ದೇಶದ ಅತೀ ಉದ್ದದ ರೈಲ್ ರೋಡ್ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ

Update: 2018-12-25 16:49 GMT

ಬೊಗಿಬೀಲ್,ಡಿ.25: ದೇಶದ ಅತ್ಯಂತ ಉದ್ದದ ರೈಲು ಮತ್ತು ರಸ್ತೆ ಸೇತುವೆಯನ್ನು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅಸ್ಸಾಂನ ದಿಬ್ರುಗಡ್ ಸಮೀಪದ ಬೊಗಿಬೀಲ್‌ನಲ್ಲಿ ಉದ್ಘಾಟಿಸಿದ್ದಾರೆ. ಮಧ್ಯಾಹ್ನದ ಸುಮಾರಿಗೆ ಹೊಸದಿಲ್ಲಿಯಿಂದ ಆಗಮಿಸಿದ ಪ್ರಧಾನಿ 4.94 ಕಿ.ಮೀ ಉದ್ದದ ಡಬಲ್ ಡೆಕ್ಕರ್ ಸೇತುವೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.

ಈ ವೇಳೆ ತನ್ನ ವಾಹನದಿಂದ ಕೆಳಗಿಳಿದ ಪ್ರಧಾನಿ ಅಸ್ಸಾಂ ರಾಜ್ಯಪಾಲ ಜಗದೀಶ್ ಮುಖಿ ಮತ್ತು ಮುಖ್ಯಮಂತ್ರಿ ಸರ್ಬನಂದ ಸೊನೊವಾಲ್ ಜೊತೆ ಸೇತುವೆಯ ಮೇಲೆ ಸ್ವಲ್ಪ ದೂರ ನಡೆದುಕೊಂಡೇ ಸಾಗಿದರು.

ಸೇತುವೆಯನ್ನು ಇನ್ನೊಂದು ಕಡೆ ಬ್ರಹ್ಮಪುತ್ರ ನದಿಯ ಉತ್ತರದ ದಡಕ್ಕೆ ತನ್ನ ಬೆಂಗಾವಲು ವಾಹನಗಳ ಜೊತೆ ಸಾಗಿದ ಮೋದಿ ಅಲ್ಲಿ ತಿನ್ಸುಕಿಯ-ನಹರ್ಲಗುನ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಈ ಸೇತುವೆಯ ಮೇಲೆ ವಾರದ ಐದು ದಿನ ರೈಲು ಓಡಾಡ ನಡೆಸಲಿದೆ. ನೂತನವಾಗಿ ಉದ್ಘಾಟನೆಗೊಂಡಿರುವ ಸೇತುವೆಯಿಂದ ಅಸ್ಸಾಂನ ತಿನ್ಸುಕಿಯ ಮತ್ತು ಅರುಣಾಚಲ ಪ್ರದೇಶದ ನಹರ್ಲಗುನ್ ಮಧ್ಯೆ ಪ್ರಯಾಣದ ಸಮಯ ಹತ್ತು ಗಂಟೆಗಳಷ್ಟು ಕಡಿಮೆಯಾಗಲಿದೆ.

ಅಸ್ಸಾಂನ ದಿಬ್ರುಗಡ್‌ನಲ್ಲಿ ಆರಂಭವಾಗಿ ದೆಮಜಿ ಜಿಲ್ಲೆಯಲ್ಲಿ ಕೊನೆಯಾಗುವ ಈ ಸೇತುವೆಯು ಅರುಣಾಚಲ ಪ್ರದೇಶದ ಸಂಪರ್ಕ ಸಾಧಿಸಲು ಕಷ್ಟವಾಗಿರುವ ಹಲವು ಜಿಲ್ಲೆಗಳ ಜೊತೆ ಸುಗಮ ಸಂಪರ್ಕಕ್ಕೆ ಎಡೆಮಾಡಲಿದೆ. 1997ರ ಜನವರಿ 22ರಂದು ಅಂದಿನ ಪ್ರಧಾನಿ ಎಚ್.ಡಿ ದೇವೇಗೌಡ ವರು ಬೊಗಿಬೀಲ್ ಸೇತುವೆಗೆ ಶಂಕು ಸ್ಥಾಪನೆ ಮಾಡಿದ್ದರು. ಆದರೆ ಇದರ ಕಾರ್ಯ 2002,ಎಪ್ರಿಲ್ 21ರಂದು ವಾಜಪೇಯಿ ಸರಕಾರದ ಅವಧಿಯಲ್ಲಿ ಆರಂಭವಾಗಿತ್ತು. ಹಲವು ಅಡೆತಡೆಗಳನ್ನು ಎದುರಿಸಿ ವಿಳಂಬವಾಗುತ್ತಾ ಸಾಗಿದ ಯೋಜನೆಯ ವೆಚ್ಚ ಆರಂಭಿಕ ಅಂದಾಜು 3,230.02 ಕೋ.ರೂ.ನಿಂದ 5,960 ಕೋ.ರೂ.ಗೆ ತಲುಪಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News