ರಾಜ್ಯದ ಹಿತಾಸಕ್ತಿ ರಕ್ಷಿಸುವಲ್ಲಿ ಸೋತ ಸಿಎಂ ರಾಜೀನಾಮೆ ನೀಡಲಿ: ಕೆ.ಎಸ್.ಈಶ್ವರಪ್ಪ ಆಗ್ರಹ

Update: 2018-12-27 18:42 GMT

ಶಿವಮೊಗ್ಗ, ಡಿ. 27: ರಾಜ್ಯ ಸಮ್ಮಿಶ್ರ ಸರಕಾರ ಎಲ್ಲ ರಂಗಗಳಲ್ಲಿಯೂ ಸಂಪೂರ್ಣ ವಿಫಲವಾಗಿದೆ. ಆಡಳಿತ ಯಂತ್ರ ಕುಸಿದು ಬಿದ್ದಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ರಾಜ್ಯದ ಹಿತಾಸಕ್ತಿ ರಕ್ಷಿಸುವಲ್ಲಿ ಸೋತಿದ್ದು, ತತ್ಷಣವೇ ಸಿಎಂ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ.

ಗುರುವಾರ ನಗರದ ಹಳೇ ಕಾರಾಗೃಹ ಮೈದಾನದಲ್ಲಿ ಸುತ್ತೂರು ಶಿವರಾತ್ರೀಶ್ವರ ಸ್ವಾಮೀಜಿಗಳ 1059 ನೇ ಜಯಂತ್ಯೋತ್ಸವ ಕಾರ್ಯಕ್ರಮದ ಪೂರ್ವಸಿದ್ದತೆಯನ್ನು ಪರಿಶೀಲಿಸಿದ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಅಭಿವೃದ್ದಿ ಕೆಲಸಗಳು ಅಸ್ತವ್ಯಸ್ತವಾಗಿದ್ದು, ಸಂಪೂರ್ಣ ಸ್ಥಗಿತಗೊಂಡಿದೆ. ಆಡಳಿತ ವ್ಯವಸ್ಥೆ ಸಂಪೂರ್ಣ ಸ್ಥಬ್ತವಾಗಿದೆ. ಇಂತಹ ಜನವಿರೋಧಿ ಸರಕಾರವನ್ನು ರಾಜ್ಯದ ಜನತೆ ಹಿಂದೆಂದೂ ನೋಡಿಲ್ಲ. ಜನರ ಹಿತ ಕಾಯಲು ಆಗದ ಹೆಚ್.ಡಿ.ಕುಮಾರಸ್ವಾಮಿಯವರು, ಸಿಎಂ ಗದ್ದುಗೆಯಿಂದ ಕೆಳಗಿಳಿಯಬೇಕು ಎಂದು ಒತ್ತಾಯಿಸಿದ್ದಾರೆ.

ಸಚಿವ ಸಂಪುಟ ಪುನಾರಚನೆ ನಂತರ ಸರಕಾರದಲ್ಲಿನ ಗೊಂದಲಗಳು ಮತ್ತಷ್ಟು ಹೆಚ್ಚಾಗಿವೆ. ಭಿನ್ನಮತದ ಕಾರಣದಿಂದಲೇ, ನಿಗಮ-ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಪ್ರಕ್ರಿಯೆಗೆ ಹಿನ್ನಡೆಯಾಗಿದೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವವರಿಗೆ ಇಲ್ಲಿಯವರೆಗೂ ಖಾತೆಗಳ ಹಂಚಿಕೆ ಮಾಡಲಾಗಿಲ್ಲ. ಈ ಸರಕಾರದಲ್ಲಿ ಸಮನ್ವಯತೆ ಎಂಬುವುದೇ ಇಲ್ಲವಾಗಿದೆ. ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನ ಮನೆ ಮಾಡಿದೆ. ಈ ಸರಕಾರ ಹೆಚ್ಚು ದಿನ ಇರುವುದಿಲ್ಲ ಎಂದರು.

ರಾಜ್ಯದ 156 ತಾಲೂಕುಗಳಲ್ಲಿ ಬರ ಪರಿಸ್ಥಿತಿಯಿದೆ. ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಈಗಾಗಲೇ ರಾಜ್ಯದ ಬರ ಪೀಡಿತ ಪ್ರದೇಶಗಳಿಗೆ ಪಕ್ಷದ ಮುಖಂಡರು ಭೇಟಿಯಿತ್ತು, ಅಲ್ಲಿನ ಸ್ಥಿತಿಗತಿಗಳ ಅವಲೋಕನ ನಡೆಸಿದ್ದಾರೆ. ಆದರೆ ಸರಕಾರದ ಮಂತ್ರಿಗಳು ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ, ಸಮಸ್ಯೆ ಪರಿಹಾರಕ್ಕೆ ಯತ್ನಿಸುವ ಪ್ರಯತ್ನಗಳನ್ನೇ ನಡೆಸಿಲ್ಲ. ಇದು ಸರಕಾರದ ಆಡಳಿತ ವೈಖರಿಗೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News