ಸಮ್ಮಿಶ್ರ ಸರಕಾರ ಹೇಗೆ ನಡೆಸಬೇಕೆನ್ನುವುದು ಧರಂ ಸಿಂಗ್ ಅವರಿಂದ ಕಲಿಯಬೇಕು: ಖರ್ಗೆ

Update: 2018-12-25 16:26 GMT

ಕಲಬುರ್ಗಿ, ಡಿ.25: ಸಮ್ಮಿಶ್ರ ಸರಕಾರವನ್ನು ಹೇಗೆ ನಡೆಸಿಕೊಂಡು ಹೋಗಬೇಕು ಎಂಬುದನ್ನು ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರಿಂದ ಕಲಿಯಬೇಕು ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ನುಡಿದರು.

ಮಂಗಳವಾರ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ದಿ.ಎನ್.ಧರಂ ಸಿಂಗ್ ಅವರ 82ನೆ ಜನ್ಮ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈಗಿನ ಸಮ್ಮಿಶ್ರ ಸರಕಾರ ಹೇಗೆ ನಡೆದಿದೆ, ಎಷ್ಟೊಂದು ತೊಂದರೆಗಳು ಬರುತ್ತಿವೆ ಎಂಬುದನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೇಳುವುದನ್ನು ನೀವು ಕೇಳಿರಬಹುದು. ಆದರೂ, ಕುಮಾರಸ್ವಾಮಿ ಅವರು ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ನಮ್ಮ ಪಕ್ಷದ ಯೋಜನೆಗಳನ್ನೂ ಅನುಷ್ಠಾನಗೊಳಿಸುತ್ತಿದ್ದಾರೆ ಎಂದರು.

5 ದಶಕ: ನನ್ನ ಹಾಗೂ ಧರಂ ಸಿಂಗ್ ಅವರ ಐದು ದಶಕಗಳ ಗೆಳೆತನವನ್ನು ಮರೆಯಲಾಗದು. ಅವರ ಜೊತೆಯಲ್ಲಿನ ಒಡನಾಟದ ಪ್ರತಿಯೊಂದು ಕ್ಷಣಗಳೂ ಇಂದಿಗೂ ನೆನಪಿವೆ ಎಂದ ಅವರು, ಧರಂ ಸಿಂಗ್ ನಮ್ಮನ್ನು ಅಗಲಿದ್ದಾರೆ ಎಂದು ನನಗೆ ಅನಿಸಿಲ್ಲ. ಅವರು ಜೀವಂತ ಇದ್ದಾರೆ ಎಂಬ ಭಾವನೆ ನನ್ನದು ಎಂದು ಹೇಳಿದರು.

ಧರಂ ಸಿಂಗ್ ಅವರು ಎಲ್ಲರನ್ನೂ ಪ್ರೀತಿ, ವಿಶ್ವಾಸದಿಂದ ಕಾಣುತ್ತಿದ್ದರು. ಕಾಂಗ್ರೆಸ್ ತತ್ವ ಸಿದ್ಧಾಂತ ಮತ್ತು ಇಂದಿರಾಗಾಂಧಿ ಅವರ ಜನಪರ ಕಾರ್ಯಕ್ರಮಗಳಿಂದಾಗಿ ನಾವಿಬ್ಬರೂ 1969ರಲ್ಲಿ ಕಾಂಗ್ರೆಸ್ ಸೇರ್ಪಡೆಯಾದೆವು. ನಿರಂತರ 50 ವರ್ಷ ಕೆಲಸ ಮಾಡಿದೆವು ಎಂದು ಖರ್ಗೆ ನೆನಪು ಮಾಡಿಕೊಂಡಿದರು.

ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ ಪಾಟೀಲ ಮಾತನಾಡಿ, ಧರಂ ಸಿಂಗ್ ಅವರು ಕಲಬುರ್ಗಿಯಷ್ಟೇ ಬೀದರ್ ಜಿಲ್ಲೆಯೊಂದಿಗೂ ನಂಟು ಹೊಂದಿದ್ದರು. ಅವರು ಹಗಲು ರಾತ್ರಿ ಕೆಲಸ ಮಾಡುತ್ತಿದ್ದರು. ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದರು ಎಂದು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಧರಂ ಸಿಂಗ್ ಅವರು ಬಡವರು, ಶೋಷಿತರು, ರೈತರ ಪರ ಕಾಳಜಿ ಉಳ್ಳವರಾಗಿದ್ದರು. ಈ ಜನರ ಮನಸ್ಸಿನಲ್ಲಿ ಅವರು ಇಂದಿಗೂ ನೆಲೆಸಿದ್ದಾರೆ ಎಂದರು.

ಶಾಸಕ ಎಂ.ವೈ.ಪಾಟೀಲ ಮಾತನಾಡಿ, ಧರಂ ಸಿಂಗ್ ಮತ್ತು ಖರ್ಗೆ ಅವರು ಶುಭ ನುಡಿಯುವ ಶಕುನದ ಹಕ್ಕಿಗಳಿದ್ದಂತೆ ಇದ್ದರು. ಆದರೆ, ಒಂದು ಹಕ್ಕಿ ಹಾರಿ ಹೋಗಿದ್ದು, ಇನ್ನೊಂದು ಹಕ್ಕಿಯ ಮೇಲೆ ಜವಾಬ್ದಾರಿ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಮುಖಂಡ ಬಿ.ಆರ್.ಪಾಟೀಲ ಮಾತನಾಡಿ, ಧರಂ ಸಿಂಗ್ ಅವರು ನಡೆದು ಬಂದ ದಾರಿ, ಮಾಡಿದ ಸಾಧನೆಯನ್ನು ಪ್ರತಿಯೊಬ್ಬರೂ ನೆನಪಿಟ್ಟುಕೊಳ್ಳಬೇಕು. ಅವರ ಆದರ್ಶದ ಹಾದಿಯಲ್ಲಿ ಎಲ್ಲರೂ ಮುಂದೆ ಹೋಗಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಡಾ. ಉಮೇಶ ಜಾಧವ, ಚಂದ್ರಶೇಖರ ಪಾಟೀಲ, ಅರವಿಂದ ಅರಳಿ, ಖನ್ನೀಝ್ ಫಾತಿಮಾ ಸೇರಿದಂತೆ ಪ್ರಮುಖರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News