ಅಖಿಲೇಶ್ ಗೆ ಮತ ನೀಡುತ್ತೇನೆಂದ ವಿಕಲಚೇತನ ವ್ಯಕ್ತಿಗೆ ಬಿಜೆಪಿ ನಾಯಕನಿಂದ ಹಲ್ಲೆ

Update: 2018-12-26 07:09 GMT

ಹೊಸದಿಲ್ಲಿ, ಡಿ.26: ತಾನು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರಿಗೆ ಮತ ನೀಡುವುದಾಗಿ ಹೇಳಿದ ಅಂಗವಿಕಲ ವ್ಯಕ್ತಿಯೊಬ್ಬನಿಗೆ ಉತ್ತರ ಪ್ರದೇಶದ ಸಂಭಲ್ ಎಂಬಲ್ಲಿ ಬಿಜೆಪಿ ನಾಯಕ ಮುಹಮ್ಮದ್ ಮಿಯಾ ಎಂಬವರು ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಕೂಡ ವೈರಲ್ ಆಗಿದೆ.

ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಆಡಳಿತವನ್ನು ಟೀಕಿಸಿದ ವ್ಯಕ್ತಿಗೆ ಮುಹಮ್ಮದ್ ಮಿಯಾ ಸತತವಾಗಿ ಬೆತ್ತದಿಂದ ಹೊಡೆಯುತ್ತಿರುವುದು ಹಾಗೂ ಆತನ ಮುಖವನ್ನು ಕೋಲಿನಿಂದ ಕುಟ್ಟುತ್ತಿರುವುದು ವೀಡಿಯೋದಲ್ಲಿ ಕಾಣಿಸುತ್ತದೆ.

‘‘ವೋಟ್ ದೇಂಗೇ ಅಖಿಲೇಶ್ ಕೋ (ಅಖಿಲೇಶ್‌ಗೆ ಮತ ನೀಡುತ್ತೇನೆ)’’ ಎಂದು ಬೊಬ್ಬಿಡುತ್ತಾ ಆ ವ್ಯಕ್ತಿ ಸ್ಥಳದಿಂದ ಹೋಗುತ್ತಿರುವಾಗ, ಮಿಯಾ ‘‘ ಹೋಗು ಹೋಗು, ಮತ ನೀಡು’’ ಎಂದು ಹೇಳುತ್ತಿರುವುದೂ ಕೇಳಿಸುತ್ತದೆ.

ಅಂಗವಿಕಲನಿಗೆ ಹಲ್ಲೆ ನಡೆಸಿದ್ದಕ್ಕಾಗಿ ಸಾಕಷ್ಟು ಆಕ್ರೋಶ ಎದುರಿಸಿರುವ ಮುಹಮ್ಮದ್ ಮಿಯಾ ತನ್ನನ್ನು ಸಮರ್ಥಿಸಿಕೊಂಡಿದ್ದು ಆ ವ್ಯಕ್ತಿ ‘ಮದ್ಯ ಸೇವಿಸಿದ್ದ’ ಎಂದಿದ್ದಾರಲ್ಲದೆ ಬಿಜೆಪಿಗೆ ಕಳಂಕ ಹಚ್ಚುವ ಸಂಚು ಇದೆಂದು ಹೇಳಿದ್ದಾರೆ.

‘‘ಆತ ಮೋದೀಜಿ, ಆದಿತ್ಯನಾಥ್ ರನ್ನು ನಿಂದಿಸಿದ್ದ, ನಾನು ಅತನಿಗೆ ವಿವರಿಸಲು ಯತ್ನಿಸಿದರೂ ಪ್ರಯೋಜನವಾಗಿಲ್ಲ, ಆತ ಕುಡಿದಿದ್ದ, ಆತ ಅಲ್ಲಿಂದ ತೆರಳುವಂತೆ ಮಾಡಲು ನಾನು ಪ್ರಯತ್ನಿಸಿದ್ದೆ, ಬೆತ್ತವನ್ನು ಆತನ ಬಾಯಿಗೆ ತುರುಕಿಸಿಲ್ಲ’’ ಎಂದು ಅವರು ಹೇಳಿದ್ದಾರೆ.

ಪೊಲೀಸರು ಈ ಘಟನೆ ಕುರಿತಂತೆ ಪ್ರಕರಣ ದಾಖಲಿಸಿದ್ದಾರೆ. ಮುಹಮ್ಮದ್ ಮಿಯಾ ಪಟ್ಟಣದ ಬ್ಲಾಕ್ ಡೆವಲೆಪ್ಮೆಂಟ್ ಆಫೀಸ್ ಚುನಾವಣೆಯಲ್ಲಿ ಇತ್ತೀಚೆಗೆ ಸ್ಪರ್ಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News