ಶಬರಿಮಲೆಗೆ ಮಹಿಳೆಯರ ಪ್ರವೇಶ: ರಹಸ್ಯ ಮಿಷನ್ ಹೀಗಿತ್ತು...

Update: 2019-01-03 03:51 GMT

ತಿರುವನಂತಪುರ, ಜ.3: ಬಿಂದೂ ಹಾಗೂ ಕನಕದುರ್ಗಾ ಎಂಬ ಇಬ್ಬರು ಮಹಿಳೆಯರು ಶಬರಿಮಲೆ ಅಯ್ಯಪ್ಪ ದೇವಳ ಪ್ರವೇಶಿಸಿದ್ದು ಈಗ ಇತಿಹಾಸ. ಆದರೆ ವ್ಯಾಪಕ ಪ್ರತಿಭಟನೆಯ ನಡುವೆ ಈ ಇಬ್ಬರು ಹೇಗೆ ದೇವಳದ ಬಳಿಗೆ ತೆರಳಲು ಸಾಧ್ಯವಾಯಿತು ಎನ್ನುವ ಕುತೂಹಲ ಎಲ್ಲರಲ್ಲಿದೆ. ಆದರೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಭರವಸೆಯನ್ನು ಪೊಲೀಸರು ರಹಸ್ಯ ಕಾರ್ಯಾಚರಣೆ ಮೂಲಕ ಸಾಧಿಸಿದ್ದಾರೆ.

ಪೊಲೀಸರಿಗೆ ಹಲವು ಇತಿಮಿತಿ ಇದ್ದ ಕಾರಣ ಪೊಲೀಸರು ಸನ್ನಿದಾನದವರೆಗೆ ಮಹಿಳೆಯರನ್ನು ಕರೆದೊಯ್ಯಲಿಲ್ಲ. ಆದರೆ ಪ್ರತಿಭಟನೆಯನ್ನು ಲೆಕ್ಕಿಸದೇ ಯಾವುದೇ ಮಹಿಳೆಯರು ಶಬರಿಮಲೆಗೆ ಭೇಟಿ ನೀಡಲು ಇಚ್ಛಿಸಿದಲ್ಲಿ ಪೊಲೀಸರು ಅವರ ಬೆಂಬಲಕ್ಕೆ ನಿಲ್ಲಲಿದ್ದಾರೆ ಎಂದು ಸಿಎಂ ಸೋಮವಾರ ಹೇಳಿದ್ದರು.

"ಡಿಸೆಂಬರ್ 24ರ ವಿಫಲ ಯತ್ನದ ಬಳಿಕ ಈ ಮಹಿಳೆಯರನ್ನು ಪಟ್ಟಣಂತಿಟ್ಟ ಜಿಲ್ಲೆಯಿಂದ ಹೊರಗೆ ಇಡಲಾಗಿತ್ತು. ಆದರೆ ಪೊಲೀಸರು ನಿಗಾ ಇರಿಸಿದ್ದರು. ಈ ಮಹಿಳೆಯರು ಮತ್ತೆ ಶಬರಿಮಲೆಗೆ ಹೋಗಲೇಬೇಕು ಎಂದು ಪಟ್ಟು ಹಿಡಿದು ನೀವೇಕೆ ಸುಪ್ರೀಂಕೋರ್ಟ್ ಆದೇಶ ಗೌರವಿಸುತ್ತಿಲ್ಲ ಎಂದು ಪೊಲೀಸರನ್ನೇ ತರಾಟೆಗೆ ತೆಗೆದುಕೊಂಡರು" ಎಂದು ಹಿರಿಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಕಳೆದ ಎಂಟು ದಿನಗಳಿಂದ ಅವರು ರಹಸ್ಯ ಸ್ಥಳದಲ್ಲಿದ್ದರು. ಕುಟುಂಬದೊಂದಿಗೂ ಸಂಪರ್ಕದಲ್ಲಿರಲಿಲ್ಲ. ಇವರು ಕಾಣೆಯಾಗಿದ್ದಾರೆ ಎಂದು ಕನಕದುರ್ಗಾ ಕುಟುಂಬದವರು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಆದರೆ ತಾನು ಸುರಕ್ಷಿತವಾಗಿರುವುದಾಗಿ ಅವರು ವೀಡಿಯೊ ಮೂಲಕ ಸ್ಪಷ್ಟಪಡಿಸಿದ್ದರು.

ಆದರೆ ಸೋಮವಾರದ ಮಹಿಳಾ ಗೋಡೆಗೂ, ಅವರು ಯಾತ್ರೆ ಕೈಗೊಳ್ಳಲು ನಿರ್ಧರಿಸಿದ ದಿನಕ್ಕೂ ಯಾವುದೇ ಸಂಬಂಧ ಇಲ್ಲ. ದೇವಾಲಯದ ಬಗ್ಗೆ ಹೆಚ್ಚಿನ ಗಮನ ಇಲ್ಲದ ದಿನವನ್ನು ಈ ರಹಸ್ಯ ಕಾರ್ಯಾಚರಣೆಯಾಗಿ ಆಯ್ಕೆ ಮಾಡಿಕೊಂಡರು. ರಾತ್ರಿ 11ರ ಬಳಿಕ ಹಾಗೂ ಮುಂಜಾನೆ 3:30ರ ಮುನ್ನ ಅವರನ್ನು ದೇವಾಲಯಕ್ಕೆ ಕರೆದೊಯ್ಯುವಾಗಿ ಭರವಸೆ ನೀಡಿದ್ದೆವು ಎಂದು ಪೊಲೀಸ್ ಅಧಿಕಾರಿ ಬಹಿರಂಗಪಡಿಸಿದ್ದಾರೆ.

ಮುಖ್ಯಮಂತ್ರಿಗೆ ಮಾಹಿತಿ ನೀಡಿ ಪೊಲೀಸರು ವ್ಯಾಪಕ ಸಿದ್ಧತೆ ಮಾಡಿಕೊಂಡಿದ್ದರು. ಮೇಲಧಿಕಾರಿಗಳು ಹಾಗೂ ಸಿಎಂ ಒಪ್ಪಿಗೆ ನೀಡಿದ ಬಳಿಕ ಕಾರ್ಯರೂಪಕ್ಕೆ ಇಳಿಸಿದರು. ತಿರುವಾಂಕೂರು ದೇವಸ್ವಂ ಬೋರ್ಡ್ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳಿಗೆ ಕೂಡಾ ಈ ಬಗ್ಗೆ ಸುಳಿವು ಬಿಟ್ಟಿಕೊಟ್ಟಿರಲಿಲ್ಲ.

ಈ ಯೋಜನೆ ಬಗ್ಗೆ ಯಾರೂ ಮಾಹಿತಿ ಸೋರಿಕೆ ಮಾಡದಂತೆ ಎಲ್ಲ ಅಧೀನ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು ಹಾಗೂ ಕಾರ್ಯಯೋಜನೆಯಂತೆ ವಾಹನದಲ್ಲಿ ಮಹಿಳೆಯರನ್ನು ಕರೆದೊಯ್ಯಲಾಯಿತು. ಪಂಬಾದಿಂದ ಮರಕ್ಕೂಟಂ ವರೆಗೆ ಟ್ರ್ಯಾಕ್ಟರ್ ಅಥವಾ ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ದರು. ಬಳಿಕ ಮಹಿಳೆಯರು ಕಾಲ್ನಡಿಗೆಯಲ್ಲಿ ತೆರಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News