ಲೋಕಸಭಾ ಚುನಾವಣೆ: ಆರೆಸ್ಸೆಸ್ ಬಿಜೆಪಿಗೆ ನೀಡಿದ ಸಲಹೆ ಏನು ಗೊತ್ತೇ?

Update: 2018-12-24 03:53 GMT

ಹೊಸದಿಲ್ಲಿ, ಡಿ.24: ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಆಗಿರುವ ಹೀನಾಯ ಸೋಲಿನಿಂದ ಹೊರಬಂದು 2019ರ ಲೋಕಸಭಾ ಚುನಾವಣೆಯಲ್ಲಿ ತಿರುಗೇಟು ನೀಡಲು ರಣತಂತ್ರ ರೂಪಿಸುತ್ತಿರುವ ಬಿಜೆಪಿಗೆ ಆರೆಸ್ಸೆಸ್ ಮಹತ್ವದ ಸಲಹೆಗಳನ್ನು ನೀಡಿದೆ.

ಪ್ರಮುಖ ಮೂರು ಹಿಂದಿ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರುವ ಬಿಜೆಪಿ, ಮಧ್ಯಮವರ್ಗ, ರೈತರು, ಕಾರ್ಮಿಕರು ಹಾಗೂ ಸಣ್ಣ ಉದ್ಯಮಶೀಲರಿಗೆ ಅನುಕೂಲ ಕಲ್ಪಿಸುವಂತೆ ಸೂಚಿಸಿದೆ. ಜತೆಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತು ಜನರಿಗೆ ನೀಡಿದ ಭರವಸೆ ಈಡೇರಿಸುವಂತೆಯೂ ಸಲಹೆ ಮಾಡಿದೆ.

ಆಯಾ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹವರ್ತಿ ಸಂಘಟನೆಗಳಿಂದ ಅಭಿಪ್ರಾಯ ಪಡೆದ ಬಳಿಕ ಈ ಸಲಹೆ ನೀಡಲಾಗಿದೆ. ಕಾರ್ಮಿಕರು, ರೈತರು, ಆರ್ಥಿಕತೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಗಮನಹರಿಸಬೇಕು. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸರ್ಕಾರ ಜಾರಿಗೊಳಿಸಿದ ಜಿಎಸ್‌ಟಿ ಹಾಗೂ ನೋಟು ರದ್ದತಿಯಂಥ ನಿರ್ಧಾರಗಳ ಬಗ್ಗೆ ಅಸಮ್ಮತಿ ವ್ಯಕ್ತವಾಗಿದೆ. ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎಂಬ ಘೋಷಣೆಗೆ ಅನುಗುಣವಾದ ಯೋಜನೆ ಅನುಷ್ಠಾನದಲ್ಲೂ ವ್ಯಾಪಕ ಅಂತರ ಇರುವುದನ್ನು ಒತ್ತಿಹೇಳಿವೆ.

ಸರ್ಕಾರದ ದೊಡ್ಡ ಆರ್ಥಿಕ ಸುಧಾರಣೆ ಎಂದು ಬಿಂಬಿಸಲಾದ ನೋಟು ರದ್ದತಿ ನಿರ್ಧಾರವನ್ನು ಸಂಘ ಪರಿವಾರ ವಿರೋಧಿಸಿದ್ದು, ಇದು ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ದಿಮೆಗೆ ಮಾರಕ ಎಂದು ಬಣ್ಣಿಸಿದೆ. ಈ ಹಿನ್ನೆಲೆಯಲ್ಲಿ "ಉದ್ಯಮ, ವ್ಯಾಪಾರ, ಕೃಷಿ ಹಾಗೂ ಪರಿಸರ ಕ್ಷೇತ್ರದ ಅಗತ್ಯತೆಗಳನ್ನು ಪೂರೈಸುವ ಸಮಗ್ರ ನೀತಿ" ರೂಪಿಸುವಂತೆ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಸಲಹೆ ಮಾಡಿದ್ದಾರೆ.

2014ರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ರಾಮಮಂದಿರ ಭರವಸೆ ಈಡೇರಿಸದಿದ್ದರೆ ಬಿಜೆಪಿ ಜನಬೆಂಬಲ ಕಳೆದುಕೊಳ್ಳಲಿದೆ ಎಂದು ವಿಶ್ವಹಿಂದೂ ಪರಿಷತ್ ಈಗಾಗಲೇ ಎಚ್ಚರಿಕೆ ನೀಡಿದೆ. ಅಂತೆಯೇ ಸಹವರ್ತಿ ಸಂಘಟನೆಗಳಾದ ಲಘು ಉದ್ಯೋಗ ಭಾರತಿ, ಭಾರತೀಯ ಕಿಸಾನ್ ಸಂಘ ಕೂಡಾ ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News