ದಾವಣಗೆರೆ: ಪೂಜೆ ನೆಪದಲ್ಲಿ ವೃದ್ಧೆಯ ಚಿನ್ನಾಭರಣ ದೋಚಿದ ಖದೀಮರು

Update: 2019-01-04 19:06 GMT

ದಾವಣಗೆರೆ,ಜ.4: ಪೂಜೆ ನೆಪದಲ್ಲಿ ವೃದ್ಧೆಯೊಬ್ಬರ ಬಂಗಾರವನ್ನು ಅಪರಿಚಿತರು ದೋಚಿರುವ ಘಟನೆ ಗುರುವಾರ ಬಿ.ಟಿ.ಗಲ್ಲಿ ಬಳಿ ನಡೆದಿದೆ. 

ಇ.ಎಂ. ಚಂದನ(58) ವಂಚನೆಗೆ ಒಳಗಾದವರು. ಅವರ ಬಳಿಯಿದ್ದ  45 ಗ್ರಾಂನ ಮಾಂಗಲ್ಯ ಸರ, 3 ಗ್ರಾಂ ಚಿನ್ನದ ಉಂಗುರವನ್ನು ಕಳ್ಳರು ಅಪಹರಿಸಿಕೊಂಡು ಹೋಗಿದ್ದಾರೆ.  

ಶಾಲೆಯಿಂದ ತಮ್ಮ ಮೊಮ್ಮಗನನ್ನು ಕರೆದುಕೊಂಡು ಮನೆಗೆ ಹೋಗುತ್ತಿರುವಾಗ ಇಸ್ಲಾಂಪೇಟೆ ಮಸೀದಿ ಕ್ರಾಸ್ ಬಳಿ ಬಂದ 35 ರಿಂದ 40 ವರ್ಷ ವಯೋಮಾನದ ಇಬ್ಬರು ಅಪರಚಿತರು ಹಿಂದಿ ಭಾಷೆಯಲ್ಲಿ ಮಾತನಾಡುತ್ತಾ ನಾವು ಹರಿದ್ವಾರದ ಪೂಜಾರಿಗಳು, ನಿಮಗೆ ಒಳ್ಳೆಯದಾಗಲಿ ಎಂದು ನಂಬಿಕೆ ಬರುವಂತೆ ಮಾತನಾಡುತ್ತಾ, ಒಬ್ಬಾತ ಚಂದನಾ ಮುಖಕ್ಕೆ ನೀರು ಸಿಂಪಡಿಸಿದ್ದಾನೆ. ಇನ್ನೊಬ್ಬ ಮಾಂಗಲ್ಯ ಸರ ಮತ್ತು ಉಂಗುರವನ್ನು ಮೊಮ್ಮಗನ ಬ್ಯಾಗ್‍ನಲ್ಲಿ ಹಾಕುವಂತೆ ಹೇಳಿದ್ದಾನೆ. 

ಅದರಂತೆ ಚಂದನ ಚಿನ್ನದ ಮಾಂಗಲ್ಯ ಸರ, ಉಂಗುರವನ್ನು ಮೊಮ್ಮಗನ ಬ್ಯಾಗ್‍ನಲ್ಲಿ ಹಾಕಿದ್ದಾರೆ. 10 ಹೆಜ್ಜೆ ಮುಂದೆ ಹೋಗಿ, ಬ್ಯಾಗ್‍ನ್ನು ಪೂಜೆ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ. ಅದರಂತೆ ಚಂದನಾ ಮತ್ತು ಮೊಮ್ಮಗ 10 ಹೆಜ್ಜೆ ಮುಂದೆ ಹೋಗಿ ಹಿಂತಿರುಗಿ ನೋಡಿದಾಗ ಅವರಿಬ್ಬರು ಆಟೋ ರಿಕ್ಷಾದಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. 

ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News