ದೇಶದ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ ಮಹತ್ತರ: ಶಾಸಕ ಟಿ.ಡಿ.ರಾಜೇಗೌಡ

Update: 2018-12-25 11:57 GMT

ಚಿಕ್ಕಮಗಳೂರು, ನ.25: ಶಿಕ್ಷಣ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅಭಿಪ್ರಾಯಿಸಿದರು.

ಸಿರಿವಾಸೆ ವಿವೇಕಾನಂದ ವಿದ್ಯಾಸಂಸ್ಥೆ ಸಂಯುಕ್ತ ಪ್ರೌಢಶಾಲೆಯ 43ನೆಯ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬದುಕಿಗಾಗಿ ಶಿಕ್ಷಣ ಅನಿವಾರ್ಯ. ಮಾಹಿತಿ ತಂತ್ರಜ್ಞಾನ ಕ್ಷೇತ್ರ ನಾಗಲೋಟದ ಬೆಳವಣಿಗೆಯಲ್ಲಿ ಅಂತರ್ಜಾಲ ಬಳಸಿ ಮೊಬೈಲ್ ಮೂಲಕ ಬೇಕಾದ್ದನ್ನೆಲ್ಲ ಪಡೆದುಕೊಳ್ಳುವ ಇಂದಿನ ದಿನಗಳಲ್ಲಿ ಎಲ್ಲರಿಗೂ ಕನಿಷ್ಟ ಶಿಕ್ಷಣ ಅತ್ಯಗತ್ಯ. ದೇಶದ ಭವಿಷ್ಯಕ್ಕಾಗಿ ಗುಣಮಟ್ಟದ ಶಿಕ್ಷಣ ನೀಡುವುದು ಸಮಾಜದ ಹೊಣೆ. ಸ್ವಚ್ಛತೆ, ಆರೋಗ್ಯ, ಕ್ರೀಡೆ, ಸಾಹಿತ್ಯ ಮತ್ತು ಸಂಗೀತ, ನಾಟಕ ಮತ್ತು ಕಲೆಗಳ ಅರಿವು ಶಿಕ್ಷಣದೊಂದಿಗೆ ಮೂಡಿಸಿದರೆ ವಿದ್ಯಾರ್ಥಿಗಳು ಸಮಾಜಕ್ಕೆ ಆಸ್ತಿಯಾಗಿ ರೂಪುಗೊಳ್ಳುತ್ತಾರೆ. ಮಕ್ಕಳಲ್ಲಿ ಜಾತಿ, ಧರ್ಮದ ವಿಷಬೀಜ ಬಿತ್ತುವ ಪಾಪದ ಕಾರ್ಯ ಯಾರೂ ಮಾಡಬಾರದೆಂದರು. 

ಸಮಾರೋಪ ಭಾಷಣ ಮಾಡಿದ ವಿಧಾನಪರಿಷತ್ ಮಾಜಿಸಭಾಪತಿ ಡಾ.ಬಿ.ಎಲ್.ಶಂಕರ್, ಜ್ಞಾನ ಸಂಪಾದನೆಗೆ ಮಾತೃಭಾಷೆಗಿಂತ ಮಿಗಿಲಾದ ಭಾಷೆ ಮತ್ತೊಂದಿಲ್ಲ. ಬ್ರಿಟೀಷರು ಶತಮಾನಗಳ ಕಾಲ ಆಳಿದ ಪರಿಣಾಮ ಇಂಗ್ಲೀಷ್ ಭ್ರಮೆ ನಮ್ಮನ್ನು ಆವರಿಸಿದೆ. ಅನೇಕ ದೇಶಗಳು ಇಂಗ್ಲೀಷ್ ಕಲಿಯದೆ ಮುಂದುವರೆದಿರುವುದು ಇತಿಹಾಸ ಎಂದರು. 

ಕೆಪಿಸಿಸಿ ಪ್ರಧಾನಕಾರ್ಯದರ್ಶಿ ಎಂ.ಎಲ್.ಮೂರ್ತಿ ಮಾತನಾಡಿ ಜ್ಞಾನಾರ್ಜನೆಗಾಗಿ ಶಿಕ್ಷಣವೇ ಹೊರತು, ಶಿಕ್ಷಣ ಹಣ ಗಳಿಸುವ ಯಂತ್ರವಲ್ಲ.  ಏಕಾಗ್ರತೆಯಿಂದ ಪಾಠ ಕೇಳಿ, ಅದನ್ನು ಮೆಲುಕುಹಾಕಿ, ಬರೆದು ದಾಖಲಿಸುವ ಮೂಲಕ ವಿಷಯವನ್ನು ಮನನ ಮಾಡಿಕೊಳ್ಳಬಹುದು. ಪೋಷಕರ ಸದಾಶಯ ಈಡೇರಿಸುವ ನಿಟ್ಟಿನಲ್ಲಿ ಮಕ್ಕಳು ಆಸಕ್ತಿಯಿಂದ ಆಟ-ಪಾಠಗಳಲ್ಲಿ ತೊಡಗಿಸಿಕೊಳ್ಳಬೇಕು.  ಮಕ್ಕಳ ಪ್ರತಿಭೆ ಪ್ರದರ್ಶನಕ್ಕೆ ವಾರ್ಷಿಕೋತ್ಸವವಗಳು ಉತ್ತಮ ವೇದಿಕೆ ಎಂದರು.

ಸಂಸ್ಥೆಯ ಸ್ಥಾಪಕ ಸದಸ್ಯ ದಿವಂಗತ 'ಶೇಖರ್ ಶೆಟ್ಟಿ ಬಯಲುರಂಗಮಂದಿರ'ಕ್ಕೆ ಲಕ್ಷ ರೂ.ದೇಣಿಗೆ ನೀಡಿದ ನಿರ್ದೇಶಕ ಶ್ರೀಕಾಂತಶೆಟ್ಟಿ ಮತ್ತು ಎಐಸಿಸಿ ಕಾರ್ಯದರ್ಶಿ ಬಿ.ಎಂ.ಸಂದೀಪ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವಿವೇಕಾನಂದ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎಂ.ಭೋಜೇಗೌಡ ವಾರ್ಷಿಕೋತ್ಸವದ ಅಧ್ಯಕ್ಷತೆ ವಹಿಸಿದ್ದರು. ಗೌರವಕಾರ್ಯದರ್ಶಿ ಎಸ್.ಎಂ.ದೇವಣ್ಣಗೌಡ ಬಹುಮಾನ ವಿತರಿಸಿದರು. ಮುಖ್ಯಶಿಕ್ಷಕಿ ಅನುಸೂಯ ವಿಶ್ವನಾಥ್ ಸ್ವಾಗತಿಸಿ, ಗಂಗಾಧರ ವಂದಿಸಿದರು. ನಿರ್ದೇಶಕರಾದ ಬಿ.ಎ.ಶಿವಶಂಕರ್ ಪ್ರಾಸ್ತಾವಿಸಿದ್ದು, ಬಿ.ನೀ.ವಿಶ್ವನಾಥ್ ನಿರೂಪಿಸಿದರು. ಸೇವಾನಿವೃತ್ತಿಗೊಂಡ ಶಿಕ್ಷಕರಾದ ಕೆ.ಚಂದ್ರಯ್ಯ ಮತ್ತು ಶಶಿಕಲಾ, ಗುಮಾಸ್ತ ಸದಾಶಿವಪೂಜಾರಿ ಮತ್ತು ಸಹಾಯಕ ಪುಟ್ಟಸ್ವಾಮಿ ಅವರನ್ನು ವಿದ್ಯಾಸಂಸ್ಥೆವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.

ಶಾಲೆಯ ನರೇಂದ್ರ ಕೀಡಾಂಗಣದಲ್ಲಿ ಹಿರಿಯ ವಿದ್ಯಾರ್ಥಿ ಬಿ.ಎಂ.ಮಂಜುನಾಥ್ ಅಧ್ಯಕ್ಷತೆಯಲ್ಲಿ ಶಾಲಾ ಕ್ರೀಡಾಕೂಟವನ್ನು ನಿರ್ದೇಶಕ ಬಿ.ಎ.ಮಂಜಪ್ಪಗೌಡ ಉದ್ಘಾಟಿಸಿದರು. ಬೊಗಸೆ ವೀರಕೇಸರಿ ಸಂಘದ ಅಧ್ಯಕ್ಷ ಬಿ.ಕೆ.ಮುಕುಂದ ಮುಖ್ಯಅತಿಥಿಗಳಾಗಿದ್ದರು. ವಿದ್ಯಾರ್ಥಿ ನಾಯಕ ಎಚ್.ಸಿ.ಅಭಿನಂದನ್ ಕ್ರೀಡಾಜ್ಯೋತಿ ಬೆಳಗಿದರು. ಮುಖ್ಯಶಿಕ್ಷಕಿ ಅನುಸೂಯ, ನಿರ್ದೇಶಕರುಗಳಾದ ಶಿವಶಂಕರ್, ಬಿ.ನಿ.ವಿಶ್ವನಾಥ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News