ಮೋದಿ, ಮಮತಾ ಬ್ಯಾನರ್ಜಿ ಸರ್ವಾಧಿಕಾರಿಗಳು ಎಂದ ಕನ್ಹಯ್ಯಾ

Update: 2018-12-27 08:12 GMT

ಕೊಲ್ಕತ್ತಾ, ಡಿ. 27: ಕೊಲ್ಕತ್ತಾದಲ್ಲಿ ನಡೆದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಸ್ಥಾಪನಾ ದಿನದ ಸಮಾರಂಭದಲ್ಲಿ ಭಾಗವಹಿಸಿದ ಸಿಪಿಐ ನಾಯಕ ಹಾಗೂ ಜೆಎನ್‍ಯು ಮಾಜಿ ವಿದ್ಯಾರ್ಥಿ ನಾಯಕ ಕನ್ಹಯ್ಯಾ ಕುಮಾರ್, ತಮ್ಮ ಭಾಷಣದಲ್ಲಿ ಮೋದಿ ಸರಕಾರ, ಬಿಜೆಪಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮೋದಿ ಮತ್ತು ಮಮತಾ ಇಬ್ಬರೂ ಧರ್ಮವನ್ನು ಚುನಾವಣಾ ಲಾಭಕ್ಕಾಗಿ ಬಳಸುತ್ತಿದ್ದಾರೆಂದು ಕನ್ಹಯ್ಯಾ ಆರೋಪಿಸಿದ್ದಾರೆ. ಇಬ್ಬರನ್ನೂ ಸರ್ವಾಧಿಕಾರಿಗಳೆಂದು ಬಣ್ಣಿಸಿದ ಕನ್ಹಯ್ಯಾ, ''ಮಮತಾ ಮುಸ್ಲಿಮರ ಓಲೈಕೆಯಲ್ಲಿ ತೊಡಗಿಕೊಂಡರೆ ಮೋದಿ ತಮ್ಮನ್ನು ಹಿಂದೂಗಳ ರಕ್ಷಕನೆಂಬಂತೆ ಬಿಂಬಿಸುತ್ತಿದ್ದಾರೆ'' ಎಂದರು.

''ಬಿಜೆಪಿ ಬಂಗಾಳದಲ್ಲಿ ರಥಯಾತ್ರೆಯನ್ನು ಶ್ರೀರಾಮನಿಗಾಗಿ ಆಯೋಜಿಸುತ್ತಿಲ್ಲ, ಬದಲಾಗಿ ನಾಥೂರಾಂ ಗೋಡ್ಸೆಯ ಸಿದ್ಧಾಂತವನ್ನು ಪಸರಿಸಲು ಆಯೋಜಿಸುತ್ತಿದೆ'' ಎಂದೂ ಅವರು ಆರೋಪಿಸಿದರು.

''ಮೋದಿ ಪ್ರಜಾಪ್ರಭುತ್ವವನ್ನು ನಾಶಗೊಳಿಸಿ ಪ್ರಜಾಸತ್ತಾತ್ಮಕ ಸಂಸ್ಥೆಗಳಿಗೂ ಕಳಂಕ ತರುತ್ತಿದ್ದಾರೆ. ಎಲ್ಲರೂ ಅವರ ವಿರುದ್ಧ ಒಂದಾಗಬೇಕಿದೆ. ಮೋದಿ ದಿಲ್ಲಿಯಲ್ಲಿ ಕುಳಿತುಕೊಂಡು ಮಾಡುತ್ತಿರುವ ಕೆಲಸವನ್ನು ಮಮತಾ ಕೊಲ್ಕತ್ತಾದಲ್ಲಿ ಕುಳಿತುಕೊಂಡು ಮಾಡುತ್ತಿದ್ದಾರೆ'' ಎಂದು ಕನ್ಹಯ್ಯಾ ಆರೋಪಿಸಿದರು.

''ಹಿಂದೂಗಳ ದೊಡ್ಡ ರಕ್ಷಕನಂತೆ ತನ್ನನ್ನು ಮೋದಿ ಬಿಂಬಿಸುತ್ತಿದ್ದರೆ, ಮುಸ್ಲಿಮರ ಬಗ್ಗೆ ಕನಿಕರ ಹೊಂದಿರುವವರಂತೆ ದೀದಿ ಏಕೆ ಬಂಗಾಳದಲ್ಲಿ ತೋರ್ಪಡಿಸುತ್ತಿದ್ದಾರೆ ? ಭಾರತದ ಸಂವಿಧಾನ ಹಿಂದೂಗಳು ಮತ್ತು  ಮುಸಲ್ಮಾನರ ನಡುವೆ ತಾರತಮ್ಯ ಮಾಡುವುದಿಲ್ಲ. ಮತೀಯ ರಾಜಕಾರಣ ನಡೆಸುವ ಪಕ್ಷಗಳು ಸಂವಿಧಾನ ನಾಶಪಡಿಸಲು ಬಯಸಿವೆ'' ಎಂದು ಅವರು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News