ಬಿಜೆಪಿಯನ್ನು ಸಮರ್ಥಿಸಿಕೊಳ್ಳಲು ಮುಂದಾದ ಮಾಳವಿಕಾ: ಸಭಿಕರಿಂದ ಆಕ್ರೋಶ

Update: 2019-01-05 13:25 GMT

ಧಾರವಾಡ, ಜ.5: ಧಾರವಾಡದಲ್ಲಿ ನಡೆಯುತ್ತಿರುವ 84 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ವೈಚಾರಿಕತೆ ಮತ್ತು ಅಸಹಿಷ್ಣುತೆ ಕುರಿತ ವಿಚಾರಗೋಷ್ಠಿಯಲ್ಲಿ ನಟಿ ಮಾಳವಿಕಾ ಅವಿನಾಶ್ ಪ್ರಭುತ್ವ ಮತ್ತು ಅಸಹಿಷ್ಣುತೆ ವಿಷಯ ಕುರಿತು ಮಾತನಾಡುತ್ತಿದ್ದ ಸಂದರ್ಭದಲ್ಲಿ ಬಿಜೆಪಿ ಹಾಗೂ ಸಂಘಪರಿವಾರವನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದರಿಂದ ಆಕ್ರೋಶಗೊಂಡ ಸಭಿಕರು ಅವರ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆಯಿತು.

ಮಾಳವಿಕಾ ಮಾತನಾಡುತ್ತಾ, ಮಂಗಳೂರಿನಲ್ಲಿ ಆರೆಸ್ಸೆಸ್ ಮುಖಂಡರ ಹತ್ಯೆಯನ್ನು, ಬೆಂಗಳೂರಿನಲ್ಲಿ ನಡೆದ ಸಂಘಪರಿವಾರದ ಮುಖಂಡ ಕೊಲೆ, ಕೇರಳದಲ್ಲಿ ನಡೆದ ಆರೆಸ್ಸೆಸ್‍ನ ನಾಯಕರ ಹತ್ಯೆ, ಹೀಗೆ ಕೊಲೆಗಳನ್ನು ಮಾಡುತ್ತಾರೆ ಎನ್ನುತ್ತಾ ಸಹಿಷ್ಣುತೆ ಎಲ್ಲಿದೆ ಎಂದು ಪ್ರತಿಪಾದಿಸಿದರು. ಅಲ್ಲದೆ, ಪ್ರಧಾನಿ ಮೋದಿ ಹಿಂದೂ ರಾಷ್ಟ್ರೀಯವಾದಿ ಎಂದರೆ ತಪ್ಪೇನಿದೆ ಎಂದು ಸಮರ್ಥಿಸಿಕೊಂಡು ಭಾಷಣ ಮುಂದುವರಿಸಿದ್ದ ಸಂದರ್ಭದಲ್ಲಿ ಸಭಿಕರ ಗುಂಪೊಂದು 'ನಿಮಗೆ ಕೊಟ್ಟಿರುವ ವಿಷಯ ಯಾವುದು. ನೀವೇನು ಮಾತನಾಡುತ್ತಿದ್ದೀರಾ' ಎಂದು ಪ್ರತಿಭಟಿಸಿದರು.

ಸಭೆಯ ನಡುವೆ ಪೊಲೀಸರ ಮಧ್ಯಪ್ರವೇಶದಿಂದ ಪ್ರತಿಭಟನಾಕಾರರು ಸುಮ್ಮನಾದರೂ ಮಾಳವಿಕಾ ಭಾಷಣವನ್ನು ಮುಂದುವರಿಸಲು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಯಾವುದೇ ಕಾರಣಕ್ಕೂ ಅವರ ಭಾಷಣ ಮಾಡಬಾರದು ಎಂದು ಒತ್ತಾಯಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಾಳವಿಕಾ ನಿಮ್ಮಂತಹ ಅಸಹಿಷ್ಣುತರ ನಡುವೆ ಭಾಷಣ ಮಾಡುವುದಿಲ್ಲ ಎಂದು ಘೋಷಣೆ ಮಾಡಿದರು. ಆದರೆ, ಸಭೆಯಲ್ಲಿದ್ದ ಬೇರೊಂದು ಗುಂಪು ಭಾಷಣ ಮಾಡುವಂತೆ ಒತ್ತಾಯ ಮಾಡಿತು. ಅಲ್ಲದೆ, ವಿರೋಧಿಸಿದವರಿಗೆ “ನಿಮಗೆ ಇಷ್ಟವಿಲ್ಲದಿದ್ದರೆ ಸಭೆಯಿಂದ ಹೊರಗೆ ಹೋಗಿ. ಅವರು ಪೂರ್ತಿಯಾಗಿ ಮಾತನಾಡಿದ ನಂತರ ಪ್ರಶ್ನೆಗಳಿದ್ದರೆ ಕೇಳಬಹುದು” ಎಂದು ತಿಳಿಸಿದರು.

ಅನಂತರ ಭಾಷಣ ಮುಂದುವರಿಸಿದ ಮಾಳವಿಕಾ, ಕೇರಳದಲ್ಲಿ ದೇವರ ಮೇಲೆ ನಂಬಿಕೆ ಇಲ್ಲದವರು ಮಹಿಳೆಯರ ದೇವಾಲಯಗಳ ಪ್ರವೇಶ ಸಂಬಂಧ ಮಧ್ಯಪ್ರವೇಶ ಮಾಡುತ್ತಾರೆ. ಆದರೆ, ಅಸಹಿಷ್ಣುತೆ ಬಗ್ಗೆಯೂ ಮಾತನಾಡುತ್ತಾರೆ. ಅಲ್ಲಿಯೇ ಜನರನ್ನು ಹತ್ಯೆ ಮಾಡುತ್ತಾರೆ ಎಂದ ಅವರು, ರಷ್ಯಾದಲ್ಲಿ ರೂಪಗೊಂಡ ಮಾಕ್ಸಿಸಂ ಅಲ್ಲೇ ನಾಶವಾಗಿದೆ. ಹೀಗಾಗಿ, ನಮ್ಮ ದೇಶಕ್ಕೆ ಅಂಬೇಡ್ಕರ್ ವಾದ, ಬುದ್ಧ, ಬಸವ ಬೇಕಾಗಿದ್ದಾರೆ ಎಂದು ಪ್ರತಿಪಾದಿಸಿದರು.

ಕಾನೂನು ಮೀರಿ ಅಭಿವ್ಯಕ್ತಿ ಸ್ವಾತಂತ್ರ್ಯ ಬಳಸುವುದು ಸಲ್ಲ: ಸಂವಿಧಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ವಾಕ್ ಸ್ವಾತಂತ್ರ್ಯವನ್ನು ನೀಡಲಾಗಿದೆ. ಅದು ಎಲ್ಲರ ಹಕ್ಕೂ ಆಗಿದೆ. ಆದರೆ, ಕಾನೂನಿನ ಚೌಕಟ್ಟಿನಲ್ಲಿ 124 ಎ, ಬಿ, 153 ಸೇರಿದಂತೆ ಹಲವು ಪರಿಚ್ಛೇಧನಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಯಾವುದಕ್ಕೆ ಬಳಸಿಕೊಳ್ಳಬಾರದು ಎಂಬುದು ಇದೆ. ಅದರಲ್ಲಿ ಪ್ರಚೋಧನಾಕಾರಿ ಭಾಷಣ, ಧರ್ಮ ನಿಂದನೆ, ಒಬ್ಬ ವ್ಯಕ್ತಿ ಕುರಿತು ಕೀಳಾಗಿ, ಸರಕಾರದ ವಿರುದ್ಧ ಸೇರಿ ಅನೇಕ ಅಂಶಗಳನ್ನು ಉಲ್ಲೇಖಿಸಲಾಗಿದೆ ಎಂದು ಮಾಳವಿಕಾ ಮಾತುಗಳಿಗೆ ಪರೋಕ್ಷವಾಗಿ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ.ಡಿ.ವಿ.ಗುರುಪ್ರಸಾದ್ ಕಿವಿಮಾತು ಹೇಳಿದರು.

ವೈಚಾರಿಕ ಸಾಹಿತ್ಯ ಎಂಬುದು ವ್ಯವಸ್ಥೆಯನ್ನು ಪ್ರಶ್ನಿಸುವುದು ಹಾಗೂ ಸಮಾಜದಲ್ಲಿನ ಮೌಢ್ಯ, ಮೂಢನಂಬಿಕೆ, ಕಂದಾಚಾರ, ಅನಾಚಾರಗಳನ್ನು ಪ್ರಶ್ನಿಸುತ್ತಾ ಸಮಾಜ ಬದಲಾವಣೆಗೆ ಕಡೆಗೆ ಕೊಂಡ್ಯೊಯ್ಯುವುದಾಗಿದೆ. ಮಾನವೀಯ ಬೆಳವಣಿಗೆಗೆ ವೈಚಾರಿಕ ಸಾಹಿತ್ಯ ಅಗತ್ಯವಾಗಿದ್ದು, ಸಮಾಜ ವಿಕೃತಿಯಿಂದ ದೂರವಾಗಿ ವೈಚಾರಿಕತೆ ಕಡೆಗೆ ಸಾಗುವುದೇ ಇದರ ಉದ್ದೇಶವಾಗಿದೆ. ವೈಚಾರಿಕ ಸಾಹಿತ್ಯಕ್ಕೆ ಯಾವುದೇ ಚೌಕಟ್ಟುಗಳಿಲ್ಲ. ವೈಚಾರಿಕ ಸಾಹಿತ್ಯ ಪ್ರಕಟವಾದ ಕೂಡಲೇ ತೀವ್ರ ಪ್ರತಿರೋಧ ಎದುರಿಸುತ್ತದೆಯೋ ಅದೇ ನಿಜವಾದ ಸಾಹಿತ್ಯವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News