'ಆಯುಷ್ಮಾನ್ ಭಾರತ್' ಆರೋಗ್ಯ ಕರ್ನಾಟಕ ಯೋಜನೆಯಾಗಿ ಜಾರಿ: ಸಂಸದ ಬಿ.ವೈ.ರಾಘವೇಂದ್ರ

Update: 2019-01-03 18:43 GMT

ಶಿವಮೊಗ್ಗ, ಜ. 3: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಹತ್ವಾಕಾಂಕ್ಷೆಯ 'ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ'ಯು ಪ್ರಸ್ತುತ ಕರ್ನಾಟಕದಲ್ಲಿ ಜಾರಿಯಲ್ಲಿದ್ದ 'ಆರೋಗ್ಯ ಕರ್ನಾಟಕ ಯೋಜನೆ' ಜೊತೆ ವಿಲೀನವಾಗಿದೆ. 'ಆಯುಷ್ಮಾನ್ ಭಾರತ್' ಆರೋಗ್ಯ ಕರ್ನಾಟಕ ಯೋಜನೆಯಾಗಿ ಅನುಷ್ಠಾನಗೊಂಡಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ. 

ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಈ ಹಿಂದೆ ಜಾರಿಯಲ್ಲಿದ್ದ ಎಲ್ಲಾ ರೀತಿಯ ಆರೋಗ್ಯ ಯೋಜನೆಗಳು ಈ ಯೋಜನೆಯಡಿ ಸೇರ್ಪಡೆಯಾಗಿವೆ. ಇದರಡಿ 1650 ಪ್ಯಾಕೇಜ್‍ಗಳ ಆರೋಗ್ಯ ಸೇವೆಗಳು ಲಭ್ಯವಾಗಲಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ವರ್ಷಕ್ಕೆ 5 ಲಕ್ಷ ರೂ. ವೆಚ್ಚದವರೆಗೆ ಆರೋಗ್ಯ ಸೇವೆ ಲಭ್ಯವಾಗಲಿದೆ. ಹಾಗೆಯೇ ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಪ್ಯಾಕೇಜ್ ಮೊಬಲಗಿನ ಶೇ 30% ಅಥವಾ ಗರಿಷ್ಟ 1.50 ಲಕ್ಷ ರೂ. ವೆಚ್ಚ ಲಭ್ಯವಾಗಲಿದೆ. ಒಟ್ಟಾರೆ ಈ ಯೋಜನೆಯಡಿ ಕೇಂದ್ರ ಸರ್ಕಾರ ಶೇ.60 ಹಾಗೂ ರಾಜ್ಯ ಸರ್ಕಾರ ಶೇ.40 ರಷ್ಟು ವೆಚ್ಚ ಭರಿಸಲಿವೆ ಎಂದು ಮಾಹಿತಿ ನೀಡಿದರು. 

ಈ ಸೌಲಭ್ಯ ಪಡೆಯಲು ಸಾರ್ವಜನಿಕರು ನೊಂದಾಯಿಸಲ್ಪಟ್ಟ ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಹೊರತುಪಡಿಸಿ, ಬೇರೆ ಯಾವುದೇ ಚಿಕಿತ್ಸೆ ಪಡೆಯುವ ಮುನ್ನ ಮೊದಲು ಸರ್ಕಾರಿ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಒಂದು ವೇಳೆ ಅಲ್ಲಿ ಸೌಲಭ್ಯ ದೊರೆಯದಿದ್ದ ಪಕ್ಷದಲ್ಲಿ, ಅಲ್ಲಿಯ ವೈದ್ಯಾಧಿಕಾರಿಗಳ ಶಿಫಾರಸ್ಸು ಪತ್ರದ ಮುಖಾಂತರ ನೊಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಮುಂದಿನ ಹಂತದ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ವಿವರಿಸಿದರು.

ಈಗಾಗಲೆ ಜಿಲ್ಲೆಯಲ್ಲಿ 1650 ಜನರು ಈ ಯೋಜನೆಯಡಿ ಸೌಲಭ್ಯ ಪಡೆದುಕೊಂಡಿದ್ದಾರೆ. ಈಗಾಗಲೇ 42,600 ಆರೋಗ್ಯ ಕಾರ್ಡ್‍ಗಳನ್ನು ವಿತರಣೆ ಮಾಡಲಾಗಿದ್ದು, 24.12.2018 ರಿಂದ ಶಿವಮೊಗ್ಗ ಒನ್‍ನ ಮೂರೂ ಕೇಂದ್ರಗಳಲ್ಲೂ ಕೂಡ ಕಾರ್ಡ್ ವಿತರಣೆಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು. 

ಶೀಘ್ರದಲ್ಲಿಯೇ ಪ್ರತಿಯೊಂದು ತಾಲೂಕಿನ ಸಾರ್ವಜನಿಕ ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ಕೂಡ ಕಾರ್ಡ್ ವಿತರಣೆಗೆ ಕ್ರಮ ಕೈಗೊಳ್ಳಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು. 

ಈ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಜನೆಯ ಜಿಲ್ಲಾ ಸಂಯೋಜಕರು, ತಾಲೂಕು ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಸರ್ಕಾರದಿಂದ ನೊಂದಾಯಿಸಲ್ಪಟ್ಟ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಆರೋಗ್ಯ ಮಿತ್ರರನ್ನು ಸಂಪರ್ಕಿಸಿ ಪಡೆದುಕೊಳ್ಳಬೇಕು. ಯೋಜನೆಯ ಸದ್ಭಳಕೆ ಮಾಡಿಕೊಳ್ಳುವಂತೆ ನಾಗರಿಕರಿಗೆ ಮನವಿ ಮಾಡಿದ್ದಾರೆ. 

ಉಜ್ವಲ ಯೋಜನೆ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೊಗೆ ರಹಿತ ಅಡುಗೆಮನೆ ಎಂಬ ಕನಸಿನ್ನಿಟ್ಟುಕೊಂಡು ಪ್ರಾರಂಭಿಸಿದ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ, ಇಲ್ಲಿಯವರೆಗೆ ಶಿವಮೊಗ್ಗ ಜಿಲ್ಲೆಯಲ್ಲಿ 33,027 ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ನೀಡಲಾಗಿದೆ. 2018 ರ ಹೊಸ ಮಾರ್ಗಸೂಚಿಯನ್ವಯ ಜಿಲ್ಲೆಯಲ್ಲಿ ಅನಿಲ ಸಂಪರ್ಕ ಹೊಂದಿರದ 9,000 ಬಿಪಿಎಲ್ ಕುಟುಂಬಗಳಿದ್ದು, ಈ ಎಲ್ಲಾ ಕುಟುಂಬಗಳಿಗೆ ಆದಷ್ಟು ತ್ವರಿತವಾಗಿ ಅಡುಗೆ ಅನಿಲ ಸಂಪರ್ಕವನ್ನು ನೀಡುವಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News