"ಮುಖ್ಯಮಂತ್ರಿಯಾಗಿ ಆ ಮಾತು ಹೇಳಲಿಲ್ಲ, ಪ್ರಜೆಯಾಗಿ ನೋವಿನಿಂದ ಹೇಳಿದೆ"

Update: 2018-12-25 14:42 GMT

ಮಂಡ್ಯ, ಡಿ.25: ಗೂಂಡಾಗಿರಿ ಸಂಸ್ಕೃತಿ ಮುಕ್ತ ರಾಜ್ಯವನ್ನಾಗಿಸಲು ಸಂಕಲ್ಪ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಜೆಡಿಎಸ್ ಮುಖಂಡ ಪ್ರಕಾಶ್ ಹತ್ಯೆ ಹಿನ್ನೆಲೆಯಲ್ಲಿ ಮಂಗಳವಾರ ಮದ್ದೂರು ತಾಲೂಕು ತೊಪ್ಪನಹಳ್ಳಿಗೆ ಭೇಟಿ ನೀಡಿದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ರಾಜ್ಯವನ್ನು ಗೂಂಡಾಗಿರಿಯಿಂದ ಮುಕ್ತಗೊಳಿಸಲೆಂದೇ ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಿಗೆ ನಾನು ಸ್ವತಂತ್ರ ಕೊಡುತ್ತಿರುವುದು ಎಂದು ಅವರು ತಿಳಿಸಿದರು. ಇಂತಹ ಪ್ರಕರಣಗಳು ಮರುಕಳಿಸದಂತೆ ಕಠಿಣ ಕ್ರಮವಹಿಸುವ ತುರ್ತು ಎದುರಾಗಿದ್ದು, ಸದ್ಯದಲ್ಲೇ ಹಿರಿಯ ಅಧಿಕಾರಿಗಳ ಸಭೆ ಕರೆಯುವುದಾಗಿಯೂ ಅವರು ಹೇಳಿದರು.

ನಿನ್ನೆ ನಾನು ವಿಜಯಪುರದಲ್ಲಿದ್ದಾಗ ಪ್ರಕಾಶ್ ಸಾವಿನ ಸುದ್ದಿ ಬಂತು. ಆಗ ಮನಸ್ಸಿಗೆ ಅಘಾತವಾಗಿ ಉದ್ವೇಗದಿಂದ ಹಂತಕರನ್ನು ಶೂಟೌಟ್ ಮಾಡಿ ಎಂದಿದ್ದೆ ಎಂದು ಅವರು ಪ್ರಶ್ನೆಗೆ ಪ್ರತಿಕ್ರಿಯಿಸಿದರು. 'ನಾನು ಮುಖ್ಯಮಂತ್ರಿಯಾಗಿ ಆ ಮಾತು ಹೇಳಲಿಲ್ಲ, ಪ್ರಜೆಯಾಗಿ ನೋವಿನಿಂದ ಆ ಮಾತು ಹೇಳಿದೆ. ಯಾರು ಹತ್ಯೆಯಾದರೂ ನೋವಾಗುತ್ತದೆ. ಆದರೆ, ಅದನ್ನೆ ಬಿಜೆಪಿಯವರು, ಮಾಧ್ಯಮದವರು ವೈಭವೀಕರಿಸಿದರು ಎಂದು ಅವರು ವಿಷಾದಿಸಿದರು.

ಈ ದೇಶದ ವ್ಯವಸ್ಥೆಯೇ ಸರಿಯಿಲ್ಲ. ಕೊಲೆ ಮಾಡುವ ಹಂತಕರು ಜಾಮೀನಿನ ಮೇಲೆ ಹೊರ ಬರುತ್ತಾರೆ. ಈ ರೀತಿಯ ಕಾನೂನು ವ್ಯವಸ್ಥೆಯನ್ನು ಸರಿಪಡಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಣ್ಣೀರು ಹಾಕಿದ ಸಿಎಂ: ಎರಡು ವರ್ಷದ ಹಿಂದೆ ತೊಪ್ಪನಹಳ್ಳಿಯಲ್ಲಿ ಕೊಲೆಯಾದ ಇಬ್ಬರ ಕುಟುಂಬ ಉಳಿಸಲು ಹೋದ ಈತ (ಪ್ರಕಾಶ್) ಏನೂ ತಪ್ಪು ಮಾಡದೆ ಕೊಲೆಯಾಗಿ ಹೋಗಿದ್ದಾನೆ ಎಂದು ಕುಮಾರಸ್ವಾಮಿ ಕಣ್ಣೀರು ಹಾಕಿದರು.

ಪ್ರಕಾಶ್ ಪಕ್ಷದ ನಿಷ್ಠಾವಂತ ಎನ್ನುವುದಕ್ಕಿಂತ ಜನಪರ ಕಾಳಜಿಯುಳ್ಳ ವ್ಯಕ್ತಿಯಾಗಿದ್ದ. ಆತನ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದ ಅವರು, ಆರೋಪಿಗಳ ಬಗ್ಗೆ ಈಗಾಗಲೇ ಸುಳಿವು ಸಿಕ್ಕಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವರಾದ ಸಿ.ಎಸ್.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ಸಾ.ರಾ.ಮಹೇಶ್, ಶಾಸಕರಾದ ಡಾ.ಕೆ.ಅನ್ನದಾನಿ, ಎಂ.ಶ್ರೀನಿವಾಸ್, ಕೆ.ಸಿ.ನಾರಾಯಣಗೌಡ, ಕೆ.ಸುರೇಶ್‍ ಗೌಡ, ರವೀಂದ್ರ ಶ್ರೀಕಂಠಯ್ಯ, ಎನ್.ಅಪ್ಪಾಜಿಗೌಡ, ಇತರ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News