ಜ.11 ರಿಂದ ಮೂರು ದಿನ ಕೊಡಗು ಪ್ರವಾಸಿ ಉತ್ಸವ: ಪ್ರವಾಸಿಗರ ಸ್ವಾಗತಕ್ಕೆ ಅಗತ್ಯ ಸಿದ್ಧತೆಗೆ ಸೂಚನೆ

Update: 2019-01-02 19:11 GMT

ಮಡಿಕೇರಿ, ಜ.2 : ಮೂರು ದಿನಗಳ ಕಾಲ ನಡೆಯುವ ಪ್ರವಾಸಿ ಉತ್ಸವಕ್ಕೆ ಸಂಚಾರ, ವಾಹನ ನಿಲುಗಡೆ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಜಿ.ಪಂ. ಸಿಇಓ ಕೆ.ಲಕ್ಷ್ಮಿಪ್ರಿಯ ಅವರು ಸಲಹೆ ನೀಡಿದ್ದಾರೆ.

ಜ.11 ರಿಂದ 13 ರವರೆಗೆ ನಡೆಯುವ ಕೊಡಗು ಪ್ರವಾಸಿ ಉತ್ಸವಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕೊಡಗು ಪ್ರವಾಸಿ ಉತ್ಸವ-2019 ಆಯೋಜಿಸುವ ಸಂಬಂಧ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಮಾತನಾಡಿದರು. 

ಕಾರ್ಯಕ್ರಮದ ಕುರಿತು ವ್ಯಾಪಕ ಪ್ರಚಾರ ನೀಡಿ ಪ್ರವಾಸಿಗರನ್ನು ಆಕರ್ಷಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು. ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಜನಾರ್ಧನ ಎಚ್.ಪಿ. ಅವರು ಮಾತನಾಡಿ ಮಡಿಕೇರಿಯಲ್ಲಿ ನಡೆಯುವ ಕೊಡಗು ಪ್ರವಾಸಿ ಉತ್ಸವದಲ್ಲಿ ಪ್ರತೀ ದಿನ ಸಂಜೆ 6 ಗಂಟೆಯಿಂದ 10 ಗಂಟೆಯ ತನಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಹಲವು ಬಗೆಯ ಆಹಾರ, ತಿಂಡಿ ತಿನಿಸು ಮಳಿಗೆಗಳು, ವಿವಿಧ ಕರಕುಶಲ ಹಾಗೂ ಇತರೆ ವಸ್ತುಗಳ ಮಾರಾಟ ಮಳಿಗೆ ಪ್ರವಾಸಿಗರನ್ನು ಆಕರ್ಷಿಸಲಿದೆ. ಹಾಗೆಯೇ ಜನವರಿ, 12 ರಂದು ಪಶುಸಂಗೋಪನೆ ಇಲಾಖೆ ವತಿಯಿಂದ ಶ್ವಾನ ಪ್ರದರ್ಶನ ನಡೆಯಲಿದ್ದು, ಜನವರಿ, 11, 12 ಮತ್ತು 13 ರಂದು ತೋಟಗಾರಿಕೆ ಇಲಾಖೆ ವತಿಯಿಂದ ರಾಜಾಸೀಟಿನಲ್ಲಿ ಫಲ ಪುಷ್ಪಪ್ರದರ್ಶನ ನಡೆಯಲಿದೆ ಎಂದು ಸಭೆಗೆ ಮಾಹಿತಿ ನೀಡಿದರು. 

ಜ.13 ರಂದು ಬೆಳಗ್ಗೆ 8 ಗಂಟೆಯಿಂದ ಓಪನ್ ಸ್ಟ್ರೀಟ್ ಪೆಸ್ಟಿವಲ್ ನಡೆಯಲಿದ್ದು, ಬೆಳಗ್ಗೆ 8 ಗಂಟೆಗೆ ಯೋಗ ಹಾಗೂ ಏರೋಬಿಕ್ಸ್ ಮೂಲಕ ಚಾಲನೆ ನೀಡಲಾಗುವುದು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದರು. 

ಜಿಲ್ಲಾ ಹೋಟೆಲ್ ಮತ್ತು ರೆಸಾರ್ಟ್ ಅಸೋಷಿಯೇಷನ್ ಹಾಗೂ ಜಿಲ್ಲಾ ಹೋಂ ಸ್ಟೇ ಅಸೋಷಿಯೇಷನ್ ಪ್ರತಿನಿಧಿಗಳಿಗೆ ತಮ್ಮ ಖಾಸಗಿ ಪ್ರಚಾರ ಫಲಕಗಳಲ್ಲಿ ಕೊಡಗು ಪ್ರವಾಸಿ ಉತ್ಸವದ ಬಗ್ಗೆ ಸ್ವ ಇಚ್ಛೆಯಿಂದ ಹೆಚ್ಚಿನ ಪ್ರಚಾರ ಮಾಡುವಂತೆ ಅವರು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಶ್ರೀನಿವಾಸ್ ಅವರು ಮಾತನಾಡಿ ಮೂರು ದಿನಗಳ ಕಾಲ ನಡೆಯುವ ಕೊಡಗು ಪ್ರವಾಸಿ ಉತ್ಸವದಲ್ಲಿ ವಿವಿಧ ಇಲಾಖೆಗಳ ವತಿಯಿಂದ ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ತೆರೆಯಲು ಸೂಚನೆ ನೀಡಿದರು. 

ಸ್ವಚ್ಛತೆ, ಇ-ಶೌಚಾಲಯದ ವ್ಯವಸ್ಥೆಯನ್ನು ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡುವಂತೆ ನಗರಸಭಾ ಆಯುಕ್ತರಾದ ರಮೇಶ್ ಅವರಿಗೆ ಸೂಚನೆ ನೀಡಿದರು.

ಜಿಲ್ಲಾ ಹೋಟೆಲ್ ಮತ್ತು ರೆಸಾರ್ಟ್ ಅಸೋಷಿಯೇಷನ್ ಪ್ರತಿನಿಧಿಗಳು ಮಾತನಾಡಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿರುವ ಸ್ಥಳದಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಕೆ.ಎಸ್.ಆರ್.ಟಿ.ಸಿ ವತಿಯಿಂದ ಮಿನಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು. ಹಾಗೂ ರಾಜಾಸೀಟು ಉದ್ಯಾನದಲ್ಲಿ ಧ್ವನಿವರ್ಧಕದ ವ್ಯವಸ್ಥೆಯನ್ನು ಮಾಡಿ ಪ್ರವಾಸಿಗರಿಗೆ ಹೆಚ್ಚಿನ ಮನರಂಜನೆ ನೀಡಲು ಕ್ರಮಕೈಗೊಳ್ಳುವಂತೆ ಸಭೆಗೆ ತಿಳಿಸಿದರು.  

ವಿವಿಧ ಇಲಾಖೆಯ ಅಧಿಕಾರಿಗಳು ಕೊಡಗು ಪ್ರವಾಸಿ ಉತ್ಸವ ಸಂಬಂಧ ಹಲವು ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಡಿವೈಎಸ್‍ಪಿ ಸುಂದರರಾಜ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಕೆಂಚಪ್ಪ, ಜಿಲ್ಲೆಯ ವಿವಿಧ ಪ್ರವಾಸಿ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News