ಕನ್ನಡ ಸಾಹಿತ್ಯ ಸಮ್ಮೇಳನ: ಅದ್ದೂರಿ ಮೆರವಣಿಗೆಗೆ ಚಾಲನೆ

Update: 2019-01-04 05:26 GMT

ಧಾರವಾಡ, ಜ.4: ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ಘಟ್ಟ ಮೆರವಣಿಗೆಗೆ ಕರ್ನಾಟಕ ಮಹಾವಿದ್ಯಾಲಯ ಆವರಣದಲ್ಲಿ ಬೆಳಗ್ಗೆ ಅದ್ದೂರಿ ಚಾಲನೆ ದೊರೆಯಿತು.

ಬೆಳಗ್ಗೆ 8 ಗಂಟೆಗೆ ಕಂದಾಯ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ.ದೇಶಪಾಂಡೆ ರಾಷ್ಟ್ರ ಧ್ವಜ, ರಾಜ್ಯ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ ಪರಿಷತ್ ಧ್ವಜ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ನಾಡ ಧ್ವಜಾರೋಹಣ ನೆರವೇರಿಸುವ ಮೂಲಕ ಸಾಹಿತ್ಯ ಜಾತ್ರೆ ಆರಂಭಗೊಂಡಿತು.

ಬಳಿಕ ಕೆಸಿಡಿ ಆವರಣದ ಸಂಸ್ಥಾಪಕರಾದ ಸರ್ ಸಿದ್ದಪ್ಪಕಂಬಳಿ, ಅರಟಾಳ ರುದ್ರಗೌಡರು ಹಾಗೂ ರೊದ್ದ ಶ್ರೀನಿವಾಸ ರಾಯರ ಪುತ್ಥಳಿಗಳಿಗೆ ಹಾಗೂ ಭುವನೇಶ್ವರಿ ಭಾವಚಿತ್ರಕ್ಕೆ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ, ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ, ಜಿಲ್ಲಾಧಿಕಾರಿ ದೀಪಾ ಚೋಳನ್, ಕಸಾಪ ಅಧ್ಯಕ್ಷ ಮನು ಬಳಿಗಾರ, ಜಿಪಂ ಅಧ್ಯಕ್ಷೆ ಚೈತ್ರಾ ಶಿರೂರ, ಶಾಸಕರಾದ ಶ್ರೀನಿವಾಸ ಮಾನೆ, ಅಮೃತ ದೇಸಾಯಿ ಮಾಲಾರ್ಪಣೆ ಮಾಡಿ ಗೌರವಿಸಿದರು.

ಬಳಿಕ ಅಲಂಕೃತ ಸಾರೋಟಿನಲ್ಲಿ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ, ಸತ್ಯಭಾಮಾ ಕಂಬಾರ ದಂಪತಿ ಹಾಗೂ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ ಅವರನ್ನು ಕುಳ್ಳಿರಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.

*ಕಹಳೆಗಳ ನಾದ: ಮೆರವಣಿಗೆ ಆರಂಭವಾಗುತ್ತಿದ್ದಂತೆ ಏಕಕಾಲದಲ್ಲಿ ಮೊಳಗಿದ 25ಕ್ಕೂ ಹೆಚ್ಚು ಕಹಳೆಗಳ ನಾದ ನೆರದ ಸಾವಿರಾರು ಕನ್ನಡಿಗರನ್ನು ರೋಮಾಂಚನಗೊಳಿಸಿತು.

ಡೊಳ್ಳು, ಸೋಮನ ಕುಣಿತ, ವೀರಗಾಸೆ, ಜಗ್ಗಲಿಗೆ, ಕೋಲಾಡ, ಗೊಂಬೆ ಕುಣಿತ, ನಗಾರಿ ಮತ್ತಿತರ 60ಕ್ಕೂ ಹೆಚ್ಚು ವೈವಿಧ್ಯಮಯ ಕಲೆಗಳ ಅನಾವರಣ ವಿದ್ಯಾನಗರಿಯ ರಸ್ತೆಗಳಲ್ಲಿ ಕನ್ನಡದ ಘೋಷವನ್ನು ಸಾರುತ್ತಿವೆ.

ಜಿಲ್ಲಾಧಿಕಾರಿ ದೀಪಾ ಚೋಳನ್, ಅಪರ ಜಿಲ್ಲಾಧಿಕಾರಿ ಇಬ್ರಾಹೀಂ ಮೈಗೂರ, ಮಹಾನಗರ ಪಾಲಿಕೆ ಆಯುಕ್ತ ಶಕೀಲ್ ಅಹ್ಮದ್ ಮತ್ತಿತರರು ಇದ್ದರು

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News