ಚುನಾವಣೆ ಮೇಲೆ ಕಣ್ಣು: ರೈತರಿಗೆ ಹಣ ನೀಡಲು ಮೋದಿ ಸರಕಾರದ ಚಿಂತನೆ

Update: 2019-01-02 08:21 GMT

ಹೊಸದಿಲ್ಲಿ, ಜ.2: ಈ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜನಬೆಂಬಲ ಪಡೆಯುವ ನಿಟ್ಟಿನಲ್ಲಿ ಹಾಗೂ ಪ್ರತಿಭಟನೆಯ ಹಾದಿ ಹಿಡಿದಿರುವ ರೈತರನ್ನು ಓಲೈಸಲು ಮತ್ತು ಕೃಷಿ ಕ್ಷೇತ್ರದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರೈತರಿಗೆ ಧನಸಹಾಯ ನೀಡುವುದು ಸೇರಿದಂತೆ ಮೂರು ಕ್ರಮಗಳನ್ನು ಸರಕಾರ ಪರಿಶೀಲಿಸುತ್ತಿದೆಯೆಂದು ಮೂಲಗಳು ತಿಳಿಸಿವೆ.

ರೈತರಿಗೆ ಮಾಸಿಕ ಆದಾಯ ಬೆಂಬಲ ಕಾರ್ಯಕ್ರಮ, ಕೃಷಿ ಉತ್ಪನ್ನಗಳ ನಿಜವಾದ ಮಾರಾಟ ದರ ಹಾಗೂ ಸರಕಾರ ನಿಗದಿ ಪಡಿಸಿದ ಖರೀದಿ ದರದ ನಡುವಿನ ವ್ಯತ್ಯಾಸವನ್ನು ಸರಿದೂಗಿಸಲು ಹಣಪಾವತಿ ಹಾಗೂ ಬೆಳೆ ವಿಮೆ ಯೋಜನೆಯ ಅಮೂಲಾಗ್ರ ಬದಲಾವಣೆ ಇವೇ ಕ್ರಮಗಳ ಬಗ್ಗೆ ಸರಕಾರ ಚಿಂತಿಸುತ್ತಿದೆಯೆನ್ನಲಾಗಿದೆ. ಈ ಮೇಲೆ ತಿಳಿಸಲಾದ ಕ್ರಮಗಳಲ್ಲಿ ಯಾವುದಾದರೂ ಒಂದು ಅಥವಾ ಎಲ್ಲಾ ಮೂರು ಆಯ್ಕೆಗಳನ್ನೂ ಒಂದಾಗಿಸಿ ಸಮಗ್ರ ಪರಿಹಾರ ಕಾರ್ಯಕ್ರಮವನ್ನು ಸರಕಾರ ಜಾರಿಗೆ ತರಬಹುದೆಂದು ಹೇಳಲಾಗಿದೆ.

ಕಳೆದ ತಿಂಗಳು ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಕಂಡ ಸೋಲಿನ ನಂತರ ಸರಕಾರ ಈ ಬಗ್ಗೆ ಯೋಚಿಸಲು ಆರಂಭಿಸಿತ್ತೆನ್ನಲಾಗಿದೆ.

ಕಳೆದ ವರ್ಷದ ಜುಲೈ ತಿಂಗಳಲ್ಲಿ ಸರಕಾರ ಹತ್ತಿ, ಸೋಯಾಬೀನ್ಸ್ ಹಾಗೂ ಭತ್ತದ ಬೆಲೆಗಳಿಗೆ ಬೆಂಬಲ ಬೆಲೆಯನ್ನು ಏರಿಸಿ ಈ ಮೂಲಕ  ರೈತರಿಗೆ ತಾವು ಮಾಡಿದ ಖರ್ಚಿನ ಕನಿಷ್ಠ ಶೇ.50ಕ್ಕಿಂತ ಹೆಚ್ಚು ಹಣ ದೊರೆಯುವಂತೆ ಮಾಡುವ ಉದ್ದೇಶ ಹೊಂದಿತ್ತಾದರೂ ಹೆಚ್ಚಿನ ಉತ್ಪನ್ನಗಳನ್ನು ಸರಕಾರ ಖರೀದಿಸದೇ ಇರುವುದರಿಂದ  ಈ ಯೋಜನೆ ನಿರೀಕ್ಷಿತ ಯಶಸ್ಸು ಕಂಡಿಲ್ಲ.

ಬೆಳೆ ವಿಮಾ ಯೋಜನೆಯಲ್ಲಿ ರೈತರು ಪಾವತಿಸಬೇಕಾದ ಪ್ರೀಮಿಯಂ ಇಳಿಕೆ, ಹೆಚ್ಚು ಬೆಳೆಗಳನ್ನು ಹಾಗೂ ಗೇಣಿದಾರರನ್ನೂ ವಿಮೆ ವ್ಯಾಪ್ತಿಗೆ ತರುವ ಬಗ್ಗೆ ಸರಕಾರ ಯೋಚಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News