ಚಿಕ್ಕಮಗಳೂರು: ಶಾಂತಿಯುತ ಸಮಾಪ್ತಿ ಕಂಡ ದತ್ತಜಯಂತಿ

Update: 2018-12-22 14:05 GMT

ಚಿಕ್ಕಮಗಳೂರು, ಡಿ.22: ಬಾಬಾ ಬುಡನ್ ಗಿರಿಯ ಇನಾಂ ದತ್ತಾತ್ರೇಯ ಪೀಠದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ದತ್ತಜಯಂತಿ ಕಾರ್ಯಕ್ರಮ ಪೊಲೀಸ್ ಇಲಾಖೆಯ ಬಿಗಿ ಕಟ್ಟೆಚ್ಚರದ ನಡುವೆ ಅತ್ಯಂತ ಶಾಂತಿಯುತವಾಗಿ ಶನಿವಾರ ಸಂಜೆ ಸಮಾಪ್ತಿಗೊಂಡಿತು.

ಶನಿವಾರ ಮುಂಜಾನೆ 6 ಗಂಟೆಯಿಂದಲೇ ಜಿಲ್ಲಾಡಳಿತ ದತ್ತಪಾದುಕೆಗಳಿರುವ ಗುಹಾಂತರ ದೇವಾಲಯದೊಳಗೆ ಸಾರ್ವಜನಿಕರ ದರ್ಶನಕ್ಕೆ ಮುಕ್ತ ಅವಕಾಶ ನೀಡಿದ ಕಾರಣ ರಾಜ್ಯದ ವಿವಿಧ ಮೂಲೆಗಳಿಂದ ಬಂದಿದ್ದ ದತ್ತಭಕ್ತರು ದತ್ತಪಾದುಕೆಗಳ ದರ್ಶನ ಪಡೆದು ತಾವು ತಂದಿದ್ದ ಇರುಮುಡಿ ಸಮರ್ಪಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಭಕ್ತರು ಬೆಳಗ್ಗಿನಿಂದಲೇ ಸರತಿ ಸಾಲಿನಲ್ಲಿ ದತ್ತಪಾದುಕೆಗಳ ದರ್ಶನ ಪಡೆದು ಹಿಂದಿರುಗಲು ಅವಕಾಶ ಕಲ್ಪಿಸಿದ ಕಾರಣ ಮತ್ತು ದ್ವಿಮುಖ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರಿಂದ ಗಿರಿ ವ್ಯಾಪ್ತಿಯಲ್ಲಿ ವಾಹನ ದಟ್ಟಣೆಯಿಲ್ಲದೇ ಸುಗಮವಾಗಿತ್ತು.

ದತ್ತಮಾಲೆ ಮತ್ತು ದತ್ತಜಯಂತಿ ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ರಸ್ತೆ ಅಗಲೀಕರಣ, ಕುಡಿಯುವ ನೀರು ಪೂರೈಕೆ, ವಾಹನ ನಿಲುಗಡೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದ್ದರಿಂದ ದತ್ತಜಯಂತಿ ಕಾರ್ಯಕ್ರಮಕ್ಕೆ ಯಾವುದೇ ಅಪಸ್ವರ ಕೇಳಿಬರಲಿಲ್ಲ. ಜಿಲ್ಲಾಡಳಿತ ಕೈಗೊಂಡ ವ್ಯವಸ್ಥಿತ ಸೌಕರ್ಯಗಳು ಸಾರ್ವಜನಿಕ ಮೆಚ್ಚುಗೆಗೂ ಪಾತ್ರವಾಯಿತು.

ನಗರ ಸಮೀಪದ ಕೈಮರದಿಂದ ಪೀಠಕ್ಕೆ ಪ್ರವೇಶಿಸುವ ಪ್ರತೀ ಹಂತದಲ್ಲಿಯೂ ಸಂಚಾರಿ ಪೊಲೀಸರನ್ನು ನಿಯೋಜಿಸಿದ್ದ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿತು. ನಿಯೋಜಿತ ಸ್ಥಳಗಳಲ್ಲಿ ಮೊಕ್ಕಂ ಹೂಡಿದ್ದ ಸಂಚಾರಿ ಪೊಲೀಸರು ಬಂದಿದ್ದ ಯಾತ್ರಾತ್ರಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.

ಆದರೆ ಕಳೆದ ಬಾರಿಯ ದತ್ತಜಯಂತಿ ಕಾರ್ಯಕ್ರಮಕ್ಕೆ ಭಾಗವಹಿಸಿದ ದತ್ತಭಕ್ತರ ಸಂಖ್ಯೆಗಿಂತ ಈ ಬಾರಿ ಭಾಗವಹಿಸಿದ್ದ ಭಕ್ತರ ಸಂಖ್ಯೆಯಲ್ಲಿ ಗಣನೀಯವಾಗಿ ಕ್ಷೀಣಿಸಿದ್ದು ಹೊರತು ಪಡಿಸಿ ಉಳಿದಂತೆ ಈ ಬಾರಿಯ ದತ್ತಜಯಂತಿ ಶಾಂತಿಯುತವಾಗಿ ಸಮಾಪ್ತಿ ಕಂಡಿತು. ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ದತ್ತ ಭಕ್ತರು ದತ್ತಪಾದುಕೆಗಳ ದರ್ಶನ ಪಡೆದು ಜಿಲ್ಲಾಡಳಿತದ ವತಿಯಿಂದ ಒದಗಿಸಿದ್ದ ಪ್ರಸಾದ ಸ್ವೀಕರಿಸಿದರು.

ಇದೇ ವೇಳೆ ದತ್ತ ಪೀಠದ ಆವರಣದಲ್ಲಿ ಬಿಜೆಪಿ ಮುಖಂಡರು ಹಾಗೂ ಸಂಘಪರಿವಾರದ ಮುಖಂಡರು ಹಮ್ಮಿಕೊಂಡಿದ್ದ ಗಣಹೋಮ, ದತ್ತಾತ್ರೇಯ ಹೋಮದಲ್ಲೂ ದತ್ತ ಭಕ್ತರು ಪಾಲ್ಗೊಂಡಿದ್ದರು. ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಎಲ್ಲ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು. ಐಜಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಹೆಚ್ಚುವರಿ 3 ಮಂದಿ ಪ್ರೊಬೇಷನರಿ ಐಪಿಎಸ್ ಅಧಿಕಾರಿಗಳು, 5 ಮಂದಿ ಡೈವೈಎಸ್ಪಿಗಳು ಸ್ಥಳದಲ್ಲಿಯೇ ಮೊಕ್ಕಂ ಹೂಡಿ ಭದ್ರತಾ ಕಾರ್ಯವನ್ನು ಮಾಡುವ ಮೂಲಕ ಕಾನೂನು ಸುವ್ಯವಸ್ಥೆಯ ನೇತೃತ್ವ ವಹಿಸಿದ್ದರು

ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಶ್ರೀರಂಗಯ್ಯ ಜಿಲ್ಲಾಡಳಿತ ಆಯೋಜಿಸಿದ್ದ ದತ್ತಜಯಂತಿ ಕಾರ್ಯಕ್ರಮ ಶಾಂತಿಯುತವಾಗಿ ಸಮಾಪ್ತಿಗೊಂಡಿದ್ದು, ಜಿಲ್ಲಾಡಳಿತದೊಂದಿಗೆ ಸಂಘಪರಿವಾರ ಸೇರಿದಂತೆ ಸಂಘಸಂಸ್ಥೆಗಳ ಸಹಕಾರ ಉತ್ತಮ ಬೆಳವಣಿಗೆ. ಈ ಬಾರಿ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಕೈಗೊಂಡ ಮುಂಜಾಗೃತಾ ಕ್ರಮಗಳಿಂದ ಕಾರ್ಯಕ್ರಮ ಶಾಂತಿಯುತವಾಗಿ ಜರಗಿದೆ. ಇಬ್ಬರು ಸ್ವಾಮೀಜಿಗಳು ಗುಹಾಂತರ ದೇವಾಲಯವನ್ನು ಪ್ರವೇಶಿಸಿ ದತ್ತಪಾದುಕೆಗಳಿಗೆ ಪೂಜೆ ಸಲ್ಲಿಸಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಭೇಟಿ ನೀಡಿದ ದತ್ತಭಕ್ತರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ ಎಂದು ಹೇಳಿದರು.

ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಪೀಠಕ್ಕೆ ಹೊರಟಿದ್ದ ದತ್ತಭಕ್ತರನ್ನು ತಪಾಸಣೆ ಒಳಪಡಿಸುವುದು ಸೇರಿದಂತೆ ಯಾವುದೇ ನಿರ್ಬಂಧ ಹೇರಿಲ್ಲ. ಕಾನೂನು ವ್ಯಾಪ್ತಿಯಲ್ಲಿ ಅಗತ್ಯವಿರುವ ಕ್ರಮಗಳನ್ನಷ್ಟೇ ಕೈಗೊಂಡಿದ್ದೇವೆ. ದತ್ತಭಕ್ತರ ಸಂಖ್ಯೆ ಕ್ಷೀಣಿಸುವುದಕ್ಕೂ ನಾವು ಕ್ರಮಕೈಗೊಂಡಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ಸಂದರ್ಭದಲ್ಲಿ ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಹರೀಶ್‍ ಪಾಂಡೆ, ಜಿಲ್ಲಾಡಳಿತ ಕೈಗೊಂಡ ಮುಂಜಾಗೃತಾ ಕ್ರಮಗಳಿಂದ ರಸ್ತೆ ಸುಗಮ ಸಂಚಾರಕ್ಕೆ ಅವಕಾಶವಾಗಿದೆ. ಕಳೆದ ಬಾರಿ ಕಾರ್ಯನಿರ್ವಹಿಸಿದ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಮತ್ತು ಸ್ಥಳೀಯ ಅಧಿಕಾರಿಗಳು ಅನುಭವವನ್ನು ಹಂಚಿಕೊಂಡ ಕಾರಣಕ್ಕೆ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಸಾಧ್ಯವಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News