ಮೂಡಿಗೆರೆ: ಕೊಲೆ ಪ್ರಕರಣದ ಆರೋಪಿ ಜೈಲಿನಲ್ಲಿ ಸಾವು

Update: 2019-01-04 18:41 GMT

ಮೂಡಿಗೆರೆ, ಜ.4: ಇಬ್ಬರು ಮಹಿಳೆಯರನ್ನು ಕೊಲೆಗೈದು ಜೈಲು ಸೇರಿದ್ದ ಪಟ್ಟಣದ ಮಠವೊಂದರಲ್ಲಿ ಸ್ವಾಮೀಜಿಯಾಗಿದ್ದ ವ್ಯಕ್ತಿಯೊಬ್ಬರು ಜೈಲಿನಲ್ಲೇ ನಿಧನರಾಗಿದ್ದಾರೆ.

ಜೀವಾವದಿ ಶಿಕ್ಷೆ ಅನುಭವಿಸಿ ಹೈಕೋರ್ಟ್‍ನಲ್ಲಿ ಕಳೆದ ವಾರ ಪ್ರಕರಣ ಖುಲಾಸೆಗೊಂಡು ಬಿಡುಗಡೆಯಾಗಬೇಕೆನ್ನುವಷ್ಟರಲ್ಲೇ ತಾನಿದ್ದ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲೇ ಗುರುವಾರ ಸಂಜೆ ಆರೋಪಿ ಮೃತಪಟ್ಟಿದ್ದಾನೆ.

ಮೂಡಿಗೆರೆ ಮಹಾಂತಿನ ಮಠದಲ್ಲಿ ಸ್ವಾಮೀಜಿಯಾಗಿದ್ದ ಧರಣೇಶ್ (45) ಎಂಬಾತ ಮೃತಪಟ್ಟ ಖೈದಿ. ಈತ ಸ್ವಾಮೀಜಿಯಾಗಿದ್ದ ವೇಳೆ 2009ರಲ್ಲಿ ಚಿನ್ನಿಗ-ಜನ್ನಾಪುರ ಗ್ರಾ.ಪಂ. ಉಪಾಧ್ಯಕ್ಷೆಯಾಗಿದ್ದ ಚಂದ್ರಾವತಿ ಮತ್ತು ಅಂದಿನ ಕಂದಾಯ ಇಲಾಖೆ ನಿರೀಕ್ಷಕ ಪೂರ್ಣೇಶ್ ಮೂರ್ತಿ ಅವರ ತಾಯಿ ಲಲಿತಮ್ಮ ಎಂಬ ವಯೋ ವೃದ್ದೆಯನ್ನು ಅವರಿಬ್ಬರ ಮೈಮೇಲಿದ್ದ ಚಿನ್ನಾಭರಣ ಕಸಿಯುವ ಸಂಚಿನಿಂದ ಕೊಲೆ ಮಾಡಿ ಜೈಲು ಸೇರಿದ್ದ. ಚಂದ್ರಾವತಿ ಅವರನ್ನು, ಅವರ ಮನೆ ಅಣಜೂರಿನಿಂದ ಮಾರುತಿ ಒಮ್ನಿ ಕಾರಿನಲ್ಲಿ ಕರೆದೊಯ್ದು ಲಿಂಗದಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆಗೈದು ಚಿನ್ನಾಭರಣ ದೋಚಿ ಶವವನ್ನು ಸಮೀಪದ ಕಾಡಿನಲ್ಲಿ ಎಸೆದು ಪರಾರಿಯಾಗಿದ್ದ. ಅದಕ್ಕೂ ಮುನ್ನವೇ ಮಠದ ಕಟ್ಟಡದೊಳಗೆ ವೃದ್ಧೆ ಲಲಿತಮ್ಮ ಅವರನ್ನು ಕೊಲೆಗೈದು ಮೈಮೇಲಿದ್ದ ಚಿನ್ನಾಭರಣ ದೋಚಿ ಚಾರ್ಮಾಡಿ ಘಾಟ್‍ನ ಪ್ರಪಾತದಲ್ಲಿ ಶವವನ್ನು ಬಿಸಾಡಿದ್ದ ಎನ್ನಲಾಗಿದೆ. ಪ್ರಕರಣ ಬೆಳಕಿಗೆ ಬಂದಾಗ ಪೊಲೀಸರು ವಾರಗಟ್ಟಲೆ ಶವಕ್ಕಾಗಿ ಶೋಧನೆ ನಡೆಸಿದ್ದರು. ಆದರೆ ಲಲಿತಮ್ಮ ಅವರ ಶವ ಪತ್ತೆಯಾಗಿರಲಿಲ್ಲ. 

ಈ ಎರಡೂ ಪ್ರಕರಣದಲ್ಲಿ ಜೈಲು ಸೇರಿದ್ದ ಸ್ವಾಮೀಜಿ ಧರಣೇಶ ಚಿಕ್ಕಮಗಳೂರು ಜೈಲಿನಲ್ಲಿ ವಿಚಾರಣಾದಿನ ಖೈದಿಯಾಗಿದ್ದ. ಕಳೆದ 5 ವರ್ಷದ ಹಿಂದೆ ಜಿಲ್ಲಾ ನ್ಯಾಯಾಲಯ ಜೀವಾವದಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಚಿಕ್ಕಮಗಳೂರು ಜೈಲಿನಲ್ಲಿದ್ದ ಈತನನ್ನು ಅನುಚಿತ ವರ್ತನೆಯಿಂದಾಗಿ ಇತ್ತೀಚೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಸೇರಿಸಲಾಗಿತ್ತು. ಕಳೆದ ವಾರ ಹೈಕೋರ್ಟ್‍ನಲ್ಲಿ ಈತನ ಕೇಸು ಖುಲಾಸೆಗೊಂಡಿತ್ತು ಎಂದು ತಿಳಿದು ಬಂದಿದ್ದು, ಇನ್ನೇನು ಬಿಡುಗಡೆಯಾಗಬೇಕೆನ್ನುವಷ್ಟರಲ್ಲಿ ಮೃತಪಟ್ಟಿದ್ದಾನೆ. ಧರಣೇಶ ಮೂಲತಃ ಮೂಡಿಗೆರೆ ಪಟ್ಟಣದ ದಿವಾಕರ, ಸರೋಜಾ ದಂಪತಿ ಪುತ್ರನಾಗಿದ್ದಾನೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News