ಅಫ್ಘಾನ್‌ನಿಂದ 7,000 ಅಮೆರಿಕ ಸೈನಿಕರ ವಾಪಸ್: ಹಠಾತ್ ಆದೇಶ

Update: 2018-12-22 16:39 GMT

ವಾಶಿಂಗ್ಟನ್, ಡಿ. 22: ಸಿರಿಯದಿಂದ 2,000 ಸೈನಿಕರನ್ನು ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿದ ಬೆನ್ನಿಗೇ, ಅಫ್ಘಾನಿಸ್ತಾನದಿಂದ 7,000 ಅಮೆರಿಕ ಸೈನಿಕರನ್ನು ವಾಪಸ್ ಕರೆಸಿಕೊಳ್ಳಲು ಅಮೆರಿಕದ ಟ್ರಂಪ್ ಆಡಳಿತ ಗುರುವಾರ ಆದೇಶ ನೀಡಿದೆ.

ಈ ವಾಪಸಾತಿಯ ಬಳಿಕವೂ ಸುಮಾರು 7,000 ಅಮೆರಿಕ ಸೈನಿಕರು ಅಫ್ಘಾನಿಸ್ತಾನದಲ್ಲಿ ಉಳಿಯುತ್ತಾರೆ. ಆದರೆ, ಈ ಬಗ್ಗೆಯೂ ಅನಿಶ್ಚಿತತೆ ಮತ್ತು ಅನುಮಾನಗಳು ನೆಲೆಸಿವೆ.

ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ರಾಜೀನಾಮೆ ನೀಡಿದ ಗಂಟೆಗಳ ಬಳಿಕ ಅಫ್ಘಾನಿಸ್ತಾನದಿಂದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟನೆಗಳನ್ನು ನೀಡಲಾಗಿಲ್ಲ ಹಾಗೂ ಟ್ರಂಪ್ ಒಂದು ಟ್ವೀಟ್ ಕೂಡ ಮಾಡಿಲ್ಲ. ಅಫ್ಘಾನಿಸ್ತಾನದಲ್ಲಿ ಅಮೆರಿಕ ಸುದೀರ್ಘ 17 ವರ್ಷಗಳ ಕಾಲ ತಾಲಿಬಾನ್ ವಿರುದ್ಧ ಯುದ್ಧ ಮಾಡಿದೆ.

ಪರಿಣಾಮವಿಲ್ಲ: ಅಫ್ಘಾನಿಸ್ತಾನ

ಈ ಬೆಳವಣಿಗೆಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿರುವ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ವಕ್ತಾರರೊಬ್ಬರು, ‘‘ಅವರು ಅಫ್ಘಾನಿಸ್ತಾನದಿಂದ ಸೇನೆ ವಾಪಸ ಪಡೆದುಕೊಂಡರೆ, ಅದು ದೇಶದ ಮೇಲೆ ಯಾವುದೇ ಭದ್ರತಾ ಪರಿಣಾಮ ಬೀರುವುದಿಲ್ಲ. ಯಾಕೆಂದರೆ, ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸೇನಾ ಕಾರ್ಯಾಚರಣೆಯ ಪೂರ್ಣ ನಿಯಂತ್ರಣವನ್ನು ಅಫ್ಘಾನ್ ಸೇನೆ ವಹಿಸಿಕೊಂಡಿದೆ’’ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News