ದಲಿತ ವ್ಯಕ್ತಿಯ ಕಸ್ಟಡಿ ಸಾವು: 8 ಪೊಲೀಸರ ಅಮಾನತು

Update: 2018-12-27 18:05 GMT

ಅಮ್ರೋಹ (ಉತ್ತರಪ್ರದೇಶ), ಡಿ. 27: ದಲಿತ ವ್ಯಕ್ತಿಯ ಕಸ್ಟಡಿ ಸಾವು ಪ್ರಕರಣದಲ್ಲಿ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಅಮ್ರೋಹದ ಧನೌರಾ ಪೊಲೀಸ್ ಠಾಣೆಯ ಎಸ್‌ಎಚ್‌ಒ ಸಹಿತ 8 ಮಂದಿ ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ಈ ವಿಷಯದ ಕುರಿತು ಇಲಾಖಾ ತನಿಖೆ ನಡೆಸಲು ಪೊಲೀಸ್ ಇಲಾಖೆ ನಿರ್ದೇಶಿಸಿದೆ. ಸಂತ್ರಸ್ತ ದಲಿತ ವ್ಯಕ್ತಿಯನ್ನು ಬಾಲಕೃಷ್ಣ ಎಂದು ಗುರುತಿಸಲಾಗಿದೆ. ಬಾಲಕೃಷ್ಣ ಸೋಮವಾರ ರಾತ್ರಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಅವರ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಆದರೆ, ಜಿಲ್ಲಾ ಪೊಲೀಸರು ಈ ಪ್ರತಿಪಾದನೆಯನ್ನು ನಿರಾಕರಿಸಿದ್ದಾರೆ. ಬಾಲಕೃಷ್ಣನನ್ನು ಕಳವು ಆರೋಪದಲ್ಲಿ ನಾಲ್ಕು ದಿನಗಳ ಹಿಂದೆ ಬಂಧಿಸಲಾಗಿತ್ತು. ಇಂದು ಬೆಳಗ್ಗೆ ಅವರು ಅಸ್ವಸ್ಥರಾದರು. ಅವರನ್ನು ಕೂಡಲೇ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತುಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.

ಬಾಲಕೃಷ್ಣ ಸಾವಿನ ಹಿನ್ನೆಲೆಯಲ್ಲಿ ಆಕ್ರೋಶಿತರಾದ ಗುಂಪು ಉಪ ವಿಭಾಗೀಯ ದಂಡಾಧಿಕಾರಿಯವರ ಕಾರನ್ನು ಜಖಂಗೊಳಿಸಿತು. ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿತು ಹಾಗೂ ಗದ್ದಲ ಉಂಟು ಮಾಡಿತು. ಅಲ್ಲದೆ ಧನೌರ-ಚಾಂದ್‌ಪುರ್ ರಸ್ತೆಯ ಸಂಚಾರಕ್ಕೆ ತಡೆ ಒಡ್ಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News