ಚಿಕ್ಕಮಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತಸಂಘ ಧರಣಿ

Update: 2019-01-04 18:32 GMT

ಚಿಕ್ಕಮಗಳೂರು, ಜ.4: ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ ಮೂರು ದಿನಗಳಿಂದ ನಗರದ ಆಝಾದ್ ಪಾರ್ಕ್ ವೃತ್ತದಲ್ಲಿ ರೈತಸಂಘ ಹಮ್ಮಿಕೊಂಡಿದ್ದ ಅಹೋರಾತ್ರಿ ಧರಣಿ ಸ್ಥಳಕ್ಕೆ ಜಿಲ್ಲಾಧಿಕಾರಿ ಶುಕ್ರವಾರ ಭೇಟಿ ನೀಡಿದ್ದು, ರೈತರ ಸಮಸ್ಯೆ ಆಲಿಸಿ ಬೇಡಿಕೆಗಳ ಈಡೇರಿಕೆ ಸಂಬಂಧ ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತ ಮುಖಂಡರು ಧರಣಿ ಹಿಂಪಡೆದರು.

ಇತ್ತೀಚೆಗೆ ಮೂಡಿಗೆರೆ ತಾಲೂಕು ಕಚೇರಿ ಆವರಣದಲ್ಲಿ ರೈತ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ರೈತಸಂಘದ ಮುಖಂಡರು ಅನುಮತಿ ಪಡೆಯದೇ ಧ್ವನಿವರ್ಧಕ ಬಳಿಸಿದ್ದಾರೆ. ತಹಶೀಲ್ದಾರ್ ಹಾಗೂ ಸಿಬ್ಬಂದಿ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ಆರೋಪಿಸಿ ಸಂಘದ ಓರ್ವ ಮಹಿಳಾ ಕಾರ್ಯಕರ್ತೆ ಸೇರಿದಂತೆ ಮೂವರ ವಿರುದ್ಧ ಮೂಡಿಗೆರೆ ತಹಶೀಲ್ದಾರ್ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದು, ಇದು ಸುಳ್ಳು ಪ್ರಕರಣವಾಗಿರುವುದರಿಂದ ಮೊಕದ್ದಮೆ ಹಿಂಪಡೆಯುವುದೂ ಸೇರಿದಂತೆ ಮೂಡಿಗೆರೆ ತಾಲೂಕು ಕಚೇರಿಯಲ್ಲಿ ಕಡತ ನಾಪತ್ತೆ ಪ್ರಕರಣ, ವಿವಿಧ ಭೂ ಸಂಬಂಧಿ ಪ್ರಕರಣಗಳಿಗೆ ಪರಿಹಾರ, ಸಾರ್ವಜನಿಕರ ಕೆಲಸ ಕಾರ್ಯಗಳ ವಿಳಂಬ ಮತ್ತಿತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ ಬುಧವಾರದಿಂದ ನೂರಾರು ರೈತಸಂಘದ ಕಾರ್ಯಕರ್ತರು ಆಝಾದ್ ಪಾರ್ಕ್ ವೃತ್ತದಲ್ಲಿ ಟೆಂಟ್ ಹಾಕಿಕೊಂಡು ಅಹೋರಾತ್ರಿ ಧರಣಿ ಆರಂಭಿಸಿ, ಸಮಸ್ಯೆ ಆಲಿಸಲು ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅವರು ಶುಕ್ರವಾರ ಬೆಳಗ್ಗೆ ರೈತಸಂಘದ ಧರಣಿ ಸ್ಥಳಕ್ಕೆ ಭೇಟಿ ನೀಡಿ, ಮುಖಂಡರ ಸಮಸ್ಯೆಗಳನ್ನು ಆಲಿಸಿದರು.

ಈ ವೇಳೆ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿದ ರೈತಸಂಘದ ಮುಖಂಡ ಮಂಜುನಾಥ್‍ ಗೌಡ, ಮೂಡಿಗೆರೆ ತಾಲೂಕು ಕಚೇರಿಯಲ್ಲಿ ರೈತರ ಭೂ ಸಂಬಂಧಿ ದಾಖಲೆಗಳ ಕಡತಗಳು ಲಭ್ಯವಿಲ್ಲ. ಕೇಳಿದರೆ ನಾಪತ್ತೆಯಾಗಿವೆ ಎಂದು ಹಿಂಬರಹ ನೀಡಲಾಗುತ್ತಿದೆ. ಈ ಸಂಬಂಧ ಕಡತ ಸಂರಕ್ಷಣಾ ಕಾಯ್ದೆಯಡಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸದೇ ಭ್ರಷ್ಟ ಅಧಿಕಾರಿಗಳಿಗೆ ಜಿಲ್ಲಾಡಳಿತ ರಕ್ಷಣೆ ನೀಡುತ್ತಿದೆ, ಶಿರಸ್ತೇದಾರರೊಬ್ಬರು ಕಡತ ಕಳವು ಮಾಡಿದ್ದಾರೆಂದು ಹಿಂದಿನ ಜಿಲ್ಲಾಧಿಕಾರಿ ದೂರು ನೀಡಿದ್ದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿಲ್ಲ. ಮೂಡಿಗೆರೆ ಕೆಸವಳಲು ಎಸ್ಟೇಟ್‍ನ ಸ.ನಂ2ರಲ್ಲಿ 22 ದಲಿತರಿಗೆ ಭೂಮಿ ಮಂಜೂರಾಗಿದೆ. ಆದರೆ ಅದರ ಕಡತ ತಾಲೂಕು ಕಚೇರಿಯಲ್ಲಿಲ್ಲ. ಇದರಿಂದ ದಲಿತರಿಗೆ ಖಾಯಂ ಸಾಗುವಳಿ ಚೀಟಿ ಸಿಗದಂತಾಗಿದೆ. ಚಿಕ್ಕಮಗಳೂರು ತಾಲೂಕಿನ ನಾಗಹಳ್ಳಿ ಗ್ರಾಮದಲ್ಲಿ ದಲಿತ ಕೆಂಚಯ್ಯರಿಗೆ ಮಂಜೂರಾದ ಜಮೀನಿನ ಪಹಣಿಯನ್ನು ಕಂದಾಯಾಧಿಕಾರಿಗಳು ರದ್ದು ಮಾಡಲು ಕಾರಣವೇನು? ಮೂಡಿಗೆರೆ, ಚಿಕ್ಕಮಗಳೂರು ತಾಲೂಕು ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಗಳಿಗೆ ಸತಾಯಿಸಲಾಗುತ್ತಿದೆ. ನಕಲಿ ಸಾಗುವಳಿ ಚೀಟಿ, ಪಹಣಿಗಳನ್ನು ಸೃಷ್ಟಿಸಿ ರೈತರನ್ನು ವಂಚಿಸಲಾಗುತ್ತಿದೆ, ಕೆಲ ಕಂದಾಯಾಧಿಕಾರಿಗಳ ವಿರುದ್ಧ ಕ್ರಿಮಿನಲ್ ಆರೋಪಗಳಿದ್ದು, ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರು ಅನುಮತಿ ಕೇಳಿದ್ದರೂ ಜಿಲ್ಲಾಡಳಿತ ನಿರಾಕರಿಸಿರುವುದು ಯಾಕೆ? ವರ್ಗಾವಣೆಯಾದ ಕಂದಾಯಾಧಿಕಾರಿಗಳನ್ನು ಮತ್ತದೇ ಸ್ಥಳಕ್ಕೆ ನಿಯೋಜಿಸಿರುವುದೇಕೆಂದು ಜಿಲ್ಲಾಧಿಕಾರಿಯನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಶ್ರೀರಂಗಯ್ಯ, ಕಡತ ನಾಪತ್ತೆ ಪ್ರಕರಣ ಸಂಬಂಧ ಹೆಚ್ಚು ಮಾಹಿತಿ ಇಲ್ಲ. ಕೆಲ ಕಡತಗಳು ನಶಿಸಿ ಹೋಗಿರುವುದರಿಂದ ಮಾಹಿತಿ ಲಭ್ಯವಿಲ್ಲ. ನಿಖರವಾದ ಮಾಹಿತಿ ನೀಡಿದಲ್ಲಿ ಸೂಕ್ತ ಕ್ರಮವಹಿಸತ್ತೇನೆ. ಈ ಸಂಬಂಧ ಕೆಲ ಪ್ರಕರಣಗಳ ಬಗ್ಗೆ ಪರಿಶೀಲಿಸಿದ್ದು, ತಪ್ಪಿತಸ್ಥರನ್ನು ಅಮಾನತು ಮಾಡಲಾಗಿದೆ ಎಂದ ಅವರು, ದಲಿತರಿಗೆ ಭೂಮಿ ಹಂಚಿಕೆ ಸಂಬಂಧ ಕಂದಾಯ, ಅರಣ್ಯ ಇಲಾಖೆ ಜಂಟಿ ಸರ್ವೇಗೆ ಸೂಚಿಲಾಗಿದ್ದು, ಜ.31ರೊಳಗೆ ಸರ್ವೇ ಪೂರ್ಣಗೊಳ್ಳಲಿದೆ. ಕಂದಾಯ ಜಮೀನು ವ್ಯಾಪ್ತಿಯಲ್ಲಿರುವ ಜಮೀನುಗಳಿಗೆ 94ಸಿ ಅಡಿಯಲ್ಲಿ ಸಾಗುವಳಿ ಚೀಟಿ ಲಭ್ಯವಾಗಲಿದೆ ಎಂದರು.

ರೈತರು ಉಳುವೆ ಮಾಡಿದ್ದ ಭೂಮಿಯನ್ನು ಕಂದಾಯಾಧಿಕಾರಿಗಳು ಬೇರೆಯವರಿಗೆ ಮಂಜೂರು ಮಾಡಿರುವ ಪ್ರಕರಣ ಸಂಬಂಧ ನ್ಯಾಯಾಲಯದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಸಾಧ್ಯವಿದೆ. ತಾಲೂಕು ಕಚೇರಿಗಳಲ್ಲಿ ನಕಲಿ ದಾಖಲೆ ಸೃಷ್ಟಿಸಿ ಭೂಮಿ ಮಂಜೂರು ಮಾಡಿರುವ ಕೆಲ ಪ್ರಕರಣಗಳ ಬಗ್ಗೆ ಪರಿಶೀಲಿಸಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಕಂದಾಯ ಇಲಾಖೆ ಅಧಿಕಾರಿ ಗಿಡ್ಡೇಗೌಡ ಅವರನ್ನು ಇಂತಹ ಪ್ರಕರಣ ಸಂಬಂಧ ಅಮಾನತು ಮಾಡಲಾಗಿದೆ. ತಾಲೂಕು ಕಚೇರಿಗಳಲ್ಲಿ ಪಹಣಿಗಳನ್ನು ನಕಲು ಮಾಡಲು ಸಾಧ್ಯವಿಲ್ಲ. ಇಂತಹ ನಕಲಿ ದಾಖಲೆಗಳನ್ನು ಸಲ್ಲಿಸಿದಲ್ಲಿ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇನೆಂದ ಅವರು ತಾನು ರೈತಕುಟುಂಬದಿಂದ ಬಂದವನಾಗಿದ್ದು, ರೈತರ ಬಗ್ಗೆ ಕಾಳಜಿ ಇದೆ. ರೈತಸಂಘ ಸಲ್ಲಿಸಿರುವು ಎಲ್ಲ ಬೇಡಿಕೆಗಳ ಸಂಬಂಧ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುತ್ತೇನೆಂದು ಇದೇ ವೇಳೆ ಡಿಸಿ ಭರವಸೆ ನೀಡಿದರು.

ಜಿಲ್ಲಾಧಿಕಾರಿ ಭರವಸೆ ಮೇರೆಗೆ ರೈತಸಂಘದ ಮುಖಂಡರು, ಕಾರ್ಯಕರ್ತರು ಧರಣಿ ಹಿಂಪಡೆದರು. ಈ ವೇಳೆ ರೈತಸಂಘದ ಗುರುಶಾಂತಪ್ಪ, ಪ್ರಜ್ವಲಾ, ಕೃಷ್ಣೇಗೌಡ, ಆರ್.ಆರ್.ಮಹೇಶ್, ಸ್ವಾಮಿಗೌಡ, ಬಿಎಸ್ಪಿ ಮುಖಂಡ ರಾಧಾಕೃಷ್ಣ, ಸಿಪಿಐ ಮುಖಂಡ ರೇಣುಕಾರಾಧ್ಯ, ಅಮ್ಜದ್ ಮತ್ತಿತರರು ಉಪಸ್ಥಿತರಿದ್ದರು.

ಮೊಕದ್ದಮೆ ಬಗ್ಗೆ ಸ್ಪಷ್ಟತೆ ನೀಡದ ಜಿಲ್ಲಾಧಿಕಾರಿ 
ಶುಕ್ರವಾರ ರೈತರ ಅಹೋರಾತ್ರಿ ಧರಣಿ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ, ರೈತರ ಎಲ್ಲ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಭರವಸೆ ನೀಡಿದರಾರದರೂ ರೈತಸಂಘದ ಪ್ರಮುಖ ಬೇಡಿಕೆಯಾಗಿದ್ದ ಮೊಕದ್ದಮೆ ಹಿಂಪಡೆಯುವ ಬಗ್ಗೆ ಜಿಲ್ಲಾಧಿಕಾರಿ ಸ್ಪಷ್ಟತೆ ನೀಡಲಿಲ್ಲ. ಸಂಘದ ಮೂವರು ಸದಸ್ಯರ ಮೇಲೆ ತಹಶೀಲ್ದಾರ್ ಸುಳ್ಳು ಪ್ರಕರಣದ ದಾಖಲಿಸಿದ್ದಾರೆಂದು ರೈತಮುಖಂಡರು ಜಿಲ್ಲಾಧಿಕರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದರಾದರೂ, ಸಾರ್ವಜನಿಕವಾಗಿ ಅಧಿಕಾರಿ ಹಾಗೂ ಮಹಿಳಾ ಸಿಬ್ಬಂದಿ ವಿರುದ್ಧ ಮೈಕ್ ಬಳಸಿ ನಿಂದಿಸಿರುವ ಬಗ್ಗೆ ಅಸಮಾದಾನ ವ್ಯಕ್ತಪಡಿಸಿ, ಅನುಮತಿ ಪಡೆಯದೇ ಧರಣಿ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದ ಅವರು, ಈ ಸಂಬಂಧ ಎಸ್ಪಿ ಅವರೊಂದಿಗೆ ಚರ್ಚಿಸುತ್ತೇನೆ ಎಂದಷ್ಟೆ ಹೇಳಿದರು. ಇದರಿಂದ ಸ್ಥಳದಲ್ಲಿದ್ದ ರೈತ ಮುಖಂಡರ ಮುಖದಲ್ಲಿ ಅಸಮಾದಾನದ ಭಾವ ಎದ್ದು ಕಾಣುತ್ತಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News