ರಮೇಶ್ ಜಾರಕಿಹೊಳಿ ರಾಜೀನಾಮೆ ಹೇಳಿಕೆ: ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ

Update: 2018-12-25 14:05 GMT

ಬೆಳಗಾವಿ, ಡಿ.25: ಸಂಪುಟ ಪುನರ್ ರರಚನೆ ಬಳಿಕ ಪಕ್ಷದಲ್ಲಿ ಅಸಮಾಧಾನ ಇರುವುದು ಸಹಜ. ಯಾರು ಕೂಡಾ ರಾಜೀನಾಮೆ ನೀಡುವುದಿಲ್ಲ. ರಮೇಶ್ ಜಾರಕಿಹೊಳಿ ಜೊತೆ ನಾನು ಚರ್ಚೆ ಮಾಡುತ್ತೇನೆ ಎಂದು ನೂತನ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಂಗಳವಾರ ಮೊದಲ ಬಾರಿ ಬೆಳಗಾವಿಗೆ ಆಗಮಿಸಿದ ಸತೀಶ್ ಜಾರಕಿಹೊಳಿ, ಕಿತ್ತೂರು ರಾಣಿ ಚನ್ನಮ್ಮ, ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ ಹಾಗೂ ಛತ್ರಪತಿ ಶಿವಾಜಿ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಪಕ್ಷದ ವರಿಷ್ಠರು ರಮೇಶ್ ಜಾರಕಿಹೊಳಿ ಜೊತೆ ಮಾತನಾಡುತ್ತಾರೆ. ಬಿಜೆಪಿಯವರು ಹೇಳಿದ ತಕ್ಷಣ ಸರಕಾರ ಬೀಳುವುದಿಲ್ಲ. ರಮೇಶ್ ಜಾರಕಿಹೊಳಿ ಇನ್ನೂ ಸಂಪರ್ಕಕ್ಕೆ ಸಿಕ್ಕಿಲ್ಲ. ನಾನು ಅವರ ಜತೆಗೆ ಮಾತನಾಡುತ್ತೇನೆ ಎಂದು ಅವರು ಹೇಳಿದರು.

ಬೆಳಗಾವಿ ಜಿಲ್ಲೆಯಲ್ಲಿ ಸಾಕಷ್ಟು ಸಮಸ್ಯೆಗಳು, ಸವಾಲುಗಳು ಇವೆ. ಹಂತ ಹಂತವಾಗಿ ಅವುಗಳನ್ನು ಪರಿಹಾರ ಮಾಡಲು ಯತ್ನಿಸಲಾಗುತ್ತದೆ. ಬೆಳಗಾವಿ ನಗರದ ಅಭಿವೃದ್ಧಿ ಬಗ್ಗೆ ಜನರು ನಿರೀಕ್ಷೆ ಹೊಂದಿದ್ದಾರೆ. ರಾಜಕೀಯ ಸಮಸ್ಯೆ ಬಗ್ಗೆ ಮುಖಂಡರ ಜೊತೆಗೆ ಚರ್ಚಿಸಿ ಪರಿಹರಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಖಾತೆ ಹಂಚಿಕೆ ಬಗ್ಗೆ ನಾಳೆ ಅಂತಿಮಗೊಳ್ಳಲಿದ್ದು, ಯಾವುದೇ ಖಾತೆ ಕೊಟ್ಟರು ನಿಭಾಯಿಸಲು ಸಿದ್ಧನಿದ್ದೇನೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News