ಕನ್ನಡ ಪ್ರಾಥಮಿಕ ಶಿಕ್ಷಣ ರಾಷ್ಟ್ರೀಕರಣಕ್ಕೆ ಬದ್ಧ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2019-01-04 16:46 GMT

ಧಾರವಾಡ, ಜ.4: ಒಂದನೇ ತರಗತಿಯಿಂದ ಏಳನೇ ತರಗತಿವರೆಗೆ ಕನ್ನಡ ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣ ಮಾಡಬೇಕೆಂಬ ಬಗ್ಗೆ ಒಮ್ಮತಾಭಿಪ್ರಾಯ ಮೂಡಿದರೆ ರಾಷ್ಟ್ರೀಕರಣಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರತಿಪಾದಿಸಿದ್ದಾರೆ.

ಧಾರವಾಡದ ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇಂದು ಉದ್ಘಾಟಿಸಿ ಅವರು, ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳು ಕಡಿಮೆಯಾಗಿ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವ ಬಗ್ಗೆ ಅಖಿಲ ಭಾರತ 84ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಡಾ. ಚಂದ್ರಶೇಖರ ಕಂಬಾರ ಅವರು ಕಳವಳ ವ್ಯಕ್ತಪಡಿಸಿ, ಇದನ್ನು ತಡೆಗಟ್ಟಲು ಹಾಗೂ ರಾಜ್ಯ ಭಾಷೆಯ ಭವಿಷ್ಯದ ಹಿತದೃಷ್ಟಿಯಿಂದ ಒಂದನೇ ತರಗತಿಯಿಂದ ಏಳನೇ ತರಗತಿವರೆಗೆ ಕನ್ನಡ ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣ ಮಾಡಬೇಕೆಂಬ ಅಭಿಪ್ರಾಯಕ್ಕೆ ಸರ್ಕಾರದ ಸಮ್ಮತಿ ಇದ್ದು, ಈ ಬಗ್ಗೆ ಒಮ್ಮತಾಭಿಪ್ರಾಯ ಮೂಡಿದರೆ ಪ್ರಾಥಮಿಕ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಸಮ್ಮೇಳನಾಧ್ಯಕ್ಷರ ಭಾಷಣದ ಅಂಶವನ್ನು ಉಲ್ಲೇಖ ಮಾಡಿ ಮಾತನಾಡಿದ ಮುಖ್ಯಮಂತ್ರಿಯವರು, 2013-14ರಿಂದ 2017-18ರವರೆಗೆ ನಾಲ್ಕು ವರ್ಷಗಳ ಅವಧಿಯಲ್ಲಿ ಸುಮಾರು 13 ಲಕ್ಷ ಮಕ್ಕಳು ಕನ್ನಡ ಮಾಧ್ಯಮ ಸರ್ಕಾರಿ ಶಾಲೆಗಳಲ್ಲಿ ಕಡಿಮೆಯಾಗಿ ಆಂಗ್ಲ ಮಾಧ್ಯಮ ಖಾಸಗಿ ಶಾಲೆಗಳಲ್ಲಿ 15 ಲಕ್ಷ ಮಕ್ಕಳು ಹೆಚ್ಚಾಗಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದ ನಂತರ ಕನ್ನಡ ಮಾಧ್ಯಮದ ಖಾಸಗಿ ಶಾಲೆಗಳು ಆಂಗ್ಲ ಮಾಧ್ಯಮ ಶಾಲೆಗಳಾಗಿ ಪರಿವರ್ತನೆಯಾಗಿವೆ. ಅಲ್ಲದೆ ಪ್ರತಿ ವರ್ಷ ಸುಮಾರು ಒಂದೂವರೆ ಲಕ್ಷಕ್ಕಿಂತ ಹೆಚ್ಚು ಮಕ್ಕಳಿಗೆ ಸರ್ಕಾರವೇ ಶುಲ್ಕ ತುಂಬಿ ಶಿಕ್ಷಣ ಹಕ್ಕು ಕಾಯಿದೆಯಂತೆ ಆಂಗ್ಲ ಶಾಲೆಗಳಿಗೆ ಕಳುಹಿಸುತ್ತಿದೆ ಎಂದು ಸಮ್ಮೇಳನಾಧ್ಯಕ್ಷರು ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ವಿಪರ್ಯಾಸವನ್ನು ತಪ್ಪಿಸಲು ಪ್ರಾಥಮಿಕ ಪೂರ್ವ ತರಗತಿಯೊಂದಿಗೆ ಒಂದರಿಂದ ಏಳನೇ ತರಗತಿ ವರೆಗೆ ರಾಷ್ಟ್ರೀಕರಣ ಮಾಡಬೇಕು. ಸರ್ಕಾರಿ ಶಾಲೆಗಳ ಸುಧಾರೀಕರಣ ಹಾಗೂ ನಂತರದ 8ನೇ ತರಗತಿಯಿಂದ ಶಿಕ್ಷಣವನ್ನು ಖಾಸಗಿಯವರಿಗೆ ಕೊಡಬಹುದು ಎಂದು ಪ್ರತಿಪಾದಿಸಿದ್ದಾರೆ. ಈ ವಿಷಯದ ಬಗ್ಗೆ ಒಮ್ಮತಾಭಿಪ್ರಾಯ ಮೂಡಿದರೆ ಸರ್ಕಾರ ಕ್ರಮಕ್ಕೆ ಸಿದ್ಧವಿದೆ ಎಂದು ಅವರು ಹೇಳಿದರು.

ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸುವ ಉದ್ದೇಶದಿಂದ ಕೈಗೊಂಡ ಆಂಗ್ಲ ಮಾಧ್ಯಮ ಪರಿಚಯಿಸುವ ತೀರ್ಮಾನದ ಕುರಿತು ಮುಕ್ತ ಚರ್ಚೆ ಹಾಗೂ ರಚನಾತ್ಮಕ ಸಲಹೆಗಳನ್ನು ಸರ್ಕಾರ ತೆರೆದ ಮನದಿಂದ ಸ್ವೀಕರಿಸಲಿದೆ ಎಂದೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರತಿಪಾದಿಸಿದರು.

ಆರ್ಥಿಕವಾಗಿ ದುರ್ಬಲ ವರ್ಗದ ಪೋಷಕರಿಗೂ ನ್ಯಾಯ ಒದಗಿಸುವ ಹಾಗೂ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸುವ ಉದ್ದೇಶದಿಂದ ಆಂಗ್ಲ ಮಾಧ್ಯಮ ಪರಿಚಯಿಸುವ ಉದ್ದೇಶವಿದೆ. ಇದು ಪ್ರಾಯೋಗಿಕ ಹಂತ. ಈ ವಿಷಯವಾಗಿ ಭಾವಾವೇಶ ಮೀರಿ, ವಾಸ್ತವತೆ ನೆಲೆಗಟ್ಟಿನಲ್ಲಿ ಸಾಧಕ ಬಾಧಕಗಳನ್ನು ಎಲ್ಲ ಆಯಾಮಗಳಿಂದ ಪರಿಶೀಲಿಸಿ ಮುಕ್ತ ಚರ್ಚೆಯಾಗಬೇಕು. ರಚನಾತ್ಮಕ ಸಲಹೆಗಳನ್ನು ಸರ್ಕಾರ ತೆರೆದ ಮನದಿಂದ ಸ್ವೀಕರಿಸುತ್ತದೆ ಎಂದು ಅವರು ಹೇಳಿದರು.

ಈಗಾಗಲೇ ಶಿಕ್ಷಣ ಇಲಾಖೆಯು ರಾಜ್ಯದ ಎಲ್ಲ ಆಂಗ್ಲ ಮಾಧ್ಯಮ ಶಾಲೆಗಳೂ ಅಂದರೆ ಸಿಬಿಎಸ್‍ಇ, ಐಸಿಎಸ್‍ಇ ಪಠ್ಯಕ್ರಮದ ಶಾಲೆಗಳೂ ಸಹ ಕನ್ನಡವನ್ನು ಒಂದು ವಿಷಯವಾಗಿ ಬೋಧಿಸುವುದನ್ನು ಕಡ್ಡಾಯಗೊಳಿಸಿದೆ. ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಲಭ್ಯಾಭಿವೃದ್ಧಿಗೆ ಈ ವರ್ಷದ ವೆಚ್ಚಕ್ಕಾಗಿ ಒಂದು ಸಾವಿರ ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿ ರಕ್ಷಣೆ ಹಾಗೂ ಪರಂಪರೆ ಬೆಳವಣಿಗೆ ನಮ್ಮ ಸರ್ಕಾರದ ಆದ್ಯತೆ. ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂಬ ಈ ಮಾತಿನಲ್ಲಿ ನಂಬಿಕೆಯಿಟ್ಟು ಕನ್ನಡದ ಕಿಂಚಿತ್ ಸೇವೆ ಮಾಡುವ ಭಾಗ್ಯ ನನ್ನದಾಗಿರುವುದಕ್ಕೆ ಧನ್ಯನಾಗಿದ್ದೇನೆ. ಅಭಿವೃದ್ಧಿಗೆ ಪ್ರಾದೇಶಿಕ ತಾರತಮ್ಯವಿಲ್ಲದೆ ಅಖಂಡ ಕರ್ನಾಟಕ ಸಮೃದ್ಧವಾಗಬೇಕೆಂಬ ಅಚಲ ವಿಶ್ವಾಸದಿಂದ ಸರ್ಕಾರ ಆದ್ಯತೆ ಮೇಲೆ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯ ರೈತರ ಪ್ರಮುಖ ಜೀವನೋಪಾಯವಾಗಿರುವ ಕೃಷಿ ಕ್ಷೇತ್ರವನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ಶಾಶ್ವತ ಪರಿಹಾರ ಕ್ರಮಗಳನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ನಮ್ಮ ಮೈತ್ರಿ ಸರ್ಕಾರ ಹೆಜ್ಜೆ ಇಟ್ಟಿದೆ. ಇಸ್ರೇಲ್ ಮಾದರಿ ಕೃಷಿ ಪದ್ಧತಿ, ಶೂನ್ಯ ಬಂಡವಾಳ ಕೃಷಿ ಯೋಜನೆಗಳು ನಮ್ಮ ಸರ್ಕಾರ ಪ್ರಮುಖ ಪ್ರಯತ್ನಗಳು ಎಂದರು.

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು ಹಾಗೂ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ಚೆನ್ನಮ್ಮನ ಹೆಸರು ಇಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಕಲ್ಪುರ್ಗಿ ಮತ್ತು ಬೀದರ್ ನಾಗರಿಕ ವಿಮಾನ ನಿಲ್ದಾಣಗಳು ಕಾರ್ಯರಂಭವಾಗಬೇಕು. ವಿಜಯಪುರ, ಕಾರವಾರ ವಿಮಾನ ನಿಲ್ದಾಣ ನಿರ್ಮಾಣ ಉದ್ದೇಶ ಸೇರಿದಂತೆ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಈ ವರ್ಷದ ಭೀಕರ ಬರಗಾಲವನ್ನು ನಿರ್ವಹಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. 156 ತಾಲೂಕುಗಳನ್ನು ಈಗಾಗಲೇ ಬರ ತಾಲೂಕುಗಳೆಂದು ಘೋಷಿಸಲಾಗಿದೆ. ಈ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಡಾ.ಚಂದ್ರಶೇಖರ ಕಂಬಾರ, ನಿಕಟಪೂರ್ವ ಅಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮನು ಬಳಿಗಾರ್, ಸಂಸದ ಪ್ರಹ್ಲಾದ್ ಜೋಷಿ, ಸಚಿವ ಚನ್ನಬಸಪ್ಪ ಶಿವಳ್ಳಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚೈತ್ರಾ ಶಿರೂರ, ಬಸವರಾಜ ಹೊರಟ್ಟಿ, ಶಾಸಕರಾದ ಅರವಿಂದ ಬೆಲ್ಲದ, ಅಬ್ಬಯ್ಯ ಪ್ರಸಾದ್, ಅಮೃತ ದೇಸಾಯಿ, ಶ್ರೀನಿವಾಸ ಮಾನೆ, ಶಂಕರ ಪಾಟೀಲ ಮುನೇನಕೊಪ್ಪ, ಸಿ.ಎಂ.ನಿಂಬಣ್ಣವರ್, ಪ್ರೊ.ಎಸ್.ವಿ.ಸಂಕನೂರ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಹಾಪೌರ ಸುಧೀರ್ ನದಾಫ್, ಹಿರಿಯ ಲೇಖಕ ಡಾ.ಪಾಟೀಲ್‍ ಪುಟ್ಟಪ್ಪ, ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ.ಎಂ.ಬಿ.ಚೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಬಲವಂತರಾವ್ ಪಾಟೀಲ್, ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಿ.ಸಿ.ಸತೀಶ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News