ಮೈತ್ರಿ ಸರಕಾರದ ನೂತನ ಸಚಿವರ ಪರಿಚಯ

Update: 2018-12-22 15:44 GMT

ಬೆಂಗಳೂರು, ಡಿ.22: ಕಾಂಗ್ರೆಸ್ ಹೈಕಮಾಂಡ್ ಜಿಲ್ಲೆ ಹಾಗೂ ಪ್ರಾಂತ್ಯಗಳ ಲೆಕ್ಕಾಚಾರದಲ್ಲಿ ತೂಗಿ ಅಳೆದು 8 ಮಂದಿ ಶಾಸಕರನ್ನು ಸಂಪುಟ ದರ್ಜೆಯ ಸಚಿವರನ್ನಾಗಿ ಆಯ್ಕೆ ಮಾಡಿದೆ.

ಮೈತ್ರಿ ಸರಕಾರದಲ್ಲಿ ಕಾಂಗ್ರೆಸ್ ಪಾಲಿಗೆ ಉಳಿದಿದ್ದ ಆರು ಮಂತ್ರಿ ಸ್ಥಾನಗಳಿಗೆ ಇಪ್ಪತ್ತಕ್ಕೂ ಹೆಚ್ಚು ಸಚಿವಾಕಾಂಕ್ಷಿಗಳು ಇದ್ದರು. ಅಂತಿಮವಾಗಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳ ನಡುವೆ ಕಾಂಗ್ರೆಸ್ ಹೈಕಮಾಂಡ್, ಇಬ್ಬರು ಸಚಿವರನ್ನು ಕೈ ಬಿಟ್ಟು 8 ಮಂದಿ ಶಾಸಕರನ್ನು ಸಚಿವರನ್ನಾಗಿ ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದೆ.

ನೂತನ ಸಚಿವರ ಪರಿಚಯ

ಸಿ.ಎಸ್.ಶಿವಳ್ಳಿ: ಧಾರವಾಡ ಜಿಲ್ಲೆಯ ಕುಂದಗೋಳದ ಶಾಸಕ ಸಿ.ಎಸ್. ಶಿವಳ್ಳಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ಕುರುಬ ಸಮುದಾಯದ ಪ್ರಬಲ ನಾಯಕ. ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ಇವರು, ನನಗೂ ಸಚಿವ ಸ್ಥಾನದ ಮೇಲೆ ಆಸೆ ಇದೆ. ಆದರೂ ವರಿಷ್ಠರು ಹಾಗೂ ಹೈಕಮಾಂಡ್ ಸೇರಿ ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧನಾಗಿರುತ್ತೇವೆ ಎಂದು ಬಹಿರಂಗವಾಗಿ ಹೇಳುವ ಮೂಲಕ ಹೈಕಮಾಂಡಿನ ಕೃಪೆಗೆ ಪಾತ್ರರಾದವರು. ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಎಂಟಿಬಿ ನಾಗಾರಾಜ್: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಕ್ಷೇತ್ರದ ಶಾಸಕ ಎಂಟಿಬಿ ನಾಗರಾಜ್ ಕುರುಬ ಸಮುದಾಯದ ಪ್ರಭಾವಿ ಮುಖಂಡ. ವೈಯಕ್ತಿಕ ವರ್ಚಸ್ಸಿನಿಂದ ರಾಜಕೀಯದಲ್ಲಿ ಮೇಲೆ ಬಂದವರು. ಮೂರು ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಪಕ್ಷದಲ್ಲಿ ಹಿರಿಯ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಹಾಲಿ ಶಾಸಕರ ಪೈಕಿ ಅತಿ ಶ್ರೀಮಂತ ಶಾಸಕರಾಗಿ ಎಲ್ಲರ ಗಮನ ಸೆಳೆದವರು, ಇಂದು ಮೊದಲ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 

ಇ ತುಕಾರಾಂ: ಬಳ್ಳಾರಿ ಜಿಲ್ಲೆಯ ಸಂಡೂರು ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಇ. ತುಕಾರಾಂ ವಾಲ್ಮೀಕಿ ಸಮುದಾಯದ ನಾಯಕರಾಗಿದ್ದು, ಮೂರನೆ ಬಾರಿ ಶಾಸಕರಾಗಿ ಗೆದ್ದು ಪಕ್ಷನಿಷ್ಠೆ ಪ್ರದರ್ಶಿಸಿದ್ದಾರೆ. ಕಾಂಗ್ರೆಸ್ ಭದ್ರ ಕೋಟೆಯಾದ ಬಳ್ಳಾರಿ ಜಿಲ್ಲೆಯ ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ ತುಕಾರಾಂ, ಇಂದು ಮೊದಲ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಎಂ.ಬಿ.ಪಾಟೀಲ್: ಲಿಂಗಾಯತ ಸಮುದಾಯದ ಪ್ರಬಲ ನಾಯಕರಾದ ಬಬಲೇಶ್ವರ ಕ್ಷೇತ್ರದ ಶಾಸಕ ಎಂಬಿ ಪಾಟೀಲ್ ಸಿದ್ದರಾಮಯ್ಯ ಸರಕಾರದಲ್ಲಿ ನೀರಾವರಿ ಸಚಿವರಾಗಿ, ಉತ್ತರ ಕರ್ನಾಟಕದ ಕೆರೆಗಳಿಗೆ ನೀರು ತುಂಬಿಸುವ ಮೂಲಕ ಜನನಾಯಕರಾಗಿ ಹೆಸರು ಗಳಿಸಿದ್ದರು. ಈ ಬಾರಿ ಪುನರಾಯ್ಕೆಯಾಗಿ, ಮೈತ್ರಿ ಸರಕಾರ ರಚನೆಯಾಗುವ ಸಂದರ್ಭದಲ್ಲಿಯೇ ಸಚಿವರಾಗಬೇಕಾಗಿದ್ದವರು, ಈಗ ವಿಸ್ತರಣೆಯ ಸಮಯದಲ್ಲಿ ಸಚಿವರಾಗಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದ ನೇತೃತ್ವ ವಹಿಸಿದ್ದವರು.

ಪಿ.ಟಿ.ಪರಮೇಶ್ವರ ನಾಯ್ಕ್: ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಪಿ.ಟಿ.ಪರಮೇಶ್ವರ್ ನಾಯ್ಕೆ, ಲಂಬಾಣಿ ಸಮುದಾಯದ ಪ್ರಮುಖ ನಾಯಕ. ಸಿದ್ದರಾಮಯ್ಯ ಸರಕಾರದಲ್ಲಿ ಕಾರ್ಮಿಕ ಸಚಿವರಾಗಿ ಕಾರ್ಯನಿರ್ವಹಿಸಿದ್ದವರು. ಬಳ್ಳಾರಿಯ ಗಣಿಧಣಿ ಶ್ರೀರಾಮುಲು ಅವರಿಗೆ ಸಡ್ಡು ಹೊಡೆದು ಪಕ್ಷ ಕಟ್ಟುವಲ್ಲಿ, ಲಂಬಾಣಿ ಸಮುದಾಯಕ್ಕೆ ಶಕ್ತಿ ತುಂಬುವಲ್ಲಿ ಶ್ರಮ ವಹಿಸಿದವರು. ಇಂದು ಮೈತ್ರಿ ಸರಕಾರದಲ್ಲಿ ಸಚಿವರಾಗಿ ಪ್ರಮಾನ ವಚನ ಸ್ವೀಕರಿಸಿದ್ದಾರೆ.

ಸತೀಶ್ ಜಾರಕಿಹೊಳಿ: ಬೆಳಗಾವಿ ಜಿಲ್ಲೆಯ ಯಮಕನಮರಡಿ ಕ್ಷೇತ್ರದಿಂದ 3ನೆ ಬಾರಿ ಶಾಸಕರಾಗಿ ಆಯ್ಕೆಯಾದ ಸತೀಶ್ ಜಾರಕಿಹೊಳಿ ನಾಯಕ ಜನಾಂಗಕ್ಕೆ ಸೇರಿದವರು. ಸಿದ್ದರಾಮಯ್ಯನವರ ಸರಕಾರದಲ್ಲಿ ಸಚಿವರಾಗಿದ್ದವರು, ಕಾರಣಾಂತರಗಳಿಂದ ಸ್ಥಾನ ತೊರೆದಿದ್ದರು. ಕಂದಾಚಾರ, ಮೂಢನಂಬಿಕೆಯ ವಿರುದ್ಧವಿದ್ದು, ವೈಚಾರಿಕ ಪ್ರಜ್ಞೆ ಬಿತ್ತುವಲ್ಲಿ ಸದಾ ಮುಂದಿರುವ, ಪ್ರಗತಿಪರ ವಿಚಾರಧಾರೆಯ ಪರವಿರುವ ಸತೀಶ್, ಇಂದು ಬುದ್ಧ, ಬಸವ ಹಾಗೂ ಅಂಬೇಡ್ಕರ್ ಹೆಸರಿನಲ್ಲಿ ಮೂರನೆ ಬಾರಿಗೆ ಸಚಿವರಾಗಿ ಪ್ರಮಾಣದ ವಚನ ಸ್ವೀಕರಿಸಿದರು.

ಆರ್.ಬಿ ತಿಮ್ಮಾಪುರ: ಬಾಗಲಕೋಟೆಯ ಮುಧೋಳ ಮೀಸಲು ಕ್ಷೇತ್ರ ಮೇಲ್ಮನೆ ಸದಸ್ಯರಾದ ಆರ್.ಬಿ.ತಿಮ್ಮಾಪುರ, ಪರಿಶಿಷ್ಟ ಜಾತಿಯ ಎಡ ಪಂಗಡಕ್ಕೆ ಸೇರಿದವರು. ಎಸ್.ಎಂ ಕೃಷ್ಣ ಅವರ ಸರಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದವರು. ಎರಡು ಗೆಲುವು, ನಾಲ್ಕು ಸೋಲು ಕಂಡಿರುವ ಇವರು ಮಾದಿಗ ಸಮುದಾಯಕ್ಕೆ ಸೇರಿದ ಉತ್ತರ ಕರ್ನಾಟಕದ ಏಕೈಕ ನಾಯಕರು ಕೂಡ. ಇವರಿಗೆ ಈ ಬಾರಿ ಸಚಿವ ಸ್ಥಾನ ನೀಡಲಾಗಿದೆ.

ರಹೀಂ ಖಾನ್: ಅಲ್ಪಸಂಖ್ಯಾತರ ಕೋಟಾದಲ್ಲಿ ಸಚಿವರಾಗಿರುವ ಬೀದರ್ ಉತ್ತರ ಕ್ಷೇತ್ರದ ಶಾಸಕ ರಹೀಂ ಖಾನ್, ಮೂರು ಬಾರಿ ಶಾಸಕರಾಗಿ ಆಯ್ಕೆಯಾದವರು. ಈ ಹಿಂದೆಯೇ ಸಚಿವ ಸ್ಥಾನಾಕಾಂಕ್ಷಿಯಾಗಿದ್ದ ಅವರು, ಕೈ ತಪ್ಪಿದ್ದರಿಂದ ಬೇಸರ ವ್ಯಕ್ತಪಡಿಸಿದ್ದರು. ಹೈದರಾಬಾದ್ ಕರ್ನಾಟಕ ಭಾಗದ ಮುಸ್ಲಿಮ್ ಸಮುದಾಯದ ಪ್ರತಿನಿಧಿಯಾದ ಇವರು ಇದೇ ಮೊದಲ ಬಾರಿಗೆ ಸಚಿವರಾಗಿ ಪ್ರಮಾನ ವಚನ ಸ್ವೀಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News