ಇಂದಿನ ಯುವ ಪೀಳಿಗೆಗೆ ಬದುಕುವ ಕಲೆ ಗೊತ್ತಿಲ್ಲ: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ

Update: 2019-01-04 18:55 GMT

ಶಿವಮೊಗ್ಗ, ಜ. 4: ಇಂದಿನ ಯುವ ಪೀಳಿಗೆಗೆ ಬದುಕುವ ಕಲೆ ಗೊತ್ತಿಲ್ಲ. ಜೊತೆಗೆ ನೈತಿಕ ಮೌಲ್ಯಗಳ ಅಧಃಪತನವಾಗಿರುವುದರಿಂದ ಸಮಾಜದಲ್ಲಿ ಮಹಿಳಾ ದೌರ್ಜನ್ಯ, ಅತ್ಯಾಚಾರ, ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹದಂತಹ ಪಿಡುಗುಗಳು ಮುಂದುವರೆದಿವೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಅಭಿಪ್ರಾಯಪಟ್ಟಿದ್ದಾರೆ. 

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆವತಿಯಿಂದ ಶುಕ್ರವಾರ ನಗರದ ಎನ್‍ಇಎಸ್ ಮೈದಾನದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಮಹಿಳಾ ಸಮಾವೇಶ ಕಾರ್ಯಮ ಉದ್ಘಾಟಿಸಿದ ನಂತರ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.

ಮಹಿಳೆ ಸಶಕ್ತಳಾಗಿದ್ದು, ಎಂತಹ ಸಮಸ್ಯೆ ಎದುರಾದರೂ ಆತ್ಮವಿಶ್ವಾಸದಿಂದ ಎದುರಿಸಬೇಕು. ಯಾವುದೇ ಕಾರಣಕ್ಕೂ ಎದೆಗುಂದಬಾರದು ಎಂದು ಹೇಳಿದ ಅವರು, ಮಹಿಳೆಯರ ಶ್ರೇಯೋಭಿವೃದಿಗೆ ಧರ್ಮಸ್ಥಳ ಕ್ಷೇತ್ರದ ಕಾರ್ಯ ಶ್ಲಾಘನೀಯವಾಗಿದೆ. ಸರ್ಕಾರಗಳು ಮಾಡುವ ಕೆಲಸವನ್ನು ಧರ್ಮಸ್ಥಳ ಕ್ಷೇತ್ರದವರು ಮಾಡುತ್ತಿದ್ದಾರೆ. ಇದರ ಸದುಪಯೋಗವನ್ನು ಮಹಿಳೆಯರು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು. 

ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಗ್ರಾಮೀಣ ಮಹಿಳೆಯರು ಮೂಢ ನಂಬಿಕೆಗಳಿಂದ ಹೊರಬರಬೇಕು. ಅಕ್ಷರ ಗೊತ್ತಿರುವುದೇ ಜ್ಞಾನವಲ್ಲ. ಯಾವ ರೀತಿ ಬದುಕಬೇಕು ಎಂಬ ತಿಳಿವಳಿಕೆಯೇ ನಿಜವಾದ ಜ್ಞಾನ. ಇದರಿಂದ ಮಾತ್ರ ಪ್ರತಿಯೊಬ್ಬರ ಪ್ರಗತಿ ಸಾಧ್ಯ ಎಂದರು. 

ಸಾಧನೆಯ ಪರಿಶ್ರಮ, ಪ್ರಗತಿ ಹಂಬಲ ಹೊಂದುವ ಮೂಲಕ ಆರ್ಥಿಕ ಅಭಿವೃದ್ಧಿ ಕಾಣಬೇಕು. ಇದಕ್ಕೆ ಸ್ಪಷ್ಟ ಯೋಚನೆ, ಯೋಜನೆ ಹಾಗೂ ಕಾರ್ಯಕ್ರಮ ಇರಬೇಕು. ಪ್ರಗತಿ ಹಾಗೂ ಬದಲಾವಣೆ ಪ್ರತಿಯೊಬ್ಬ ಮಹಿಳೆಗೂ ಬೇಕು. ಇದಕ್ಕೆ ಧರ್ಮಸ್ಥಳ ಸಂಘ ಅವಕಾಶ ಕಲ್ಪಿಸಿಕೊಡುತ್ತಿದೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿಬಿ.ಎಸ್.ಯಡಿಯೂರಪ್ಪ ಮಾತನಾಡಿ, ಧರ್ಮಸ್ಥಳ ಕ್ಷೇತ್ರದ ವೀರೇಂದ್ರ ಹೆಗ್ಗಡೆಯವರು ವಿವಿಧ ಸಮಾಜಮುಖಿ ಕೆಲಸಗಳ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುತ್ತಿದ್ದಾರೆ. ಇದು ನಿಜಕ್ಕೂ ಅಭಿನಂದನೀಯ ಕಾರ್ಯವಾಗಿದೆ. ಧರ್ಮಸ್ಥಳ ಸಂಘದ ಮೂಲಕ ಸಾವಿರಾರು ಸ್ತ್ರೀಯರು ಸ್ವಾವಲಂಬಿ ಜೀವನ ನಡೆಸುವಂತಾಗಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ ಎಂದರು. 

ಸಮಾರಂಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಜಿ.ಪಂ. ಅಧ್ಯಕ್ಷೆ ಜ್ಯೋತಿ ಕುಮಾರ್, ಮೇಯರ್ ಲತಾ ಗಣೇಶ್, ಉಪ ಮೇಯರ್ ಚನ್ನಬಸಪ್ಪ ಸೇರಿದಂತೆ ಮೊದಲಾದವರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News