ಹುಮಾಯೂನ್ ಖಾನ್ ರನ್ನು ಗೌರವಿಸುವ ಮಸೂದೆಗೆ ಟ್ರಂಪ್ ಸಹಿ

Update: 2018-12-22 16:32 GMT

ವಾಶಿಂಗ್ಟನ್, ಡಿ. 22: ವರ್ಜೀನಿಯ ಅಂಚೆ ಕಚೇರಿಗೆ ಇರಾಕ್ ಯುದ್ಧದಲ್ಲಿ ಮೃತಪಟ್ಟ ಅಮೆರಿಕ ಸೈನಿಕ ಹುಮಾಯೂನ್ ಖಾನ್ ಹೆಸರನ್ನು ಇಡುವ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ ಸಹಿ ಹಾಕಿದ್ದಾರೆ.

ಹುಮಾಯೂನ್ ಖಾನ್‌ರ ಹೆತ್ತವರನ್ನು 2016ರ ಚುನಾವಣಾ ಪ್ರಚಾರದ ಸಮಯದಲ್ಲಿ ಟ್ರಂಪ್ ಟೀಕಿಸಿರುವುದನ್ನು ಸ್ಮರಿಸಬಹುದಾಗಿದೆ.

ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್‌ರ ಪ್ರಚಾರ ಸಭೆಯೊಂದರಲ್ಲಿ ಹುಮಾಯೂನ್‌ರ ತಂದೆ ಖಿಝರ್ ಖಾನ್ ಮತ್ತು ತಾಯಿ ಘಝಲಾ ಖಾನ್ ಭಾಗವಹಿಸಿದ್ದರು. ಮುಸ್ಲಿಮರು ಅಮೆರಿಕ ಪ್ರವೇಶಿಸುವುದನ್ನು ನಿಷೇಧಿಸಬೇಕೆನ್ನುವ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಟ್ರಂಪ್‌ರ ಕರೆಗಳನ್ನು ಖಿಝರ್ ಖಾನ್ ಟೀಕಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಟ್ರಂಪ್, ಖಿಝರ್ ಖಾನ್‌ರ ಭಾಷಣವನ್ನು ಹಿಲರಿ ಕ್ಲಿಂಟನ್‌ರ ಪ್ರಚಾರ ತಂಡದವರು ಬರೆದುಕೊಟ್ಟಿರಬಹುದು ಎಂದು ಹೇಳಿದ್ದರು.

ವರ್ಜೀನಿಯದ ಅಂಚೆ ಕಚೇರಿಗೆ ಹುಮಾಯೂನ್ ಖಾನ್ ಹೆಸರಿಡುವ ಪ್ರಸ್ತಾಪವನ್ನು ವರ್ಜೀನಿಯದ ರಿಪಬ್ಲಿಕನ್ ಪ್ರತಿನಿಧಿ ಟಾಮ್ ಗ್ಯಾರೆಟ್ ಮಂಡಿಸಿದರು. ಅದನ್ನು ಸಂಸತ್ತು ಕಾಂಗ್ರೆಸ್ ಅವಿರೋಧವಾಗಿ ಅಂಗೀಕರಿಸಿತು.

27 ವರ್ಷದ ಹುಮಾಯೂನ್ 2004ರಲ್ಲಿ ಇರಾಕ್‌ನಲ್ಲಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News