ಜನರ ಧ್ವನಿಯಾಗಿರುವ ಪತ್ರಿಕೋದ್ಯಮ ಭ್ರಷ್ಟವಾಗಿದೆ: ಲೋಕಾಯುಕ್ತ ನಿವೃತ್ತ ನ್ಯಾ.ಸಂತೋಷ್ ಹೆಗ್ಡೆ

Update: 2018-12-29 18:57 GMT

ಶಿವಮೊಗ್ಗ, ಡಿ. 29: ಜನರ ಧ್ವನಿಯಾಗಿರುವ ಪತ್ರಿಕೋದ್ಯಮವು ಭ್ರಷ್ಟಮಯವಾಗಿದೆ. ಕಾಸಿಗಾರಿ ಸುದ್ದಿ ಮಾಡುವ ಕೀಳುಮಟ್ಟಕ್ಕೆ ತಲುಪಿದೆ ಎಂದು ಲೋಕಾಯುಕ್ತ ಸಂಸ್ಥೆಯ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದ್ದಾರೆ. 

ಶುಕ್ರವಾರ ನಗರದ ನ್ಯಾಷನಲ್ ಪಬ್ಲಿಕ್ ಸ್ಕೂಲ್‍ನಲ್ಲಿ ಆಯೋಜಿಸಲಾಗಿದ್ದ ಶಾಲೆಯ ದಶಮಾನೋತ್ಸವ ಸಮಾರಂಭ ಉದ್ಘಾಟಿಸಿದ ನಂತರ ಅವರು ಸಭಿಕರನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಸಾಂವಿಧಾನಿಕ ಅಂಗಗಳೇ ಭ್ರಷ್ಟಾಚಾರದಲ್ಲಿ ಮುಳುಗಿವೆ ಎಂದು ದೂರಿದರು. 

ಪ್ರಸ್ತುತ ಸಮಾಜದಲ್ಲಿ ಪ್ರಾಮಾಣಿಕರಿಗೆ ಬೆಲೆಯಿಲ್ಲವಾಗಿದೆ. ಭ್ರಷ್ಟರನ್ನೇ ಜನರು ಆಯ್ಕೆ ಮಾಡುತ್ತಿದ್ದಾರೆ. ಭ್ರಷ್ಟಾಚಾರದ ನಾನಾ ಆರೋಪ ಹೊತ್ತು ಜೈಲಿಗೆ ಹೋಗಿಬಂದವರನ್ನು ಹಾರ ಹಾಕಿ ಜೈಕಾರ ಹಾಕಲಾಗುತ್ತಿದೆ. ಜಗತ್ತಿಗೆ ಮೌಲ್ಯಗಳನ್ನು ಹೇಳಿಕೊಟ್ಟ ದೇಶದಲ್ಲಿಯೇ, ಮೌಲ್ಯಗಳಿಗೆ ಬೆಲೆಯಿಲ್ಲದಂತಾಗಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು. 

ದೇಶದಲ್ಲಿ ಇಲ್ಲಿಯವರೆಗೂ ಕೋಟ್ಯಾಂತರ ಹಗರಣಗಳು ನಡೆದಿವೆ. ಆ ಹಣ ಬಡವರಿಗೆ ತಲುಪಿದ್ದರೆ ದೇಶ ಇನ್ನಷ್ಟು ಸುಭಿಕ್ಷವಾಗುತ್ತಿತ್ತು. ದುರಾಸೆಯ ಪರಿಣಾಮ ಸಮಾಜದಲ್ಲಿ ನೈತಿಕತೆ ಕುಸಿದಿದೆ. ಇದೇ ಪರಿಸ್ಥಿತಿ ದೇಶದಲ್ಲಿ ಮುಂದುವರಿದರೆ, ಮುಂದೊಂದು ದಿನ ದೇಶದಲ್ಲಿ ದೊಡ್ಡ ಕ್ರಾಂತಿ ಆಗುತ್ತದೆ. ಶ್ರೀಮಂತರು, ರಾಜಕಾರಣಿಗಳು ಬೇರೆ ದೇಶಕ್ಕೆ ಪಲಾಯನ ಮಾಡುತ್ತಿದ್ದಾರೆ. ಈ ಕ್ರಾಂತಿಯ ಸುಳಿಯಲ್ಲಿ ಸಿಲುಕುವವರು ಮತ್ತೆ ಅದೇ ಬಡ ಮತ್ತು ಮಧ್ಯಮ ವರ್ಗದವರಾಗಿದ್ದಾರೆ ಎಂದರು.

ಸಮಾಜ ಬದಲಾಗಬೇಕಾಗಿದೆ. ತೃಪ್ತಿ ಮತ್ತು ಮಾನವೀಯ ಗುಣ ಬೆಳೆಸಿಕೊಂಡಾಗ ಮಾತ್ರ ಸಮಾಜ ಸುಧಾರಣೆ ಸಾಧ್ಯ. ತಾವು ಲೋಕಾಯುಕ್ತ ಸ್ಥಾನ ಅಲಂಕರಿಸಿದ ನಂತರ ಸಮಾಜ ನೋಡುವ ದೃಷ್ಟಿಕೋನ ಬದಲಾಯಿತು. ಒಳಗಣ್ಣು ತೆರೆಯಿತು. ಹಲವು ದಶಕಗಳ ಕಾಲ ನ್ಯಾಯಾಂಗ ವ್ಯವಸ್ಥೆಯಲ್ಲಿದ್ದರೂ ಕೂಪಮಂಡಕನಾಗಿದ್ದೆ. ಲೋಕಾಯುಕ್ತಕ್ಕೆ ಬಂದ ನಂತರ ಸಮಾಜದ ಮತ್ತೊಂದು ಮುಖದ ಪರಿಚಯವಾಯಿತು ಎಂದು ಇದೇ ಸಂದರ್ಭದಲ್ಲಿ ಹೇಳಿದರು. 

ಸಮಾರಂಭದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಧ್ಯಕ್ಷ ವಿಶ್ವನಾಥ್, ಕಾರ್ಯದರ್ಶಿ ನಾಗರಾಜ್, ಅಮರೇಂದ್ರ ಕಿರೀಟಿ, ನಾರಾಯಣರಾವ್, ವಿಜಯ್ ಕುಮಾರ್ ನಾಗರಾಜ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News