ಶ್ರೀರಂಗಪಟ್ಟಣ ಅಭಿವೃದ್ಧಿಗೆ 20 ಕೋಟಿ ರೂ. ಅನುದಾನ: ಸಚಿವ ಸಾ.ರಾ.ಮಹೇಶ್

Update: 2018-12-25 16:55 GMT

ಮಂಡ್ಯ, ಡಿ.25: ಐತಿಹಾಸಿಕ ಸ್ಥಳ ಶ್ರೀರಂಗಪಟ್ಟಣಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಇಲ್ಲಿನ ಪ್ರವಾಸಿತಾಣಗಳ ಅಭಿವೃದ್ಧಿಗಾಗಿ ಸರಕಾರದಿಂದ 20 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ನಡೆಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ.

ಮಂಗಳವಾರ ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಿ ಪರಿಶೀಲಿಸಿ ಮತ್ತು ಈ ಸಂಬಂಧ ಮಯೂರ ರಿವರ್ ವ್ಯೂ ಹೊಟೇಲ್ ನಡೆದ ಅಧಿಕಾರಿಗಳ ಸಭೆ ನಡೆಸಿ ನಂತರ ಸುದಿಗಾರರೊಂದಿಗೆ ಅವರು ಮಾತನಾಡಿದರು. ಮುಖ್ಯಮಂತ್ರಿಗಳ ಸೂಚನೆ ಹಾಗೂ ಶ್ರೀರಂಗಪಟ್ಟಣ ಶಾಸಕರ ಮನವಿ ಮೇರೆಗೆ ಇಂದು ಶ್ರೀರಂಗಪಟ್ಟಣಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಶ್ರೀರಂಗಪಟ್ಟಣ ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಒಂದು ಹಂತದ ನೀಲಿ ನಕ್ಷೆ ತಯಾರಾಗಿದ್ದು, ನಂತರದ ದಿನಗಳಲ್ಲಿ ಶಾಸಕರ ನೇತೃತ್ವದಲ್ಲಿ ಸಭೆಯನ್ನು ನಡೆಸಿ ಹೆಚ್ಚುವರಿಯಾಗಿ ಅನುದಾನ ಬೇಕಾದಲ್ಲಿ ಅನುದಾನ ನೀಡಲು ಅಗತ್ಯ ಕ್ರಮವಹಿಸಲಾಗುವುದು ಎಂದು ಅವರು ಹೇಳಿದರು.

ಶ್ರೀರಂಗಪಟ್ಟಣ ಕೋಟೆ ಸುತ್ತಾ ಇರುವ ಕಂದಕಗಳ ನವೀಕರಣ ಮಾಡಿ ನಂತರ ಅಲ್ಲಿ ನೀರನ್ನು ತುಂಬಿಸಿ ಬೋಟಿಂಗ್ ವ್ಯವಸ್ಥೆ ಮಾಡಲಾಗುವುದು. ಅಲ್ಲದೇ ಪ್ರವಾಸಿಗರನ್ನು ಹೆಚ್ಚು ಸೆಳೆಯಲು ಆಕರ್ಷಕವಾದ ವಿದ್ಯುತ್ ದೀಪಗಳ ಅಳವಡಿಕೆ ಹಾಗೂ ಉದ್ಯಾನವನ ನಿರ್ಮಾಣ ಮಾಡಲು ಅಗತ್ಯ ಕ್ರಮವಹಿಸಲಾಗುವುದು ಎಂದು ಅವರು ಅವರು ತಿಳಿಸಿದರು.

ಭಕ್ತಾಧಿಗಳ ಅನುಕೂಲಕ್ಕಾಗಿ ನಿಮಿಷಾಂಭ ದೇವಸ್ಥಾನದ ಬಳಿ ಹೈಟೆಕ್ ಶೌಚಾಲಯದ ನಿರ್ಮಾಣಕ್ಕಾಗಿ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಶ್ರೀರಂಗನಾಥಸ್ವಾಮಿ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ ಸಮರ್ಪಕವಾದ ವಾಹನದ ಪಾರ್ಕಿಂಗ್ ವ್ಯವಸ್ಥೆ ಹಾಗೂ ಅಲ್ಲಿನ ಮೂಲಭೂತ ವ್ಯವಸ್ಥೆ ಹಾಗೂ ಪಟ್ಟಣದ ಇತರೆ ಸ್ಮಾರಕಗಳ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದರು.

ಈ ಸಂದರ್ಭದಲ್ಲಿ ಸಚಿವರು ಶ್ರೀರಂಗಪಟ್ಟಣದಲ್ಲಿರುವ ಕೋಟೆ ಹಾಗೂ ಶ್ರೀರಂಗನಾಥಸ್ವಾಮಿ ದೇವಸ್ಥಾನದ ಅವರಣವನ್ನು ಭೇಟಿ ನೀಡಿ ಪರಿಶೀಲಿಸಿದರು. ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ರಾಮು, ಪಾಂಡವಪುರ ಉಪವಿಭಾಗಧಿಕಾರಿ ಶೈಲಜಾ, ಶ್ರೀರಂಗಪಟ್ಟಣ ತಹಶೀಲ್ದಾರ್ ನಾಗೇಶ್ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News