ವಿಮಾನ ನಿಲ್ದಾಣಕ್ಕೆ ಬಸ್ ಸೇವೆ ಒದಗಿಸಲಿ

Update: 2018-12-27 18:34 GMT

ಮಾನ್ಯರೇ

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಸ್ ಸೇವೆ ಒದಗಿಸಲು ಕೆಎಸ್ಸಾರ್ಟಿಸಿ ಸಿದ್ಧವಿದ್ದರೂ ಸಂಬಂಧ ಪಟ್ಟವರು ಸೂಕ್ತ ಪರವಾನಿಗೆ ನೀಡಲು ಮೀನಮೇಷ ಎಣಿಸುತ್ತಿರುವುದನ್ನು ತಿಳಿದು ಖೇದವಾಯಿತು. ಇಂಥಾ ಪರಿಸ್ಥಿತಿ ನಿರ್ಮಾಣವಾಗಲು ಕಾರಣವಾದರೂ ಏನು? ಖಾಸಗಿ ಟ್ಯಾಕ್ಸಿ ಮಾಲಕ, ಚಾಲಕರ ಲಾಬಿಯೇ? ಹಾಗಾದರೆ ಇವರನ್ನು ಇಷ್ಟೊಂದು ಬೆಳೆಯಲು ಬಿಟ್ಟವರು ಯಾರು? ಈ ಹಿಂದೆ ಉತ್ತಮವಾದ ಶೇರ್ ಟ್ಯಾಕ್ಸಿ ವ್ಯವಸ್ಥೆ ಒದಗಿಸುತ್ತಿದ್ದ ಇವರು ಇತ್ತೀಚಿನ ವರ್ಷಗಳಲ್ಲಿ ದೊಡ್ಡ ಶೋಷಕರಾಗಿ ಪರಿಣಮಿಸಿ ಒಂದು ರೀತಿ ಪ್ರಯಾಣಿಕರ ಹಗಲುದರೋಡೆ ನಡೆಸುತ್ತಿರುವುದು ಸಂಬಂಧಪಟ್ಟವರ ಗಮನಕ್ಕೆ ಬಂದಿಲ್ಲವೇ? ನಿಲ್ದಾಣದಿಂದ ನಗರಕ್ಕೆ ತಲುಪಿಸಲು ಕನಿಷ್ಠ ರೂ. 600ರಿಂದ 700ರಷ್ಟು ಶುಲ್ಕ ವಿಧಿಸುವವರನ್ನು ಲೂಟಿಕೋರರೆನ್ನದೆ ಇನ್ನೇನೆಂದು ಕರೆಯಬೇಕು? ಸಂಬಂಧಪಟ್ಟವರು ಇನ್ನಾದರೂ ಶೀಘ್ರವಾಗಿ ಸ್ಪಂದಿಸಿ ಪರವಾನಿಗೆ ನೀಡುವ ಕೆಲಸ ಮಾಡಬೇಕು. ಇದೇ ರೀತಿ ಮಂಗಳೂರು ಕೇಂದ್ರ ಮತ್ತು ಕಂಕನಾಡಿ ರೈಲು ನಿಲ್ದಾಣಗಳಿಗೂ ಸಿಟಿ ಬಸ್ ಸೇವೆಯನ್ನು ಕಲ್ಪಿಸುವ ಕೆಲಸ ತುರ್ತಾಗಿ ಆಗಬೇಕಿದೆ. ಚೆನ್ನೈ, ಹೈದರಾಬಾದ್, ಮುಂಬೈ, ಬೆಂಗಳೂರು ಮುಂತಾದ ನಗರಗಳಲ್ಲಿ ಇಂತಹ ಸೇವೆ ಲಭ್ಯವಾಗಿ ಹಲವು ವರ್ಷಗಳೇ ಸಂದಿವೆ. ನೆನಪಿಡಿ, ಇಂತಹ ಮತ್ತು ಇನ್ನಿತರ ಅಗತ್ಯ ಸೇವೆಗಳು ಸಾಮಾನ್ಯ ಜನತೆಗೆ ಎಲ್ಲಿ ಲಭ್ಯವಿರುತ್ತವೋ ಅದುವೆ ‘ಸ್ಮಾರ್ಟ್ ಸಿಟಿ’ ಎಂದು ಕರೆಸಿಕೊಳ್ಳುವ ಅರ್ಹತೆ ಪಡೆದುಕೊಳ್ಳುತ್ತದೆ. ಮಂಗಳೂರನ್ನು ಸ್ಮಾರ್ಟ್ ಸಿಟಿಯಾಗಿಸಲು ಹೊರಟ ಜಿಲ್ಲಾಡಳಿತ ಮತ್ತಿತರ ಪ್ರಾಧಿಕಾರಗಳು ಕೊಂಚ ತಮ್ಮ ಗಮನವನ್ನು ಇತ್ತ ಹರಿಸಬೇಕು.

Writer - -ಸುರೇಶ್ ಭಟ್, ಬಾಕ್ರಬೈಲ್

contributor

Editor - -ಸುರೇಶ್ ಭಟ್, ಬಾಕ್ರಬೈಲ್

contributor

Similar News