ಖೆಲೋ ಇಂಡಿಯಾದಿಂದ ಹೆಚ್ಚಿನ ಅನುದಾನಕ್ಕೆ ಕೇಂದ್ರಕ್ಕೆ ಮನವಿ: ಡಿಸಿಎಂ ಪರಮೇಶ್ವರ್

Update: 2018-12-25 18:39 GMT

ಕೊರಟಗೆರೆ,ಡಿ.25: ರಾಜ್ಯದ ಕ್ರೀಡಾಪಟುಗಳಿಗೆ ಹಾಗೂ ಕ್ರೀಡೆಯ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಖೆಲೋ ಇಂಡಿಯಾ ಯೋಜನೆಯಡಿ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಕೇಂದ್ರದ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರಿಗೆ ಮನವಿ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. 

ಕೊರಟಗೆರೆ ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಜಿಲ್ಲೆ ಹಾಗೂ ರಾಜ್ಯದಲ್ಲಿರುವ ಯುವ ಕ್ರೀಡಾ ಪ್ರತಿಭೆಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾಗಿ ಸ್ಪರ್ಧಿಸುವಂತೆ ಮಾಡಲು ರಾಜ್ಯದಲ್ಲಿರುವ ಕ್ರೀಡಾಂಗಣಗಳನ್ನು ಮೇಲ್ದರ್ಜೆಗೇರಿಸಿ, ಮೂಲಭೂತ ಸೌಕರ್ಯ ಕಲ್ಪಿಸಬೇಕಾಗಿದೆ. ಖೆಲೋ ಇಂಡಿಯಾ ಯೋಜನೆಯಡಿ ರಾಜ್ಯಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇನೆ ಎಂದರು. 

ತುಮಕೂರು ಜಿಲ್ಲೆಯಲ್ಲಿ ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪಿಸಲು ಬಜೆಟ್‍ನಲ್ಲಿ ಘೋಷಿಸಲಾಗಿದೆ. ವಿವಿ ಸ್ಥಾಪಿಸಲು 100 ಎಕರೆ ಜಮೀನು ಅಗತ್ಯವಿದ್ದು, ಜಮೀನು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಜಮೀನು ದೊರೆಯುತ್ತಿದ್ದಂತೆ ವಿವಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು. ಕೊರಟಗೆರೆ ಪಟ್ಟಣದಲ್ಲಿರುವ ಕ್ರೀಡಾಂಗಣದಲ್ಲಿ ಆಧುನಿಕ ಸೌಲಭ್ಯವನ್ನೊಳಗೊಂಡ ಕ್ರೀಡಾ ಅಂಕಣ ಮತ್ತು ಪ್ರೇಕ್ಷಕರ ಗ್ಯಾಲರಿಯೊಳಗೊಂಡ ಒಳಾಂಗಣ ಕ್ರೀಡಾಂಗಣ, ವ್ಯಾಯಾಮ ಶಾಲೆ ಸೇರಿ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳ ನಿರ್ಮಾಣಕ್ಕೆ 4.42ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಮುಂದಿನ ಒಂದು ವಾರದ ಒಳಗೆ ಕಾಮಗಾರಿ ಆರಂಭವಾಗಲಿದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು. 

ಕೊರಟಗೆರೆ ಪಟ್ಟಣ ಪಂಚಾಯತ್ ಅನ್ನು ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯದ ನೂರು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ತುಮಕೂರು ಜಿಲ್ಲೆಯಲ್ಲಿ ಮುಂದಿನ 14 ವಾರಗಳಿಗೆ ಸಾಕಾಗುವಷ್ಟು ಮೇವು ಲಭ್ಯವಿದೆ. ಕುಡಿಯುವ ನೀರು ಸೇರಿದಂತೆ ಬರಗಾಲದಲ್ಲಿ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಗತ್ಯ ಹಣವಿರುವ ಹಣ ಬಿಡುಗಡೆ ಮಾಡಲಾಗಿದೆ ಎಂದರು.  

ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ತುಮಕೂರು ನಗರದಿಂದ ಸಮೀಪದಲ್ಲಿ ಇದ್ದರೂ ತನ್ನ ಗ್ರಾಮೀಣ ಸೊಗಡನ್ನು ಓಬಳಾಪುರ ಉಳಿಸಿಕೊಂಡಿದೆ. ಈ ಭಾಗದ ಜನರಿಗೆ ಅಗತ್ಯ ಇರುವ ಮೂಲಭೂತ ಸೌಕರ್ಯವನ್ನು ಕಲ್ಪಿಸಿ ಕೊಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆ ಆಯುಕ್ತ ಶ್ರೀನಿವಾಸ್, ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಜಿಲ್ಲಾ ಪಂಚಾಯತ್ ಸಿಇಓ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ದಿವ್ಯಾ ಗೋಪಿನಾಥ್,ತಹಶೀಲ್ದಾರ್ ನಾಗರಾಜ್, ಉಪವಿಭಾಗ ಅಧಿಕಾರಿ ಚಂದ್ರಶೇಖರಯ್ಯ ಮತ್ತಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News