ಪೂರ್ಣಕುಂಭ ಮೆರವಣಿಗೆಯಲ್ಲಿ ವಿಧವೆಯರು, ತೃತೀಯಲಿಂಗಿಗಳು, ಆಸಕ್ತ ಪುರುಷರು ಭಾಗವಹಿಸಬಹುದು: ಮನು ಬಳಿಗಾರ್

Update: 2019-01-01 15:03 GMT

ಹುಬ್ಬಳ್ಳಿ ಜ.1: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲನೆಯ ದಿನ ನಡೆಯುವ ಪೂರ್ಣಕುಂಭ ಮೆರವಣಿಗೆಯಲ್ಲಿ 92ವಿಧವೆಯರು ಪಾಲ್ಗೊಳ್ಳಲಿದ್ದಾರೆ. ಹಾಗೂ ಇದರಲ್ಲಿ ಆಸಕ್ತ ಪುರುಷರು ಹಾಗೂ ತೃತೀಯ ಲಿಂಗಿಗಳೂ ಭಾಗವಹಿಸಬಹುದು ಎಂದು ಕಸಾಪ ಅಧ್ಯಕ್ಷ ಮನು ಬಳಿಗಾರ್ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೂರ್ಣಕುಂಭ ಮೇಳದಲ್ಲಿ ಭಾಗವಹಿಸುವಂತೆ ಯಾರಿಗೂ ಒತ್ತಾಯವಿಲ್ಲ. 1001ಮಂದಿ ಇರಲೇಬೇಕೆಂಬ ನಿಯಮವೇನು ಇಲ್ಲ. ಯಾರಿಗೆಲ್ಲ ಆಸಕ್ತಿ ಇದೆಯೋ ಅವರೆಲ್ಲರೂ ಭಾಗವಹಿಸಬಹುದು ಎಂದು ತಿಳಿಸಿದರು.

ಕುಂಭ ಮೇಳ ಮೆರವಣಿಗೆಗೆ ಸುಮಂಗಲೆ, ಅಮಂಗಲೆ ಹಾಗೂ ಧರ್ಮ ಪ್ರಶ್ನೆ ಬರುವುದಿಲ್ಲ. ಯಾರು ಬೇಕಾದರು ಭಾಗವಹಿಸಬಹುದಾಗಿದೆ. ಹೀಗಾಗಿ ಕುಂಭಮೇಳ ಮೆರವಣಿಗೆ ಕುರಿತು ಅಪಚಾರ ಮಾಡುವ ಅಗತ್ಯವಿಲ್ಲವೆಂದು ಅವರು ಹೇಳಿದರು.

ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವ ಸಿದ್ಧತೆಗಳು ಶೇ.80ರಷ್ಟು ಮುಗಿದಿದೆ. ಪ್ರತಿ ದಿನ 1ರಿಂದ 1.25ಲಕ್ಷ ಮಂದಿ ಸಾಹಿತ್ಯಾಸಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಸಮ್ಮೇಳನಕ್ಕೆ ಅಂದಾಜು 10.60ಕೋಟಿ ರೂ.ಖರ್ಚಾಗಲಿದ್ದು, ಸರಕಾರ 8ಕೋಟಿ ರೂ.ಬಿಡುಗಡೆಮಾಡಿದೆ. ಉಳಿದ ಹಣವನ್ನು ಬಿಡುಗಡೆ ಮಾಡಲಾಗುವುದೆಂದು ಸರಕಾರ ಭರವಸೆ ನೀಡಿದೆ ಎಂದು ಅವರು ಹೇಳಿದರು.

ಈ ಹಿಂದಿನ ಸಾಹಿತ್ಯ ಸಮ್ಮೇಳನದಲ್ಲಿ ಗರಿಷ್ಟ 20ಗೋಷ್ಟಿಗಳು ಮಾತ್ರ ನಡೆದಿದ್ದವು. ಆದರೆ, ಈ ಬಾರಿ ನಾವು 24ಗೋಷ್ಟಿಗಳನ್ನು ಆಯೋಜಿಸಲಾಗಿದೆ. ಉತ್ತರ ಕರ್ನಾಟಕ ಅಭಿವೃದ್ದಿಗಾಗಿ ವಿಶೇಷ ಗೋಷ್ಟಿಗಳನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News