ಕಳಸ: ಅಡಕೆ ಕಳ್ಳತನ; ಓರ್ವನ ಬಂಧನ

Update: 2018-12-25 12:12 GMT

ಕಳಸ, ಡಿ.25: ಇಲ್ಲಿಗೆ ಸಮೀಪದ ಹಳುವಳ್ಳಿ ಶೈಲೇಶ್ ಎಂಬವರ ಗೋಡಾನ್‍ನಲ್ಲಿ ಒಣಗಿಸಲು ಹಾಕಿದ್ದ ಅಡಕೆಯನ್ನು ಕದ್ದಿರುವ ಘಟನೆ ಕಳಸ ಸಮೀಪದ ಹಳುವಳ್ಳಿಯಲ್ಲಿ ನಡೆದಿದೆ. ಘಟನೆ ಸಂಬಂಧ ಬಸರಿಕಟ್ಟೆಯ ರಾಘವೇಂದ್ರ ಎಂಬ ಆರೋಪಿಯನ್ನು ಕಳಸ ಪೊಲೀಸರು ಬಂಧಿಸಿದ್ದು, ಪ್ರಕರಣದ ಮತ್ತೊಬ್ಬ ಆರೋಪಿ ತಮಿಳುನಾಡು ಮೂಲದ ಮಹೇಂದ್ರ ಎಂಬಾತ ತಲೆಮರೆಸಿಕೊಂಡಿದ್ದಾನೆಂದು ತಿಳಿದು ಬಂದಿದೆ. 

ಸೋಮವಾರದ ಬೆಳಗ್ಗಿನ ಜಾವ 3:15ರ ಸಮಯಕ್ಕೆ ಕಳ್ಳರು ಅಡಕೆಯನ್ನು ಒಣಗಿಸಲು ಹಾಕಿದ್ದ ಸ್ಥಳಕ್ಕೆ ಬಂದಿದ್ದಾರೆ. ಅಲ್ಲಿ ಸಿಸಿ ಕ್ಯಾಮಾರವನ್ನು ಅಳವಡಿಸಿದ್ದನ್ನು ನೋಡಿದ ಕಳ್ಳರು, ಸಿಸಿ ಕ್ಯಾಮರವನ್ನು ಮೊದಲು ಕದ್ದು ನಂತರ ಅಡಕೆ ಮೂಟೆಗಳನ್ನು ಬೈಕ್ ಮೇಲೆ ಹೇರಿಕೊಂಡು ಪರಾರಿಯಾಗಿದ್ದಾರೆ. ಮಂಗಳವಾರ ಬೆಳಗ್ಗೆ ಸಿಸಿ ಕ್ಯಾಮರ ನೋಡಿದಾಗ ಒಂದು ಕ್ಯಾಮರ ಕಾರ್ಯನಿರ್ವಹಿಸದಿರುವುದನ್ನು ಗಮನಿಸಿದ ಶೈಲೇಶ್ ಅಡಕೆ ಓಣಗಿಸಲು ಹಾಕಿದ ಸ್ಥಳಕ್ಕೆ ಬಂದಾಗ ಸಿಸಿ ಕ್ಯಾಮರಾದೊಂದಿಗೆ ಅಡಕೆ ಮೂಟೆಗಳನ್ನು ಕದ್ದಿರುವುದು ಗಮನಕ್ಕೆ ಬಂದಿದೆ.

ಇತ್ತ ಅಡಕೆ ಕದ್ದ ಆರೋಪಿ ಅಡಕೆಯನ್ನು ಕಳಸಕ್ಕೆ ತಂದು ಅಂಗಡಿಯೊಂದಕ್ಕೆ ಮಾರಲು ಬಂದಿದ್ದಾರೆ. ಅನುಮಾನ ಬಂದ ಅಂಗಡಿ ಮಾಲಕ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಬಸರೀಕಟ್ಟೆಯ ರಾಘವೇಂದ್ರನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಅಡಕೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಯಿಂದ 20 ಕೆ.ಜಿ ಅಡಕೆ, ಬೈಕ್ ವಶಪಡಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ನ್ಯಾಯಲಯಕ್ಕೆ ಹಾಜರು ಪಡಿಸಿದ್ದಾರೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News