ಇಂಡೋನೇಶ್ಯ: ಭೂಕುಸಿತದಲ್ಲಿ 9 ಸಾವು; 34 ಮಂದಿ ನಾಪತ್ತೆ

Update: 2019-01-01 15:00 GMT

ಜಕಾರ್ತ (ಇಂಡೋನೇಶ್ಯ), ಜ. 1: ಇಂಡೋನೇಶ್ಯದ ಪಶ್ಚಿಮ ಜಾವಾದ ಸುಕಬೂಮಿ ಜಿಲ್ಲೆಯ ಗ್ರಾಮವೊಂದರಲ್ಲಿ ಸೋಮವಾರ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ ಹಾಗೂ 34 ಮಂದಿ ನಾಪತ್ತೆಯಾಗಿದ್ದಾರೆ.

ಸಿರ್ನರೆಸ್ಮಿ ಗ್ರಾಮದಲ್ಲಿ ಸಂಭವಿಸಿದ ದುರಂತದಲ್ಲಿ ಸುಮಾರು 30 ಮನೆಗಳು ಮಣ್ಣಿನ ರಾಶಿಯಡಿಯಲ್ಲಿ ಹೂತುಹೋಗಿವೆ.

ಈ ಪ್ರದೇಶದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸುತ್ತಲಿನ ಪರ್ವತಗಳಿಂದ ಭಾರೀ ಪ್ರಮಾಣದಲ್ಲಿ ಕುಸಿದ ಮಣ್ಣು ಗ್ರಾಮವನ್ನು ಹೂತು ಹಾಕಿದೆ.

ಜೀವ ಉಳಿಸಿಕೊಂಡಿರುವ ಸುಮಾರು 60 ಮಂದಿ ತಾತ್ಕಾಲಿಕ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣೆ ಸಂಸ್ಥೆಯ ವಕ್ತಾರ ಸುಟೊಪೊ ಪೂರ್ವೊ ನುಗ್ರೊಹೊ ತಿಳಿಸಿದರು.

ಸೈನಿಕರು, ಪೊಲೀಸರು ಮತ್ತು ನಿವಾಸಿಗಳು ಮಣ್ಣಿನಡಿಯಲ್ಲಿ ಹೂತುಹೋದ ಗ್ರಾಮದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ.

500ಕ್ಕೂ ಅಧಿಕ ರಕ್ಷಣಾ ಸಿಬ್ಬಂದಿ ಮಣ್ಣಿನ ದಿಬ್ಬಗಳ ಅಡಿಯಿಂದ 9 ಮೃತದೇಹಗಳನ್ನು ಹೊರತೆಗೆದಿದ್ದಾರೆ ಹಾಗೂ ನಾಲ್ವರು ಗಾಯಾಳುಗಳನ್ನು ಹೊರಗೆಳೆದಿದ್ದಾರೆ.

ನಾಪತ್ತೆಯಾಗಿರುವ 34 ಗ್ರಾಮಸ್ಥರಿಗಾಗಿ ಶೋಧ ಕಾರ್ಯ ಸಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News