಹದಿನಾರು ವಸ್ತುಗಳನ್ನು ಶೇ.18ರಿಂದ ಶೇ.12 ಮತ್ತು ಶೇ.5ರ ವ್ಯಾಪ್ತಿಗೆ ಇಳಿಸಲಾಗಿದೆ.

ಮಾನಿಟರ್‌ಗಳು ಮತ್ತು ಟಿವಿ ಪರದೆಗಳು, ಟೈರ್, ಲಿಥಿಯಂ-ಇಯೋನ್ ಬ್ಯಾಟರಿಗಳ ಪವರ್ ಬ್ಯಾಂಕ್‌ಗಳನ್ನು ಶೇ.28ರ ವ್ಯಾಪ್ತಿಯಿಂದ ಶೇ.18ಕ್ಕೆ ತರಲಾಗಿದೆ. ವಿಕಲಚೇತನ ವ್ಯಕ್ತಿಗಳು ಬಳಸುವ ಸಾಧನಗಳನ್ನು ಶೇ.5 ಜಿಎಸ್‌ಟಿ ವ್ಯಾಪ್ತಿಗೆ ತರಲಾಗಿದೆ ಎಂದು ಜೇಟ್ಲಿ ತಿಳಿಸಿದ್ದಾರೆ.

ಶೇ.28 ವ್ಯಾಪ್ತಿಯಲ್ಲಿ ಸದ್ಯ 28 ವಸ್ತುಗಳು ಉಳಿದಿವೆ. ಸಿಮೆಂಟ್ ಮತ್ತು ವಾಹನ ಬಿಡಿಭಾಗಗಳ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಅವುಗಳು ಶೇ.28 ವ್ಯಾಪ್ತಿಯಲ್ಲೇ ಉಳಿಯಲಿದೆ. ಸಿಮೆಂಟ್‌ನಿಂದ ಆದಾಯ 13,000 ಕೋಟಿ ರೂ. ಆಗಿದ್ದರೆ, ವಾಹನಗಳ ಬಿಡಿಭಾಗಗಳಿಂದ 20,000 ಕೋಟಿ ರೂ. ಆದಾಯ ಬರುತ್ತದೆ. ಇವುಗಳನ್ನು ಶೇ.28ರಿಂದ ಶೇ.18ಕ್ಕೆ ಇಳಿಸಿದರೆ 33,000 ಕೋಟಿ ರೂ. ನಷ್ಟ ಉಂಟಾಗಲಿದೆ ಎಂದು ಜೇಟ್ಲಿ ತಿಳಿಸಿದ್ದಾರೆ. 100 ರೂ.ವರೆಗಿನ ಸಿನೆಮಾ ಟಿಕೆಟ್‌ಗಳನ್ನು ಶೇ.12ರ ವ್ಯಾಪ್ತಿಗೆ ಇಳಿಸಲಾಗಿದ್ದು, 100 ರೂ.ಗಿಂತ ಮೇಲ್ಪಟ್ಟ ಟಿಕೆಟ್‌ಗಳನ್ನು ಶೇ.28ರಿಂದ ಶೇ.18ಕ್ಕೆ ತರಲಾಗಿದೆ. ಜನಧನ ಖಾತೆದಾರರಿಗೆ ಬ್ಯಾಂಕ್‌ಗಳು ನೀಡುವ ಸೇವೆಗಳನ್ನು ಜಿಎಸ್‌ಟಿಯಿಂದ ಹೊರಗಿಡಲಾಗಿದೆ. ಈ ಹೊಸ ದರಗಳು 2019ರ ಜನವರಿ 1ರಿಂದ ಜಾರಿಗೆ ಬರಲಿದೆ ಎಂದು ವಿತ್ತ ಸಚಿವರು ತಿಳಿಸಿದ್ದಾರೆ.

31ನೆ ಜಿಎಸ್ ಟಿ ಕೌನ್ಸಿಲ್ ಸಭೆಯ ನಂತರ ತೆರಿಗೆ ಕಡಿತಕ್ಕೊಳಗಾದ ವಸ್ತುಗಳ ಪಟ್ಟಿ ಈ ಕೆಳಗಿದೆ.

►ಮಾನಿಟರ್ ಗಳು, ಟಿವಿ ಸ್ಕ್ರೀನ್ ಗಳು (32 ಇಂಚಿನವರೆಗೆ), ಟಯರುಗಳು,

►ಲಿಥಿಯಂ-ಐಯಾನ್ ಬ್ಯಾಟರಿಗಳ ಪವರ್ ಬ್ಯಾಂಕ್ ಗಳು,

►ಟ್ರಾನ್ಸ್ ಮಿಶನ್ ಶಾಫ್ಟ್ಸ್ ಮತ್ತು ಕ್ರ್ಯಾಂಕ್ಸ್ಮ, ಗೇರ್ ಬಾಕ್ಸ್ ಗಳು ಇತರ,

►ಡಿಜಿಟಲ್ ಕ್ಯಾಮರಾಗಳು ಮತ್ತು ವಿಡಿಯೋ ಕ್ಯಾಮರಾ ರೆಕಾರ್ಡರ್ ಗಳು,

►ವಿಡಿಯೋ ಗೇಮ್ ಕನ್ಸೋಲ್ಸ್ ಮತ್ತು ಇತರ ಗೇಮ್ ಗಳು,

►ಸಿನೆಮಾ ಟಿಕೆಟ್ ಗಳು (100 ರೂ.ಗೆ ಮೇಲ್ಪಟ್ಟು),

►ವಿಶೇಷಚೇತನರ ಕ್ಯಾರಿಯೇಜ್ ಗಳ ಭಾಗಗಳು, ಕಾರ್ಕ್,

►ಅಗ್ಲಮರೇಟೆಡ್ ಕಾರ್ಕ್, ಮಾರ್ಬಲ್ ರಬ್ಬಲ್, ನೈಸರ್ಗಿಕ ಕಾರ್ಕ್,

►ವಾಕಿಂಗ್ ಸ್ಟಿಕ್, ಫ್ಲೈ ಆ್ಯಶ್ ಬ್ಲಾಕ್ಸ್, ಮ್ಯೂಸಿಕ್ ಪುಸ್ತಕಗಳು,

►ತರಕಾರಿಗಳು, ತಾತ್ಕಾಲಿಕ ಸಂರಕ್ಷಿತ ತರಕಾರಿಗಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News